ಪುತ್ತೂರಿಗೆ ಸಮಗ್ರ ಕುಡಿಯುವ ನೀರು ಪೂರೈಕೆ : ನಗರಸಭೆಯ ಪರಿಶೀಲನಾ ಸಭೆಯಲ್ಲಿ ತೀವ್ರ ಟೀಕೆ
ಪುತ್ತೂರು: ಪುತ್ತೂರಿಗೆ ಸಮಗ್ರ ಕುಡಿಯುವ ನೀರು ಪೂರೈಕೆ ಮಾಡಲು ಸುಮಾರು 117 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಕಾಮಗಾರಿ ಅನುಷ್ಠಾನದಲ್ಲಿ ವ್ಯಾಪಕ ಅಸಮರ್ಪಕತೆ ತೋರುತ್ತಿರುವ ಅಂಶಗಳು ಬಯಲಾಗಿವೆ.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರಸಭೆಯಲ್ಲಿ ನಡೆದ ಜಲಸಿರಿ ಯೋಜನೆಯ ಪರಿಶೀಲನಾ ಸಭೆಯಲ್ಲಿ ಈ ಅಂಶ ತೀವ್ರ ಟೀಕೆಗೆ ಗುರಿಯಾಯಿತು. ಶಾಸಕ ಮಠಂದೂರು, ನಗರಸಭೆ ಅಧ್ಯಕ್ಷರಾದ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಭಾಮಿ ಅಶೋಕ್ ಶೆಣೈ. ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಸೇರಿದಂತೆ ಪ್ರಮುಖರು ಕೆಯುಐಡಿಎಫ್‍ಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತೀವ್ರ ತರಾಟೆಗೆತ್ತಿಕೊಂಡರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‍ಸಿ) ಸಾರಥ್ಯದಲ್ಲಿ ಜಲಸಿರಿ ಯೋಜನೆ ಜಾರಿಗೆ ಬರುತ್ತಿದೆ. ಈಗಾಗಲೇ ಉಪ್ಪಿನಂಡಿಯ ನೆಕ್ಕಿಲಾಡಿ ಕಿಂಡಿ ಅಣೆಕಟ್ಟಿನಿಂದ ಪೈಪ್‍ಲೈನ್ ಮೂಲಕ ಪುತ್ತೂರಿಗೆ ಸರಬರಾಜಾಗುತ್ತಿರುವ ನೀರಿನ ಲೈನ್‍ಗೆ ಸಮರ್ಥ ಪರ್ಯಾಯ ಲೈನನ್ನು ಸಮಗ್ರವಾಗಿ ರಚಿಸಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಓವರ್ಹೆಡ್ ಟ್ಯಾಂಕ್‍ಗಳು, ಪೈಪ್‍ಲೈನ್‍ಗಳನ್ನು ಅಳವಡಿಸಲಾಗುತ್ತಿದೆ. ಮೊದಲೆರಡು ಹಂತದ ಯೋಜನೆಯಲ್ಲಿ ನೀರು ತಲುಪದ ಭಾಗಗಳಿಗೂ ಜಲಸಿರಿಯಲ್ಲಿ ನೀರು ಕೊಡುವ ಗುರಿ ಹೊಂದಲಾಗಿದೆ.
2019ರ ಜ. 11ರಂದು ಕಾಮಗಾರಿ ಆರಂಭಗೊಂಡಿದ್ದು, ವಿಸ್ತರಿತ ಅವಧಿಯನ್ನೂ ಸೇರಿಸಿದರೆ 2023ರ ಮಾರ್ಚ್ 10ರಂದು ಮುಗಿಸಬೇಕಿದೆ. ಕೆಲಸದ ಸ್ಥಿತಿ ನೋಡಿದರೆ ಇನ್ನು 6 ತಿಂಗಳಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಫೆ.17ರ ಬಜೆಟ್ ಬೆನ್ನಲ್ಲೇ ನೆಕ್ಕಿಲಾಡಿಯಿಂದ ಸೀಟೀ ಗುಡ್ಡೆಗೆ ನೀರು ಹರಿಸುವ ಮೊದಲ ಹಂತ ಉದ್ಘಾಟಿಸುವ ಉದ್ದೇಶವಿದೆ ಎಂದರು. ಆ ಹೊತ್ತಿಗೆ ಕಾಮಗಾರಿ ಮುಗಿಸಲು ಅಸಾಧ್ಯ ಎಂದು ಅಧಿಕಾರಿಗಳು, ಗುತ್ತಿಗೆದಾರ ಸಂಸ್ಥೆ ಪ್ರತಿನಿಧಿ ಹೇಳಿದರು.
ನಿಮ್ಮ ಕೆಲಸದ ಬಗ್ಗೆ ಆರೋಪಗಳ ಸುರಿಮಳೆಯೇ ಇದೆ. ಈಗಾಗಲೇ ನಾಗರಿಕರಿಂದ 67 ದೂರುಗಳು ಬಂದಿದೆ. ಪ್ರತೀ ವಾರ ಆರೇಳು ದೂರು ಬರುತ್ತಲೇ ಇದೆ. ಸಮರ್ಪಕ ಕೆಲಸ ಮಾಡಿ. ಪೈಪ್‍ಲೈನ್ ಪೂರ್ತಿಯಾಗದೆ ಹಳೆ ಲೈನ್‍ಗೆ ಲಿಂಕ್ ಕೊಡಬೇಡಿ. ಇದರಿಂದ ಹಳೆಯ ಲೈನ್‍ನಲ್ಲೂ ಲೋ ಪ್ರೆಶರ್ ಉಂಟಾಗಿ ನೀರು ಬರುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಎಲ್ಲ ಪೂರ್ತಿಯಾದ ಮೇಲೆ ಲಿಂಕ್ ಕೊಡಿ. ಅಲ್ಲಿಯವರೆಗೆ ಟ್ಯಾಂಕರ್ನಲ್ಲಿ ನೀರು ತಂದು ಸುರಿದು ತಪಾಸಣೆ ಮಾಡುತ್ತಿರಿ. ವಾರಕ್ಕೊಮ್ಮೆ ನಗರಸಭೆ ಅಧ್ಯಕ್ಷರ ನೇತೃತ್ವದ ತಂಡ ಕಾಮಗಾರಿ ಪರಿಶೀಲನೆ ಮಾಡುತ್ತಿರಿ ಎಂದು ಸೂಚನೆ ನೀಡಿದರು. ಹೊಸ ಪೈಪ್‍ಲೈನ್ ಮೂಲಕ ಹೊಸದಾಗಿ 1500 ಸಂಪರ್ಕ ನೀಡಲಾಗಿದೆ. ಹಳತೂ ಸೇರಿದಂತೆ 6,500 ಸಂಪರ್ಕ ಜೋಡಿಸಲಾಗಿದೆ. ವರ್ಷಗಳ ಹಿಂದಿನ ಹಳೆಯ ಪೈಪ್‍ಗಳಲ್ಲಿ ಕೆಸರು ತುಂಬಿದೆ ಎಂದು ಅಧಿಕಾರಿಗಳು, ಗುತ್ತಿಗೆದಾರರು ನುಡಿದರು.
ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್, ಜಲಸಿರಿ ಯೋಜನೆಯ ಹಿರಿಯ ಎಂಜಿನಿಯರ್ ಜಯರಾಮ್ ವೇದಿಕೆಯಲ್ಲಿದ್ದರು. ಕೆಯುಐಡಿಎಫ್‍ಸಿ ಅಧಿಕಾರಿಗಳು, ಗುತ್ತಿಗೆದಾರ ಪ್ರತಿನಿಧಿಗಳು, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.