ಬಾಲ ಬಸುರಿಯರ ಲೋಕ

ಕರ್ನಾಟಕದಲ್ಲಿ 49,000 ಅಪ್ರಾಪ್ತ ಗರ್ಭಿಣಿಯರು ಇದ್ದಾರೆ. ಇದು ಬಿಗಡಾಯಿಸಿರುವ ಸಮಸ್ಯೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಹೇಳಿದ್ದಾರೆ. ಕಲ್ಯಾಣ ಕರ್ನಾಟಕವೆಂಬೊ ಮಾಜೀ ಹೈದರಾಬಾದ್ ಕರ್ನಾಟಕ ಮತ್ತು ಗೌಡರ ಮಂಡ್ಯ ಜಿಲ್ಲೆಯಲ್ಲಿ ಬಾಲ ಬಸುರಿಯರ ಸಂಖ್ಯೆ ಅಗಣಿತ ಎಂದೂ ಅವರು ಹೇಳಿದ್ದಾರೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಮರು ಸಮೀಕ್ಷೆ ನಡೆಸುವ ಕಜ್ಜದಲ್ಲಿ ಅವರು ಈಡುಗೊಂಡಿದ್ದಾರೆ. ಬಾಲ ಬಸುರಿಯರು ಒಂದು ಜಾಗತಿಕ ಸಮಸ್ಯೆ. ಬಾಲ್ಯ ವಿವಾಹ, ಪ್ರೀತಿಸಿ ಬಸುರಿಸಿ ಮೋಸ, ಅತ್ಯಾಚಾರ ಇವು ಮೂರು ಬಾಲ ಬಸುರಿಯರಿಗೆ ಇಲ್ಲವೇ ಅಪ್ರಾಪ್ತ ವಯಸ್ಕ ಗರ್ಭಿಣಿಯರಿಗೆ ಕಾರಕಗಳು.

ಈಗ ಜಾಗತಿಕವಾಗಿ 18ರ ಪ್ರಾಯ ತುಂಬದ ಬಾಲಕಿ ಗರ್ಭಿಣಿಯಾದರೆ ಅದು ಅಪ್ರಾಪ್ತೆಯ ಗರ್ಭ, 18ರ ಪ್ರಾಯಕ್ಕೆ ಮೊದಲು ಮದುವೆಯಾದರೆ ಅದು ಬಾಲ್ಯ ಲಗ್ನ. ಈ ವಯಸ್ಸು ಕಾಲ ಕಾಲಕ್ಕೆ ಬದಲಾಗಿದೆ. ಭಾರತದಲ್ಲಿ ಮೊದಲು ಪಾಸಾದ ಬಾಲ್ಯ ವಿವಾಹ ನಿಷೇಧ ಕಾನೂನು ಶಾರ್ದಾ ಕಾನೂನು. ಹರ್ ಬಿಲಾಸ್ ಸಾರ್ದಾ ಪ್ರಸ್ತಾಪದ ಮೇಲೆ ಅದು 1929ರ ಸೆಪ್ಟೆಂಬರ್ 28ರಂದು ಜಾರಿಗೆ ಬಂತು. ಅದರಲ್ಲಿ ಮದುವೆಯ ವಯಸ್ಸು ಹೆಣ್ಣಿಗೆ 14, ಗಂಡಿಗೆ 18. ಆ ಕಾನೂನಿನಂತೆ ಬಸುರಿಯಾದ ಬಾಲಕಿಯರು ಬಾಲ ಬಸುರಿಯರು ಆಗಿರಲಿಲ್ಲ. ಇರಾನಿನಲ್ಲಿ ಮದುವೆಯ ವಯಸ್ಸು ಹೆಣ್ಣಿಗೆ 13, ಗಂಡಿಗೆ 15 ಎಂದು ಇದೆ. ಇಲ್ಲೂ 18ರೊಳಗಿನ ಗರ್ಭಿಣಿಯರು ಬಾಲ ಬಸುರಿಯರು ಅಲ್ಲ. ಜಗತ್ತಿನ ಬಹುತೇಕ ಕಡೆ ಈಗಲೂ ಬಾಲ್ಯ ವಿವಾಹ ನಿಷೇಧ ಕಾನೂನು ಇಲ್ಲ.

