ಕಾಂಗ್ರೆಸ್‍ನ ಐದನೇ ಗ್ಯಾರಂಟಿ ಘೋಷಣೆ : ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣ
ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ಮಹಿಳೆಯರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಒದಗಿಸಲಾಗುವುದು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದರು.
ಕಾಂಗ್ರೆಸ್ ಈಗಾಗಲೇ ನಾಲ್ಕು ಭರವಸೆಗಳ ಗ್ಯಾರಂಟಿ ಕಾರ್ಡ್' ಅನ್ನು ಚುನಾವಣಾ ಪ್ರಣಾಳಿಕೆಯ ರೂಪದಲ್ಲಿ ಬಿಡುಗಡೆ ಮಾಡಿದೆ. ಮಂಗಳೂರಿನ ಅಡ್ಯಾರ್ ಗಾರ್ಡನ್‍ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಹುಲ್ ಅವರು ಮಹಿಳೆಯರಿಗೆ
ಉಚಿತ ಬಸ್ ಪ್ರಯಾಣ’ದ ಐದನೇ `ಗ್ಯಾರಂಟಿ’ ಘೋಷಿಸಿದರು. ಸಭೆಯಲ್ಲಿ ಸೇರಿದ್ದ ಸಾವಿರಾರು ಮಂದಿ ಎದ್ದು ನಿಂತು ಚಪ್ಪಾಳೆಯ ಮೂಲಕ ಈ ಘೋಷಣೆಯನ್ನು ಸ್ವಾಗತಿಸಿದರು.
ನಾವು ಘೋಷಿಸಿರುವ ಐದೂ ಭರವಸೆಗಳು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಜಾರಿಗೆ ಬರಲಿವೆ. ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಎಲ್ಲ ಭರವಸೆಗಳಿಗೆ ಅಂಕಿತ ಹಾಕಲಾಗುವುದು. ಕಾಂಗ್ರೆಸ್‍ನ
ಗ್ಯಾರಂಟಿ ಕಾರ್ಡ್’ ಅನ್ನು ಸುಳ್ಳು ಭರವಸೆಗಳ ಕಾರ್ಡ್ ಎಂದು ಬಿಜೆಪಿ ಮುಖಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕರ್ನಾಟಕದಲ್ಲಿ ನಾವು ಈ ಭರವಸೆಗಳನ್ನು ಜಾರಿ ಮಾಡಿದ ಕೂಡಲೇ ನೀವು ದೇಶದಾದ್ಯಂತ ಇವುಗಳನ್ನು ಜಾರಿ ಮಾಡುವಿರಾ’ ಎಂದು ಅವರು ಮೋದಿಗೆ ಸವಾಲು ಹಾಕಿದರು.
ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, `ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್‍ಗೆ ನಾನು ಹಾಗೂ ಸಿದ್ದರಾಮಯ್ಯ ಸಹಿ ಮಾಡಿದ್ದೇವೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಅವುಗಳನ್ನು ಜಾರಿ ಮಾಡದಿದ್ದರೆ, ಇನ್ನು ಮುಂದೆ ಮತಯಾಚಿಸಲು ನಿಮ್ಮ ಮುಂದೆ ಬರುವುದಿಲ್ಲ’ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ ಕಾಂಗ್ರೆಸ್‍ನ ಪ್ರಮುಖ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.