ಪಡುಬಿದ್ರಿ: ಮದ್ಯ ಸೇವಿಸಿ ಪೊಲೀಸರ ಅತಿಥಿಯಾದ ವಾಹನ ಚಾಲಕ
ರಾತ್ರಿ ಹೊತ್ತು ಗ್ಯಾಸ್ ಸಾಗಾಟ ವಾಹನವೊಂದನ್ನು ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿಯಲ್ಲೇ ನಿಲ್ಲಿಸಿ ಮದ್ಯ ಸೇವಿಸಲು ಹೋದ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ.
ಮೂಡಬಿದರೆಯದ್ದು ಎನ್ನಲಾದ ಎಚ್‌ಪಿ ಅನಿಲ ಸಾಗಾಟ ವಾಹನವನ್ನು ಅದರ ಚಾಲಕ ಕಟಪಾಡಿ ಪೇಟೆಬಳಿ ಹೆದ್ದಾರಿಯಲ್ಲೇ ನಿಲ್ಲಿಸಿ ತೆರಳಿದ್ದು, ಸ್ಥಳಕ್ಕೆ ಬಂದ ಕಟಪಾಡಿಯ ಉಪ ಠಾಣಾ ಪೊಲೀಸ್ ಒರ್ವರು ಸುಮಾರು ಅರ್ಧ ಗಂಟೆ ಕಾದು ಆ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕಂಠಪೂರ್ತಿ ಕುಡಿದು ಬಂದ ಚಾಲಕ ತಾನು ಕುಡಿದೇ ಇಲ್ಲ ಎಂಬುದಾಗಿ ಪೊಲೀಸರಲ್ಲಿ ವಾದಿಸುತ್ತಿದ್ದಾಗ ಸ್ಥಳದಲ್ಲಿ ಸಾರ್ವಜನಿಕರು ಸೇರಿ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿದ್ದಲ್ಲದೆ ಮದ್ಯ ಸೇವಿಸಿ ಬಂದ ಚಾಲಕನ್ನನ್ನು ತರಾಟೆಗೆ ತೆಗೆದುಕೊಂಡರು. ಅದೇ ವೇಳೆ ಚಾಲಕನ ಪರವಾಗಿ ವಾದಿಸಲು ಮುಂದಾದ ಕೆಲವರ ಮಾತಿಗೆ ಮನ್ನಣೆ ನೀಡಲು ಮುಂದಾದ ಪೊಲೀಸ್‌ಗೆ ಮೇಲಾಧಿಕಾರಿಗಳ ಎಚ್ಚರಿಕೆ ಕರೆ ಬಂದ ಹಿನ್ನಲೆಯಲ್ಲಿ ಬೇರೊಬ್ಬ ಚಾಲಕರ ಸಹಾಯದಿಂದ ಲಾರಿ ಸಹಿತ ಚಾಲಕನನ್ನು ಕಾಪು ಠಾಣೆಗೆ ಸಾಗಿಸಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.