ಮಂಗಳೂರು : ಶ್ರದ್ಧಾಭಕ್ತಿಗೆ ರಾಜಕೀಯ ಅನಗತ್ಯ : ಪದ್ಮರಾಜ್
ಮಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ನಮ್ಮ ಹೆಮ್ಮೆ. ಇದರ ಉದ್ಘಾಟನೆಯನ್ನು ಶ್ರದ್ಧಾಭಕ್ತಿಯಿಂದ ಮಾಡಬೇಕಾದ್ದು ನಮ್ಮ ಧರ್ಮ. ಇದನ್ನು ರಾಜಕೀಯಗೊಳಿಸುವ ಅಗತ್ಯವೇನು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಅಯೋಧ್ಯೆ ವಿಚಾರ ವಿವಾದ ಇತ್ತು, ಅದು ಕೋರ್ಟ್ ಇತ್ಯರ್ಥ ಆಗಿದೆ. ಇದರಲ್ಲಿ ರಾಜಕೀಯ ಮಾಡುವ ಔಚಿತ್ಯವೇನು? ಬಿಜೆಪಿ ಜನಪ್ರತಿನಿಧಿಗಳು ಅವಿದ್ಯಾವಂತರು ಮಾತನಾಡುವ ರೀತಿ ಹೇಳಿಕೆ ನೀಡು ತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಮ ಮಂದಿರ ಉದ್ಘಾಟನೆ ದಿನ ರಜೆ ಸಾರಲು ರಾಜ್ಯ ಸರ್ಕಾರಕ್ಕೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮ ಮಾಡುತ್ತಿರುವುದು ಕೇಂದ್ರ ಸರ್ಕಾರ, ಅವರು ರಜೆ ಘೋಷಣೆ ಯನ್ನು ಮಾಡಲಿ. ರಾಜ್ಯ ಸರ್ಕಾರದ ರಜೆ ಘೋಷಣೆಗೆ ಪಟ್ಟು ಹಿಡಿಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದ ಪದ್ಮರಾಜ್ ಅವರು, ಜವಾಬ್ದಾರಿಯುತ ನಡವಳಿಕೆ ತೋರಿಸಿ, ಸೌಹಾರ್ದ ವಾತಾವರಣ ಬೆಳೆಸುವಂತೆ ಮಾಡಿ ಎಂದರು. ಚುನಾವಣೆ ವೇಳೆ ಜನತೆಗೆ ನೀಡಿದ್ದ ಗ್ಯಾರಂಟಿಯನ್ನು ಕಾಂಗ್ರೆಸ್ ಸರಕಾರ ಈಡೇರಿಸಿದೆ. ಬಡವರಿಗೆ ಆಶಾಕಿರಣ ಆಗಿ ಇತಿಹಾಸ ನಿರ್ಮಿಸಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸುವ ಬದಲು ಪ್ರತೀ ಸಲ ಟೀಕೆ ಮಾಡುವುದು ಭೂಷಣವಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂತೋಷ್ ಶೆಟ್ಟಿ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಉದಯ ಅಚಾರಿ, ರಾಕೇಶ್, ಕೇಶವ ಮರೋಳಿ, ಚೇತನ್ ಕುಮಾರ್, ಯೋಗೀಶ್, ಪ್ರೇಮ್ ಕುಮಾರ್ ಉಪಸ್ಥಿತರಿದ್ದರು.