ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023
ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023 ಸಮಾರಂಭವು ಅಧ್ಯಕ್ಷ ರಘುನಾಥ್ ಅಂಚನ್ ಸಾರಥ್ಯದಲ್ಲಿ ಡಿ.ಪಿ. ಎಸ್. ಅಲ್-ವಕ್ರ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸರ್ವಾಲಂಕೃತ ಭೂಷಿತರಾದ ಮಂಗಳಾಂಗಿಯರಿಂದ ಆರತಿಯನ್ನೆತ್ತಿ ಸ್ವಾಗತ, ಸಮವಸ್ತ್ರಧಾರಿಗಳಾದ ಸದಸ್ಯರು, ಮಂಗಳ ವಾದ್ಯಗಳ ದನಿ, ಚೆಂಡೆ ತಾಳಗಳ ಅಬ್ಬರ, ಕೋಟಿ-ಚೆನ್ನಯ” ಪ್ರವೇಶದ್ವಾರ, ಅಣಿ, ಸಿರಿ, ತುಳಸಿಕಟ್ಟೆ ಮೊದಲಾದವುಗಳು ತುಳುನಾಡಿನ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತಾ ಬಿಲ್ಲವೋತ್ಸವಕ್ಕೆ ವಿಶೇಷ ಮೆರುಗು ನೀಡಿತು.
ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್‍ನ ಅಧ್ಯಕ್ಷ ಮಣಿಕಂಠ ಎ.ಪಿ., ಚಿತ್ರ ನಟ ಪೃಥ್ವಿ ಅಂಬರ್ ಅತಿಥಿಗಳಾಗಿ ಭಾಗವಹಿಸಿದರು. ಮುಖ್ಯ ಭಾಷಣಕಾರರಾಗಿ ಡಾ. ಅರುಣ್ ಉಳ್ಳಾಲ್ ಮಾತನಾಡಿ, ನಾರಾಯಣ ಗುರುಗಳ ಸಂದೇಶ, ಆರ್ಜನ, ಅನುಷ್ಠಾನ, ಅನುಭೋಗ, ಬಡತನದ ದಿಟ್ಟತನ, ಸಾಮಾಜಿಕ ಸಹಬಾಳ್ವೆಯ ಬಗ್ಗೆ ಬೆಳಕು ಚೆಲ್ಲಿದರು.
ಗುರು ಸೇವಾ ಸಮಿತಿ ಬಹರೈನ್‍ನ ಮಾಜಿ ಅಧ್ಯಕ್ಷ ಅಜಿತ್ ಬಂಗೇರ, ಕಾರ್ಯದರ್ಶಿ ರೂಪೇಶ್ ಸಾಲಿಯಾನ್, ಬಿಲ್ಲವಾಸ್ ಕತಾರ್‍ನ ಉಪಾಧ್ಯಕ್ಷ ಅಮಿತ್ ಪೂಜಾರಿ, ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸೀಮಾ ಪೂಜಾರಿ ಉಪಸ್ಥಿತರಿದ್ದರು. ಪಿಂಗಾರ ಸಂಚಿಕೆಯನ್ನು ಡಾ. ಅರುಣ್ ಉಳ್ಳಾಲ್ ಬಿಡುಗಡೆ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಮಣಿಕಂಠ ಎ.ಪಿ., ಡಾ. ಅರುಣ್ ಉಳ್ಳಾಲ್, ಡಾ. ರವಿ ಶೆಟ್ಟಿ ಮೂಡಂಬೈಲು, ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ವಿನೋದ್ ನಾಯರ್ ಅವರನ್ನು ಸಂಮಾನಿಸಲಾಯಿತು.
ಬಿಲ್ಲವಾಸ್ ಕತಾರ್‍ನ ಅಧ್ಯಕ್ಷ ರಘುನಾಥ್ ಅಂಚನ್ ಮಾತನಾಡಿ, ಸಂಘದ ಸ್ಥಾಪಕಾಧ್ಯಕ್ಷ ದಿವಾಕರ ಪೂಜಾರಿಯವರನ್ನು ನೆನೆಯುತ್ತಾ, ಸಂಘ ನಡೆದು ಬಂದ ದಾರಿ, ಸಾಧನೆ, ಬೆಳವಣಿಗೆ ಮತ್ತು ಮುನ್ನೋಟಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಬಿಲ್ಲವೋತ್ಸವಕ್ಕೆ ನೆರವಾದ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾ ಸುವರ್ಣ ಮತ್ತು ರಾಮ್ ಕುಮಾರ್ ಅಮೀನ್ ಅವರ ಸಂಗೀತ ಸುಧೆ, ಉಮೇಶ್ ಮಿಜಾರು ಮತ್ತು ತಂಡದವರ ತೆಲಿಕೆದ ಗೊಂಚಿಲ್, ಬಿಲ್ಲವಾಸ್ ಕತಾರ್‍ನ ಪ್ರತಿಭೆಗಳ ನಾಟ್ಯ ವೈಭವ, “ಕೋಟಿ- ಚೆನ್ನಯ” ಯಕ್ಷಗಾನ ಪ್ರೇಕ್ಷಕರ ಕಣ್ಮನ ಸೂರೆಗೊಂಡಿತು. ಬಿಲ್ಲವೋತ್ಸವಕ್ಕೆ ಕತಾರ್‍ನ ವಿವಿಧ ಮೂಲೆಗಳಿಂದ ಜನಸ್ತೋಮ ನೆರೆದಿದ್ದು ಸಭಾಂಗಣ ತುಂಬಿ ತುಳುಕಿತ್ತು. ಈ ಅಪೂರ್ವ ಕಾರ್ಯಕ್ರಮ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.