ಅಭಿವೃದ್ಧಿ ಕಾರ್ಯಕ್ಕೆ ಜನರು ಒಲವು ತೋರಿ ಗೆಲುವು ತಂದುಕೊಟ್ಟಿದ್ದಾರೆ : ರಾಜೇಶ್ ನಾಯ್ಕ್
ಬಂಟ್ವಾಳ: ನನ್ನ ಪಕ್ಷದ ಕಾರ್ಯಕರ್ತರು ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ದುಡಿದಿರುವುದೇ ನನ್ನ ಗೆಲುವಿಗೆ ಪೂರಕವಾದ ಅಂಶವಾಗಿದೆ. ಕಳೆದ ಐದು ವರ್ಷದ ಅಧಕಾರವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯ ಹಾಗೂ ಈ ಭಾಗದಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಂತಿರುವುದರಿಂದ ಜನರು ಒಲವು ತೋರಿಸಿ ಗೆಲುವು ತಂದು ಕೊಟ್ಟಿದ್ದಾರೆ ಎಂದು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಹೇಳಿದರು.
ಅವರು ಬಿ.ಸಿ.ರೋಡಿನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ವಿರೋಧ ಪಕ್ಷದಲ್ಲಿದ್ದುಕೊಂಡು ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇವೆ ಅದರ ಜೊತೆ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ವಿರೋಧ ಪಕ್ಷದಲ್ಲಿದ್ದುಕೊಂಡು ಕಳೆದ ವರ್ಷದಷ್ಟೇ ಅನುದಾನ ತಂದು ಕೆಲಸ ಮಾಡಲು ಸಾಧ್ಯವೋ ಎನ್ನುವುದು ಗೊತ್ತಿಲ್ಲ, ಆದರೆ ಕ್ಷೇತ್ರದ ಅಭಿವೃದ್ದಿಗಾಗಿ ನಾನು ಸಂಪೂರ್ಣ ಪ್ರಯತ್ನ ಪಡುತ್ತೇನೆ ಎಂದು ತಿಳಿಸಿದರು. ಭವಿಷ್ಯದ ಬಂಟ್ವಾಳದ ಬಗ್ಗೆ ಅನೇಕ ಯೋಜನೆಗಳು ಇದೆ. ಅದರ ಅನುಷ್ಠನಕ್ಕೆ ನನ್ನಿಂದಾಗುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ ಅವರು ಬಂಟ್ವಾಳದಲ್ಲಿ ಬಿಜೆಪಿಯಿಂದ ಎರಡನೇ ಅವಧಿಗೆ ಆಯ್ಕೆಯಾದ ಪ್ರಥಮ ಶಾಸಕ ಎಂದು ತಿಳಿಸಿ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ನಿಕಟಪೂರ್ವಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ ಮೊದಲಾದವರು ಉಪಸ್ಥಿತರಿದ್ದರು.