ಪುತ್ತೂರು: ಬಿಜೆಪಿ ವತಿಯಿಂದ ನಿಕಟಪೂರ್ವ ರಾಜ್ಯಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ
ಪುತ್ತೂರು: ರಾಷ್ಟ್ರೀಯ ವಿಚಾರಧಾರೆಯಲ್ಲಿ ಬೆಳೆದ ತಾನು ಕೊಟ್ಟಿರುವ ಜವಾಬ್ದಾರಿಯಲ್ಲಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ, ಬದಲಾಗಿ ಆದರ್ಶವಾಗಿ, ಯಾವುದೇ ಚ್ಯುತಿ ಬಾರದಂತೆ, ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ ಎಂದು ಬಿಜೆಪಿ ನಿಕಪಟೂರ್ವ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪುತ್ತೂರಿನ ರೋಟರಿ ಸಭಾಭವನದಲ್ಲಿ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಯೇ ಬಿಜೆಪಿಯ ಮೂಲ ಸಿದ್ಧಾಂತ. ಸೋತಿದ್ದೇವೆ ಎಂದು ವಿಚಲಿತರಾಗದೆ ಸಂಘಟನೆ ಬಲಪಡಿಸುವ ಆತ್ಮವಿಶ್ವಾಸ ನಮ್ಮದು. ಮುಂದಿನ ಚುನಾವಣೆ ಭಾರತ ಹಾಗೂ ಜಗತ್ತಿನಲ್ಲಿ ಭಾರತದ ಬಲಾಢ್ಯತೆಗೆ ಪ್ರಮುಖ ಪಾತ್ರ ವಹಿಸುವುದರಿಂದ ಎಲ್ಲಿಯೂ ತಪ್ಪು ಹೆಜ್ಜೆ ಇಡದೆ ನಮ್ಮ ಸಂಸದರು ಇನ್ನಷ್ಟು ಹೆಚ್ಚು ಮತದಿಂದ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಹಿಂದುತ್ವದ ನೆಲೆಯಲ್ಲಿ ಸಂಸದರಾಗಿ, ಪ್ರಭಾವಿ ರಾಜ್ಯಾಧ್ಯಕ್ಷರಾಗಿ ಗುರುತಿಸಿಕೊಂಡವರು ನಳಿನ್. 40 ಸಾವಿರದಿಂದ ಹೆಚ್ಚಳಗೊಂಡು 2.70 ಲಕ್ಷ ಮತಗಳಿಂದ ಗೆಲುವು ಸಾಧಿಸುವ ಮೂಲಕ ಜನರ ವಿಶ್ವಾಸ, ಅಭಿವೃದ್ಧಿ ಪರ ಕೆಲಸಗಳಿಂದ ಅವರು ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಾದ ಜಯಶ್ರೀ ಮತ್ತು ತಂಡಕ್ಕೆ ಜಿಲ್ಲಾಧ್ಯಕ್ಷರು ಅಭಿನಂದಿಸಿದರು.ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಬಿಜೆಪಿ ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷ ರಾಮದಾಸ್ ಬಂಟ್ವಾಳ, ಪುತ್ತೂರು ನಗರ ಮಂಡಲ ಉಪಾಧ್ಯಕ್ಷ ಇಂಧುಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.