ಬಿಗ್ ಸಿನೆಮಾಸ್ ನಲ್ಲಿ “ನಿಮ್ಮೆಲ್ಲರ ಆಶೀರ್ವಾದ” ಪ್ರೀಮಿಯರ್ ಶೋ
ಮಂಗಳೂರು: ವಿಭಿನ್ನ ಕಥೆ, ಹೊಸ ಕಲಾವಿದರನ್ನೊಳಗೊಂಡ “ನಿಮ್ಮೆಲ್ಲರ ಆಶೀರ್ವಾದ” ಕನ್ನಡ ಚಿತ್ರದ ಪ್ರೀಮಿಯರ್ ಶೋ ಗುರುವಾರ ಸಂಜೆ ನಗರದ ಬಿಗ್ ಸಿನೆಮಾಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು, “ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಆಗಿದ್ದು ನಾಯಕ ನಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಹೀಗಾಗಿ ಇಡೀ ಚಿತ್ರರಂಗಕ್ಕೆ ಶುಭವಾಗಲಿ ಇನ್ನಷ್ಟು ಉತ್ತಮ ಗುಣಮಟ್ಟದ ಸಿನಿಮಾಗಳು ಬರಲಿ” ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ನಾಯಕ ನಟ ಪ್ರತೀಕ್ ಶೆಟ್ಟಿ ಅವರು, “ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಹೊಸ ಪ್ರತಿಭೆಗಳ ಹೊಸ ಪ್ರಯತ್ನ ಖಂಡಿತ ಗೆಲ್ಲಲಿದೆ. ಎಲ್ಲರೂ ಕುಟುಂಬ ಸಮೇತ ಸಿನಿಮಾ ನೋಡಿ ಆನಂದಿಸಿ” ಎಂದರು.
ಹಿರಿಯ ರಂಗಕರ್ಮಿ ದೇವದಾಸ್ ಕಾಪಿಕಾಡ್ ಮಾತನಾಡಿ, “ಪ್ರತೀಕ್ ಶೆಟ್ಟಿ ಒಳ್ಳೆಯ ನಟ. ಆದರೆ ಅವಕಾಶ ಕೊರತೆಯಿಂದ ಪೂರ್ಣ ಪ್ರಮಾಣದ ನಾಯಕನಾಗಿರಲಿಲ್ಲ. ಈ ಸಿನಿಮಾದಲ್ಲಿ ನಾಯಕ ನಟರಾಗಿದ್ದು ತುಳುವರು, ಕನ್ನಡಿಗರು ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು.
ವೇದಿಕೆಯಲ್ಲಿ ಮಂಗಳೂರು ಕಮಿಷನರ್ ಕುಲದೀಪ್ ಆರ್. ಜೈನ್, ನಿರ್ಮಾಪಕರಾದ ವರುಣ್ ಹೆಗ್ಡೆ, ಉದಯ ಕುಮಾರ್ ಕುಮಾರ್ ಹೆಗ್ಡೆ, ಹಿರಿಯ ರಂಗಕರ್ಮಿ ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್, ಇಂದ್ರಾಳಿ ಜಯಕರ ಶೆಟ್ಟಿ, ರವಿರಾಜ್ ಹೆಗ್ಡೆ, ಮಿಥುನ್ ಶೆಟ್ಟಿ, ನಾಯಕ ನಟ ಪ್ರತೀಕ್, ಮೈಮ್ ರಾಮದಾಸ್, ಪುರುಷೋತ್ತಮ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.