ಅತಿ ಮುಂದುವರಿದ ದೇಶ ಎನ್ನುವ ಅಮೆರಿಕ ಸಂಯುಕ್ತ ಸಂಸ್ಥಾನದ 50 ರಾಜ್ಯಗಳಲ್ಲಿ ಬಾಲ್ಯ ವಿವಾಹ ಇದೆ. 2017ರಲ್ಲಷ್ಟೆ 10 ಯುಎಸ್‍ಎ ರಾಜ್ಯಗಳು ಬಾಲ್ಯ ವಿವಾಹ ನಿಷೇಧಿಸಿ ಕಾನೂನು ಮಾಡಿವೆ. ಪ್ರಪಂಚದಲ್ಲಿ ಪ್ರತಿಯೊಂದು ನಿಮಿಷದಲ್ಲಿ 23 ಹಾಗೂ 2 ಸೆಕೆಂಡಿಗೆ ಒಂದರಂತೆ ಬಾಲ್ಯ ವಿವಾಹ ನಡೆಯುತ್ತವೆ. ಇವೆಲ್ಲ ಬಾಲ ಬಸುರಿಯರಿಗೆ ಕಾರಣ ಆಗುತ್ತವೆ. ಮುಖ್ಯ ಕಾರಣ ಗಂಡು ಲೋಕವು ಧರ್ಮ ಪತ್ನಿ ಬಯಸುತ್ತದೆ ಆದರೆ ತಾನು ಧರ್ಮ ಪತಿ ಆಗಲು ತಯಾರಿಲ್ಲ. ಎಲ್ಲರೂ ಊರು ಗೂಳಿ ಅಲ್ಲದಿದ್ದರೂ ಅವರಲ್ಲಿ ಆ ಮನೋಭಾವ ಕಂಡು ಬರುತ್ತದೆ. ಕೆಲವರು ಮಾತ್ರ ಅದರ ಮೇಲೆ ಹತೋಟಿ ಹೊಂದಿದ್ದಾರೆ. ಧರ್ಮ ಪತ್ನಿ ಎಂದರೆ ಏನು. ತನ್ನ ಅಧೀನ, ತನ್ನ ಧರ್ಮ ಅನುಸರಿಸುವ ಪತಿವ್ರತೆ ಆಗಿರಬೇಕು. ಪತಿವ್ರತೆ, ಗರತಿ ಬೇಕು. ಪತಿವ್ರತ, ಗರತ ಇರಬೇಕು ಎಂದು ಇಲ್ಲ.

