ಅಡ್ಡ ಮತದಾನ ಬಿಜೆಪಿಗೆ ಭರ್ಜರಿ ಲಾಭ
ಹದಿನೈದು ರಾಜ್ಯಗಳ 66 ರಾಜ್ಯ ಸಭಾ ಸ್ಥಾನಗಳಿಗೆ ವಿಧಾನ ಸಭೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 30 ಸ್ಥಾನ ಗೆದ್ದು 45 ಶೇಕಡಾಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಆದರೆ ಇದರಲ್ಲಿ 6 ಸ್ಥಾನಗಳನ್ನು ಅದು ವಶೀಲಿಬಾಜಿಯಿಂದ, ಖರೀದಿಯಿಂದ, ಹಿಂದಿನ ಬಾಗಿಲಿನಿಂದ ತನ್ನದಾಗಿಸಿಕೊಂಡಿದೆ ಎನ್ನುವುದು ಹಲವರ ಆರೋಪವಾಗಿದೆ.
ಆರು ವರುಷ ಸದಸ್ಯಾವಧಿಯ ರಾಜ್ಯ ಸಭೆಯ ಮೂರನೇ ಒಂದು ಭಾಗದ ಸದಸ್ಯರು ಪ್ರತಿ ಎರಡು ವರುಷಕ್ಕೊಮ್ಮೆ ನಿವೃತ್ತರಾಗುತ್ತಾರೆ. ವಿಧಾನ ಸಭಾ ಸದಸ್ಯರ ಮತದಾನದ ಮೂಲಕ ರಾಜ್ಯ ಸಭೆಗೆ ಹೋದ 66 ಸದಸ್ಯರು ಇನ್ನೇನು ನಿವೃತ್ತರಾಗುತ್ತಿದ್ದು, ಅವರ ಬದಲಿಗೆ ಮತ್ತೆ 66 ಮಂದಿ ಆಯ್ಕೆಗೆ ಚುನಾವಣೆ ನಡೆದಿತ್ತು. 41 ಕಡೆ ಅವಿರೋಧ ