ಪಣಪಿಲದಲ್ಲಿ ಮತ್ಸ್ಯ ಮಿಲನ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ: ಮೀನು ಕೃಷಿಕರ ದಿನದ ಅಂಗವಾಗಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ.ಬೀದರ್, ಭಾ.ಕೃ.ಸಂ.ಪ. ಕೃಷಿ ವಿಜ್ಞಾನ ಕೇಂದ್ರ ದ.ಕ.ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಇವುಗಳ ವತಿಯಿಂದ ಮೀನು ಸಾಕಾಣಿಕೆ ಮಾಹಿತಿ ಕಾರ್ಯಾಗಾರ ಹಾಗೂ ಮೀನು ಹಿಡಿಯುವ ಕಾರ್ಯಕ್ರಮ “ಮತ್ಸ್ಯ ಮಿಲನ” ಪಣಪಿಲ ಕೊಟ್ಟರಿಬೆಟ್ಟು ರಾಜ್ ಫಿಶ್ ಫಾರ್ಮಿಂಗ್‍ನಲ್ಲಿ ನಡೆಯಿತು.

ಮಂಗಳೂರು ಕೆ.ವಿ.ಕೆ ಯ ಮೀನುಗಾರಿಕೆ ವಿಭಾಗದ ವಿಜ್ಞಾನಿ ಡಾ.ರವೀಂದ್ರ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮೀನುಗಾರಿಕೆ ಲಾಭದಾಯಕ ಕೃಷಿಯಾಗಿದೆ. ದ.ಕ ಜಿಲ್ಲೆಯಲ್ಲಿ ಒಳಗಾಡು ಮೀನುಗಾರಿಕೆ ಮತ್ತು ಮೀನುಪಾಲನೆಗೆ ಹೆಚ್ಚಿನ ಬೇಡಿಕೆ ಇದೆ. ಕೃಷಿ ಹೊಂಡದಲ್ಲೂ ವಿವಿಧ ರೀತಿಯ ಮೀನಿನ ಮರಿಗಳನ್ನು ಸಾಕುವುದರಿಂದ ಪರ್ಯಾಯ ರೀತಿಯಲ್ಲಿ ಆದಾಯ ಗಳಿಸಬಹುದು ನೀರಾವರಿಗೂ ಆದ್ಯತೆಯನ್ನು ನೀಡಿದಂತ್ತಾಗುತ್ತದೆ ಎಂದರು.

ಮಂಗಳೂರು ಕೆವಿಕೆಯ ಹಿರಿಯ ವಿಜ್ಞಾನಿ ಡಾ.ರಮೇಶ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 1957 ಜು.10ರಂದು ಇಬ್ಬರು ವಿಜ್ಞಾನಿಗಳು ನದಿಯಲ್ಲಿ ಸಿಕ್ಕಿದಂತಹ ಗೆಂಡೆ ಮೀನುಗಳನ್ನು ತಂದು ಕೃಷಿ ಸಂಶೋಧನ ಕೇಂದ್ರಕ್ಕೆ ತಂದು ಇಂಜೆಕ್ಷನ್ ಕೊಟ್ಟು ಮರಿ ಮಾಡಿದ ದಿನವನ್ನು ಮತ್ಸ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೀನು ಕೃಷಿಕರಿಗಾಗಿ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ ಮತ್ತು ಮೀನು ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮತ್ತು ಆದಾಯ ದ್ವಿಗುಣ ಮಾಡುವ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದರು.

ದರೆಗುಡ್ಡೆ ಗ್ರಾ.ಪಂ.ಸದಸ್ಯ ಮುನಿರಾಜ ಹೆಗ್ಡೆ , ದರೆಗುಡ್ಡೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿನೋಧರ ಪೂಜಾರಿ, ಪ್ರಗತಿಪರ ಕೃಷಿಕ,ಶಿರ್ತಾಡಿ ಗ್ರಾ.ಪಂನ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜೇಶ್ ಕೋಟ್ಯಾನ್, ಕೊಟ್ಟಾರಿಬೆಟ್ಟು ಮನೆಯ ಯಜಮಾನ ದೇವರಾಜ ಕೋಟ್ಯಾನ್ ಉಪಸ್ಥಿತರಿದ್ದರು. ನಂತರ ಬಲೆ ಹಾಕಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಯಿತು.