ಮನುಜ ಹುಟ್ಟುವಾಗಲೇ ದರ್ಮಕ್ಕೆ ಸಿಗುವುದು ಧರ್ಮ, ಜಾತಿ. ಆಮೇಲೆ ಯಾವುದೂ ದರ್ಮಕ್ಕೆ ಸಿಗುವುದಿಲ್ಲ. ಗಂಡ ಬೇಕೆಂದರೆ ನಾನಾ ರೂಪದ ಲಕ್ಷಗಟ್ಟಲೆ ವರದಕ್ಷಿಣೆ ದರ ಕೊಡಬೇಕು. ಆ ಲಕ್ಷಗಟ್ಟಲೆ ಹಣವನ್ನು ಮದುವೆ ಆಗುವ ಹೆಣ್ಣಿನ ಹೆಸರಿನಲ್ಲೇ ಬ್ಯಾಂಕಿನಲ್ಲಿ ಇಟ್ಟರೆ ಆಕೆ ಬಡ್ಡಿಯಲ್ಲೇ ಬದುಕಬಹುದು. ಮದುವೆಯಾಗಿ ಸಂಬಳ ಕೊಡದ ಮನೆಗೆಲಸದವಳನ್ನು ಪಡೆಯುವ ಗಂಡಸು ಬುದ್ಧಿ ಬಲಿತ ಹೆಣ್ಣನ್ನು ಬಯಸುವುದಿಲ್ಲ. ಬಾಲ ಬಸುರಿಯರು ತಾವೇ ಮಕ್ಕಳಾಗಿರುವುದರಿಂದ ಮಕ್ಕಳ ಪಾಲನೆ ಅರಿಯರು. ದೈಹಿಕವಾಗಿ ಅವರು ಮೂತ್ರಪಿಂಡ ಮತ್ತು ಗರ್ಭಕಂಠದ ಒತ್ತಡ, ನೆತ್ತರುಕೊರತೆ ಮೊದಲಾದ ತೊಂದರೆಗಳಿಗೆ ಒಳಗಾಗುತ್ತಾರೆ. ಕೋಟಿ ಚೆನ್ನಯ ಪಾಡ್ದನದಲ್ಲಿ ಒಂದು ಕತೆ ಇದೆ. ಕೇದಗೆಯು ಮದುವೆ ಆಗುವುದಕ್ಕೆ ಮೊದಲು ದೊಡ್ಡವಳಾದುದರಿಂದ ಆಕೆಯನ್ನು ಕಾಡಿಗೆ ಬಿಡುತ್ತಾರೆ. ಗಂಡು ದೊಡ್ಡವಳಾಗದ ಹೆಣ್ಣನ್ನು ಯಾಕೆ ಬಯಸುತ್ತಾನೆ ಎಂದರೆ ಅದು ಆಕೆ ಲೈಂಗಿಕ ಕ್ರಿಯೆ ನಡೆಸಿಲ್ಲ ಎನ್ನುವುದಕ್ಕೆ ಸರ್ಟಿಫಿಕೇಟ್. ನಮ್ಮಲ್ಲಿ ಇಂತಾ ಪದ್ಧತಿ ಇದ್ದ ಮಾಹಿತಿ ಇಲ್ಲ. ಗುಜರಾತ್ ಮಹಾರಾಷ್ಟ್ರ ಗಡಿಯ ಕನ್ನಾರ ಬುಡಕಟ್ಟು ಜನರಲ್ಲಿ ಮದುವೆಯಾಗದೆ ಋತುಮತಿ ಆದರೆ ಕೆಲವು ದಿನ ಕಾಡಲ್ಲಿ ಕೂರಿಸುವರು ಎನ್ನುವುದು ವಿದೇಶೀಯರ ದಾಖಲೆ ಹೇಳುತ್ತದೆ.

