ಪುತ್ತೂರು ಬಿಜೆಪಿ ವತಿಯಿಂದ ತಿರಂಗ ಯಾತ್ರೆ || Triranga Yaatre
ಪೆಟ್ರೋಲ್, ಡ್ರಗ್, ವೆಫನ್ ಸೇರಿ ಮೂರು ಮಾಫಿಯಾಗಳು ಜಗತ್ತಿನ್ನು ಆಳುತ್ತಿದ್ದು, ಇದನ್ನು ಮೋದಿ ನೇತೃತ್ವದ ಸರ್ಕಾರ ದಿಟ್ಟತನದಿಂದ ಎದುರಿಸಿ ನಿಂತಿದೆ. ಜನರಲ್ಲಿ ರಾಷ್ಟ್ರ ಭಕ್ತಿಯ ಉದ್ದೀಪನದ ದೃಷ್ಟಿಯಿಂದ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದರೆ ಹೇಳಿದರು.
ಅವರು ಪುತ್ತೂರು ಟೌನ್ ಬ್ಯಾಂಕ್ ನಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ತಿರಂಗ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರೀಯ ವಿಚಾರ ಧಾರೆಯನ್ನು ಬಿಟ್ಟು ರಾಜಕೀಯ ಮಾಡಿದವರು ನೆಲಕಚ್ಚಿದ್ದಾರೆ. ಭೂಮಿಯನ್ನು ಮಾತೃಸ್ವರೂಪಿಯನ್ನಾಗಿ ನೋಡುವ ದೇಶ ಬೇರಿಲ್ಲ. ಸಾವಿರಾರು ವರ್ಷ ದಾಳಿಗಳು ನಡೆದರೂ, ದೇಶದ ಸಂಪತ್ತು ನಾಶವಾಗಿಲ್ಲ ಮತ್ತು ಸಂಸ್ಕೃತಿ ಜೀವಂತವಾಗಿ ಉಳಿದಿದೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಭಾರತದಿಂದ ಉತ್ತರವನ್ನು ನಿರೀಕ್ಷೆ ಮಾಡುವ ರೀತಿಯಲ್ಲಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಮೊದಲು ಅಮರ್ ಜವಾನ್ ಜ್ಯೋತಿ ಬಳಿ ಪುಷ್ಪರ್ಚನೆ ಮಾಡಿ ಬಳಿಕ ತಿರಂಗ ಹಿಡಿದು ಟೌನ್ ಬ್ಯಾಂಕ್‍ವರೆಗೆ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸೇನಾ ಕರ್ತವ್ಯದಲ್ಲಿರುವ ಸೂರಜ್ ಹಾಗೂ ಸೇನಾ ಸೇವೆಯಿಂದ ನಿವೃತ್ತರಾದ ಬಿ. ನವೀನ್ ರೈ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಾಜಿ ಶಾಸಕ ಸಂಜೀವ ಮಠಂದೂರು,ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಜಿಲ್ಲಾ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.