ಪುತ್ತೂರು: ಕರುವನ್ನು ಕೊಂದು ರಬ್ಬರ್ ಮರದ ಕೊಂಬೆಯಲ್ಲಿ ನೇತು ಹಾಕಿದ ಚಿರತೆ…!

ಒಂದೆರಡು ವರ್ಷಗಳಿಂದ ಪುತ್ತೂರು ಮತ್ತು ಆಸುಪಾಸಿನ ನಾನಾ ಕಡೆ ಚಿರತೆ ಓಡಾಟದ ಹೆಜ್ಜೆಗುರುತುಗಳು ಗೋಚರವಾದ ನಡುವೆಯೇ, ಇದೇ ಮೊದಲ ಬಾರಿಗೆ ಚಿರತೆಯು ತನ್ನ ಬೇಟೆಯನ್ನು ಮರದ ಮೇಲಿಟ್ಟು ನಾಪತ್ತೆಯಾದ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ ಕಳೇಬರ ಪತ್ತೆಯಾಗಿದ್ದು, ಇದು ಚಿರತೆಯದ್ದೇ ಕೆಲಸ ಎಂದು ಅರಣ್ಯ ಇಲಾಖೆ ಖಚಿತಪಡಿಸಿರುವ ಕಾರಣ ಹಳ್ಳಿಯ ಗ್ರಾಮಸ್ಥರು ಮತ್ತು ರಬ್ಬರ್ ಟ್ಯಾಪರ್‍ಗಳಲ್ಲಿ ಆತಂಕ ಮನೆ ಮಾಡಿದೆ.

ಮುಂಜಾನೆ ರಬ್ಬರ್ ಟ್ಯಾಪಿಂಗ್‍ಗೆ ಹೋದ ಕಾರ್ಮಿಕರು ತೋಟದ ಮಧ್ಯದ ರಬ್ಬರ್ ಮರವೊಂದರ ಮೇಲೆ ಸತ್ತ ದನದ ಕರು ನೇತಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕರುವಿನ ರುಂಡವು ಮರದ ಕೊಂಬೆಯ ಮಧ್ಯೆ ಸಿಲುಕಿದ್ದು, ಕೆಳಗೆ ಬೀಳದಂತೆ ಆಧಾರವಾಗಿತ್ತು. ಸತ್ತ ಕರುವಿನ ದೇಹದ ಒಂದಷ್ಟು ಭಾಗವನ್ನು ಸೀಳಿ ಮಾಂಸ ಹೊರ ತೆಗೆದು ಚಿರತೆ ತಿಂದಿದೆ. ಉಳಿದ ಕೊಂಬೆಯಲ್ಲಿ ನೇತು ಹಾಕಿ ಪರಾರಿಯಾಗಿದೆ.

Related Posts

Leave a Reply

Your email address will not be published.