ಜಗತ್ತಿನ ಬಾಲ್ಯ ವಿವಾಹಗಳಲ್ಲಿ 42% ತೆಂಕಣ ಏಶಿಯಾದಲ್ಲಿ ನಡೆಯುತ್ತದೆ. ಪ್ರಪಂಚದ ಬಾಲ್ಯ ವಿವಾಹದಲ್ಲಿ ಮತ್ತು ಬಾಲ ಬಸುರಿಯರಲ್ಲಿ ಮೂರನೆಯ ಒಂದು ಭಾಗ ಭಾರತೀಯರಾಗಿದ್ದಾರೆ. ಆಫ್ರಿಕಾ ಖಂಡದ ನೈಗರ್ ದೇಶ ಜನಸಂಖ್ಯಾ ಪ್ರಮಾಣದ ರೀತ್ಯಾ ವಿಶ್ವದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಮತ್ತು ಬಾಲ ಬಸುರಿಯರನ್ನು ಕಾಣುವ ದೇಶ. ಜನಸಂಖ್ಯಾ ಶೇಕಡಾವಾರಿನಂತೆ ಭಾರತ ಎರಡನೆಯ ಸ್ಥಾನದಲ್ಲಿದೆ. 15ರೊಳಗಿನ ಹುಡುಗಿಯರ ಮದುವೆ ಮತ್ತು ಬಸುರಿನಲ್ಲಿ ಬಾಂಗ್ಲಾದೇಶ ಮುಂದೆ ಇದೆ. ಭಾರತದಲ್ಲಿ 2006ರ ಬಾಲ್ಯ ವಿವಾಹ ಕಾಯ್ದೆ ವಿಧಿ 12ರ ಪ್ರಕಾರ 18 ದಾಟದವರು ಮದುವೆ ಆಗುವುದು ಕಾನೂನು ಬಾಹಿರ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಮದುವೆಯು ಸಂತೋಷ, ಶಾಂತಿ, ಸೌಹಾರ್ದ ಮತ್ತು ಭದ್ರತೆಯನ್ನು ನೀಡಬೇಕು. ಬಲವಂತದ, ಒತ್ತಾಯದ ಮದುವೆಗಳು ಇವು ಯಾವುದನ್ನೂ ನೀಡುವುದಿಲ್ಲ ಎಂದಿದ್ದಾರೆ. ಪ್ರವಾದಿವರ್ಯರು ತಾನೇ ತನಗಿಂತ ಹಿರಿಯ ವಿಧವೆಯನ್ನು ಮದುವೆ ಆದವರು.

ಸಣ್ಣ ಹೆಣ್ಣುಗಳನ್ನು ಬಿಟ್ಟು ಹನಿ ಟ್ರ್ಯಾಪ್ ಮಾಡುವುದು ಒಂದು ಚಾರಿತ್ರಿಕ ರೋಗ. ಚಾಣಕ್ಯನೂ. ಇದನ್ನು ಮಾಡಿದಂತೆ ಕಾಣುತ್ತದೆ. ಆಧುನಿಕವಾಗಿ ಹೀಗೆ ಬಾಲಕಿಯ ಬಿಟ್ಟು ಸುಲಿಗೆ, ಪೆÇೀಕ್ಸೋ ಎಂದು ಬೆದರಿಸುವ ಹಲವರು ಕಾಣಿಸುತ್ತಾರೆ. ಬಿಡುವುದು ಮುಟ್ಟಿದರೆ ರೇಪ್ ಎನ್ನುವುದು ಇವರ ಜಾಲ. ಆದರೆ ಬಾಲ್ಯ ವಿವಾಹದ ಕಾರಣಗಳು ಬೇರೆ. ಹಿರಿಯರು ಬೇಗ ಜವಾಬ್ದಾರಿ ಕಳಚಿಕೊಳ್ಳಲು ಬಯಸುವುದು, ದೂರವಾಗದಂತೆ ಸಂಬಂಧದ ಒಳಗೆ ಗಂಟು ಹಾಕಲು ಬಯಸುವುದು, ಸ್ನೇಹ ಮತ್ತು ಅಧಿಕಾರ ಸಂಬಂಧ ಉಳಿಸಲು ಬಯಸುವುದು ಬಾಲ್ಯ ವಿವಾಹದ ಕಾರಣಗಳಾಗಿವೆ. ಕೆಲವು ಕಡೆ ಮಾವನ ಮಗಳು, ಅಕ್ಕನ ಮಗಳು ಬೇರೆ ಮದುವೆ ಆದರೆ ಕೊಲೆ ನಡೆದುದಿದೆ. ಬಹಳ ಹಿಂದೆ ಬಾಲ್ಯ ವಿವಾಹದ ನೆನಪೇ ಇಲ್ಲದೆ ಬೆಳೆದವರು ಇದ್ದಾರೆ.

