ಪಡುಬಿದ್ರಿ : ಅಪಘಾತವಾದ ಕಾರನ್ನುಕಿಲೋ ಮೀಟರ್ ದೂರಕ್ಕೆ ಎಳೆದುಕೊಂಡು ಹೋದ ಟಿಪ್ಪರ್

ಟಿಪ್ಪರೊಂದರ ಹಿಂಭಾಗಕ್ಕೆ ಡಿಕ್ಕಿಯಾಗಿ ಸಿಲುಕಿಕೊಂಡ ಕಾರನ್ನು ಸುಮಾರು ಒಂದು ಕೀ.ಮೀ. ದೂರಕ್ಕೆ ಎಳೆದುಕೊಂಡೋದ ಘಟನೆ ಹೆಜಮಾಡಿ ಕನ್ನಾಂಗಾರಿನಲ್ಲಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ.
ತಲೆ, ಕೈ, ಕಾಲು, ಮೂಗು ಸಹಿತ ದೇಹದ ಕೆಲ ಭಾಗಗಳಿಗೆ ಗಾಯಗೊಂಡ ಸಾಗರ ಮೂಲದ ಜಾಫರ್ ಖಾನ್, ಶಹೀನಾ ಹಾಗೂ ಯಾಸೀರ್ ಖಾನ್. ಇವರು ಸ್ಯಾಂಡ್ರೋ ಕಾರಿನಲ್ಲಿ ಸಾಗರದಿಂದ ಮಂಗಳೂರಿಗೆ ಹೋಗುತ್ತಿದ್ದು, ಪಡುಬಿದ್ರಿ ದಾಟಿ ಕನ್ನಾಂಗಾರಿನಲ್ಲಿ ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಧಾನಿಸಿದಾಗ ವೇಗವಾಗಿ ಮುನ್ನುಗ್ಗಿದ ಕಾರು ಟಿಪ್ಪರ್ ಹಿಂಭಾಗಕ್ಕೆ ಡಿಕ್ಕಿಯಾಗಿ ಸಿಲುಕಿಕೊಂಡಿದೆ.

ಕಿವಿ ಸಮಸ್ಯೆ ಹೊಂದಿದ್ದ ಎನ್ನಲಾದ ಟಿಪ್ಪರ್ ಚಾಲಕನ ಗಮನಕ್ಕೆ ಈ ಅಪಘಾತ ಬಾರದ ಹಿನ್ನಲೆಯಲ್ಲಿ ತನ್ನ ಪಾಡಿಗೆ ತಾನು ಮುಂದೋಗುತ್ತಿದ್ದು, ಕಾರಿನ ಪ್ರಯಾಣಿಕರು ಬೊಬ್ಬೆ ಹಾಕುತ್ತಿದ್ದನ್ನು ಗಮನಿಸಿದ ಅದರ ಹಿಂದಿನಿಂದ ಬಂದ ಕಾರು ಪ್ರಯಾಣಿಕರು ಬಹಳ ಪ್ರಯತ್ನಪಟ್ಟು ಟಿಪ್ಪರ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಆದರೆ ಅದಾಗಲೇ ಟಿಪ್ಪರ್ ಒಂದು ಕೀ.ಮೀ. ದೂರ ಪ್ರಯಾಣಿಸಿದೆ. ತಕ್ಷಣ ಕಾರಿನಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆದು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂಬುದಾಗಿ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.
