ಪಡುಬಿದ್ರೆ : ಟಿಪ್ಪರ್ ನೊಳಗೆ ಹೋಗಿ ಆವಾಂತರ ಸೃಷ್ಟಿಸಿದ ಹಾವು
ರಸ್ತೆ ದಾಟುತ್ತಿದ್ದ ನಾಗರ ಹಾವೊಂದು ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ನೊಳಗೆ ಹೋಗಿ ಅವಾಂತರ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಬಳಿ ನಡೆದಿದೆ.
ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದನ್ನು ವಾಹನದ ಅಡಿಗೆ ಬೀಳದಂತೆ ರಕ್ಷಿಸುವ ನಿಟ್ಟಿನಲ್ಲಿ ದಾಮೋದರ್ ಪಾಂಗಳ ಮತ್ತು ಸ್ಥಳೀಯರು ಅವರು ಹಾವನ್ನು ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶಕ್ಕೆ ತೆರಳಲು ದಾರಿ ಮಾಡಿಕೊಟ್ಟಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್ ಚಾಲಕನೋರ್ವ ಟಿಪ್ಪರ್‍ನ್ನು ಸರ್ವೀಸ್ ರಸ್ತೆಯಲ್ಲಿ ಇರಿಸಿ ನಾಗರ ಹಾವು ರಕ್ಷಣಾ ಕಾರ್ಯಾಚರಣೆ ವೀಕ್ಷಣೆ ಮಾಡುತ್ತಿದ್ದರು.
ಹೆದ್ದಾರಿ ಬಿಟ್ಟು ಸರ್ವೀಸ್ ರಸ್ತೆಗೆ ಬಂದಿದ್ದ ಹಾವು ಟಿಪ್ಪರ್‍ನ ಕೆಳಗೆ ಬಂದಿದ್ದು ಅಲ್ಲಿಂದ ನೇರವಾಗಿ ಟಿಪ್ಪರ್‍ನ ಒಳಗೆ ಪ್ರವೇಶಿಸಿತ್ತು. ಇದನ್ನು ಗಮನಿಸಿದ ಟಿಪ್ಪರ್ ಚಾಲಕ ಗಂಗಾಧರ್ ವಿಷಯ ಕೇಳಿ ದಂಗಾಗಿದ್ದಾರೆ. ಚಾಲಕ ಸೇರಿದಂತೆ ಸ್ಥಳೀಯರು ನಾಗರ ಹಾವನ್ನು ಟಿಪ್ಪರ್‍ನ ಒಳಗಿನಿಂದ ಓಡಿಸಲು ಪ್ರಯತ್ನಿಸಿದ್ದು ಈ ಪ್ರಯತ್ನದಲ್ಲಿ ಎಲ್ಲರೂ ವಿಫಲರಾಗಿದ್ದರು. ಬಳಿಕ ಉರಗತಜ್ನ ಗೋವರ್ಧನ್ ಅವರು ಸ್ಥಳಕ್ಕೆ ಧಾವಿಸಿ ಟಿಪ್ಪರ್‍ನ ಒಳಗಿನಿಂದ ಹಾವನ್ನು ಹೊರಗೆ ತೆಗೆದು, ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.