ನಮ್ಮ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶಗಳಲ್ಲಿ ಹೆಣ್ಣು ಮಕ್ಕಳು ಮುಂದು. ಕಾಲೇಜಿಗೆ ಅವರ ಸಂಖ್ಯೆ ಏಕೆ ಕಡಿಮೆ ಆಗುತ್ತದೆ? ಸಂಪ್ರದಾಯದ ಮದುವೆಯ ಗಂಟು ಅವರನ್ನು ಹಟ್ಟಿಯ ಗೂಟಕ್ಕೆ ಕಟ್ಟಿರುತ್ತದೆ. ಲೋಕ ತಿಳಿಯುವುದಕ್ಕೆ ಮೊದಲು ಮದುವೆ ಮಾಡಿದರೆ ಮಾತ್ರ ಮಾತು ಕೇಳುತ್ತಾಳೆ ಎನ್ನುವುದೂ ಇದಕ್ಕೆ ಕಾರಣವಾಗಿದೆ. 18ರವರೆಗೆ ಕಡ್ಡಾಯ ಶಿಕ್ಷಣ ಎಂದರೂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವಿಲ್ಲ. ಗೀತೆಯು ಹೆಣ್ಣುಗಳನ್ನೆಲ್ಲ ಪಾಪ ಯೋನಿಜರು ಎಂದಿದೆ. ಹಾಗಾಗಿ ಆಕೆಗೆ ಯಾವ ಜಾತಿಯಲ್ಲೂ ಸಮಾನತೆ ಇಲ್ಲ. ಆದ್ದರಿಂದ ಮೇಲು ಜಾತಿಯ ಹೆಚ್ಚು ಓದಿದವರೆಲ್ಲ ವಿಜಾತಿ ಮದುವೆ ಆಗುತ್ತಾರೆ. ಅರ್ಚಕರು ಈಗ ವಧು ಅರಸಿ ಮಹಿಳಾ ನಿಲಯಗಳಿಗೆ ಹೋಗುವ ಹೊಸ ಬೆಳವಣಿಗೆ ಒಳ್ಳೆಯದು.

ಬಾಲ ಬಸುರಿಯರಲ್ಲಿ 56% ಆ ಬಾಲಕಿಯರು ಬಯಸಿದ್ದು ಅಲ್ಲ. ಹಾಗಾಗಿ 55 ಶೇಕಡಾದಷ್ಟು ಬಸಿರಳಿಸು ಅರ್ಥಾತ್ ಗರ್ಭಪಾತ ನಡೆಯುತ್ತದೆ. ಇವೆಲ್ಲ ಬಹುತೇಕ ಅಸುರಕ್ಷಿತ. ಲೋಕದಲ್ಲಿ ಪ್ರಸ್ತುತ 65 ಕೋಟಿ ಹೆಣ್ಣು ಮಕ್ಕಳು, 15 ಕೋಟಿ ಹುಡುಗರು ಪ್ರಾಯ ತುಂಬದೆ ಮದುವೆಯಾಗಿ ಕಣ್ಕಣ್ಣು ಬಿಡುತ್ತಿದ್ದಾರೆ. ಹೆಣ್ಣಿಗೆ ಸ್ವಾತಂತ್ರ್ಯ ಕೊಡಲು ಯಾವ ಧರ್ಮವೂ ತಯಾರಿಲ್ಲ. ಆಕೆಗೆ ಅರಿವು ಕೊಡಲು ಮೊದಲು ತಯಾರಿಲ್ಲ. ಅರಿವೇ ಗುರು ಎಂಬುದು ಹೆಣ್ಣು ಲೋಕದಲ್ಲಿ ಬೇರೂರಿದ ಬಳಿಕ ಮಾತ್ರ ಇದಕ್ಕೆಲ್ಲ ಪರಿಹಾರ ಕಾಣುವುದು ಸಾಧ್ಯ ಎನ್ನಬಹುದು.

Related Posts

Leave a Reply

Your email address will not be published.