ಪದ್ಮರಾಜ್ ಅವರು ಕಾಂಗ್ರೆಸ್ ಪಕ್ಷದ ಎಲ್ಲರ ಒಮ್ಮತದ ಅಭ್ಯರ್ಥಿ : ಮಾಜಿ ಸಚಿವ ರಮಾನಾಥ ರೈ
ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು ಎ.3ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿ ಬಿ.ರಮಾನಾಥ ರೈ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವ ಮೊದಲು ಚರ್ಚ್, ಮಸೀದಿ, ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪದ್ಮರಾಜ್ ಅವರು ಕಾಂಗ್ರೆಸ್ ಪಕ್ಷದ ಎಲ್ಲರ ಒಮ್ಮತದ ಅಭ್ಯರ್ಥಿ. ಇದರಲ್ಲಿ ಯಾವುದೇ ಭಿನ್ನಭಿಪ್ರಾಯ ಇಲ್ಲ ಎಂದು ಮಾಜಿ ಸಚಿವ ರೈ ಸ್ಪಷ್ಟಪಡಿಸಿದರು.
ಬಿಜೆಪಿ ಸಂಸದರಿಂದ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಏನೂ ಇಲ್ಲ. ದಕ್ಷಿಣ ಕನ್ನಡದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ಅಭಿವೃದ್ಧಿ ಕಾರ್ಯಗಳಲ್ಲಿ ನಂ.1 ಸಂಸದ, ಕೋಟಿಗಟ್ಟಲೆ ಅನುದಾನವನ್ನು ಕೇತ್ರದ ಅಭಿವೃದ್ಧಿಗೆ ತಂದಿದ್ದಾರೆ ಎಂದು ಅವರ ಪಕ್ಷದವರು ಹೇಳುತ್ತಿದ್ದಾರೆ. ಅವರು ಅಷ್ಟೊಂದು ಅಭಿವೃದ್ಧಿ ಮಾಡಿದ್ದರೆ ಅವರಿಗೆ ಯಾಕೆ ಟಿಕೆಟ್ ನಿರಾಕರಿಸಲಾಯಿತು ಎಂದು ರಮಾನಾಥ ರೈ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ ಮತ್ತು ಮಹಾಬಲ ಮಾರ್ಲ,ಪಕ್ಷದ ಧುರೀಣರಾದ ಇಬ್ರಾಹೀಂ ಕೊಡಿಜಾಲ್, ಮಿಥುನ್ ರೈ, ನವೀನ್ ಡಿ ಸೋಜ, ಬಿ ಎಲ್ ಪಿ ಪದ್ಮನಾಭ, ಅಶೋಕ್ ಡಿ ಕೆ, ರಮಾನಂದ ಪೂಜಾರಿ, ಟಿ ಕೆ ಸುಧೀರ್, ಜಯಶೀಲಾ ಅಡ್ಯಂತಾಯ, ನಝೀರ್ ಬಜಾಲ್, ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.