ಪುತ್ತೂರು: ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ಪ್ರಕರಣ, ಆರು ಮಂದಿ ಆರೋಪಿಗಳ ಬಂಧನ
ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿ, ದರೋಡೆ ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಅವರು ಪುತ್ತೂರು ಎಎಸ್‍ಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರಕರಣವನ್ನು ಭೇದಿಸಿದ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಕಿಣಿಯರ ಪಾಲು ನಿವಾಸಿ ಸುಧೀರ್(38), ಕೇರಳ ರಾಜ್ಯದ ಕಾಸರಗೋಡು ಪೈವಳಿಕೆ ಸಮೀಪದ ಮಂಜೇಶ್ವರ ಗ್ರಾಮದ ಅಟ್ಟೆಗೋಳಿ ಮಂಜಳ್ತೋಡಿ ನಿವಾಸಿ ಕಿರಣ್ ಟಿ (29), ಕಾಸರಗೋಡು ಜಿಲ್ಲೆಯ ಕಾಂಞಗಾಡ್ ಸಮೀಪದ ಮೂವರಿಕುಂಡ ಕಂಡತ್ತೀಲ್ ವೀಡು ನಿವಾಸಿ ಸನಾಲ್ ಕೆ.ವಿ ( 34), ಕಾಸರಗೋಡು ತಾಲೂಕಿನ ಎಡನಾಡು ಗ್ರಾಮದ ಮುಗು ಸೀತಂಗೋಳಿ ರಾಜೀವ ಗಾಂಧಿ ಕಾಲೋನಿ ನಿವಾಸಿ ಮಹಮ್ಮದ್ ಫೈಝಲ್ (37), ಕಾಸರಗೋಡು ಸಮೀಪದ ಸೀತಂಗೋಳಿ ರಾಜೀವ ಗಾಂಧಿ ಕಾಲೋನಿಯ ಅಬ್ದುಲ್ ನಿಝಾರ್ (21) ಮತ್ತು ಮಂಜೇಶ್ವರ ತಾಲೂಕಿನ ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ ಎಂ (31) ಬಂಧಿತ ಆರೋಪಿಗಳು.
ಆರೋಪಿಗಳಾದ ಕಿರಣ್ ಟಿ,ಸುಧೀರ್ ಕುಮಾರ್ ಮಣಿಯಾಣಿ, ಸನಾಲ್ ಕೆ.ವಿ ಎಂಬವರನ್ನು ಗುರುವಾರ ರಾತ್ರಿ ಪುತ್ತೂರು ತಾಲೂಕಿನ ನಿಡ್ಪಳ್ಳಿಯಲ್ಲಿ ಬಂಧಿಸಲಾಗಿದ್ದು, ಉಳಿದಂತೆ ಮಹಮ್ಮದ್ ಫೈಝಲ್, ಅಬ್ದುಲ್ ನಿಝಾರ್ ಮತ್ತು ವಸಂತ ಎಂಬಾತನನ್ನು ಕಾಸರಗೋಡು ಜಿಲ್ಲೆಯ ಮುನಿಯಂಪಾಲ ಎಂಬಲ್ಲಿ ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು, ಕಾರಿನಲ್ಲಿದ್ದ ಚೂರಿ,ಕಬ್ಬಿಣದ ರಾಡ್,ತಲುವಾರು,ಹಗ್ಗ,ಗಮ್‍ಟೇಪ್,ಟಾರ್ಚ್ಲೈಟ್, ಬೈಕ್ ಹಾಗೂ ದರೋಡೆ ಮಾಡಿರುವ ಚಿನ್ನದ ಬಳೆ, ಚೈನು ಮತ್ತು ಸ್ವಲ್ಪ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಗಾನ ಪಿ ಕುಮಾರ್, ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ರವೀ ಬಿ.ಎಸ್, ನಗರ ಠಾಣೆಯ ಎಸ್‍ಐ ಉದಯ ರವಿ ಉಪಸ್ಥಿತರಿದ್ದರು.