ಪುತ್ತೂರು: ಅ.22ರಂದು ಪುತ್ತೂರುದ ಪಿಲಿಗೊಬ್ಬು -2023 ಹಾಗೂ ಫುಡ್ ಫೆಸ್ಟ್
ಪುತ್ತೂರು: ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅ. 22ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಪುತ್ತೂರುದ ಪಿಲಿಗೊಬ್ಬು -2023 ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರುದ ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳ ಹಿಂದೆ ಆರಂಭಗೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ವಿಜಯ ಸಾಮ್ರಾಟ್ ಪುತ್ತೂರು ಆಶ್ರಯದಲ್ಲಿ ಪ್ರಥಮ ಬಾರಿಗೆ ಈ ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 25 ಸಾವಿರಕ್ಕೂ ಮಿಕ್ಕಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪಿಲಿಗೊಬ್ಬು ಕಾರ್ಯಕ್ರಮದ ಉದ್ಘಾಟನೆಯು ಅ. 22 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಲಿದ್ದಾರೆ. ಪಿಲಿಗೊಬ್ಬು ವೇದಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ನೆರವೇರಿಸಲಿದ್ದು, ಪುತ್ತೂರಿನ ಹಿರಿಯ ವೈದ್ಯರಾದ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಪುತ್ತೂರುದ ಪಿಲಿಗೊಬ್ಬಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 10 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ. 3 ಲಕ್ಷ, ದ್ವಿತೀಯ ಬಹುಮಾನ 2 ಲಕ್ಷ ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪೆÇ್ರೀತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು. ಭಾಗಿಯಾದ ತಂಡಗಳಿಗೂ ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರುದ ಪಿಲಿಗೊಬ್ಬು ಸಮಿತಿ ಸಂಚಾಲಕ ನಾಗರಾಜ ಭಟ್ ನಡುವಡ್ಕ, ಕಾಯಾಧ್ಯಕ್ಷ ಸುಜಿತ್ ರೈ ಪಾಲ್ತಾಡಿ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು ಉಪಸ್ಥಿತರಿದ್ದರು.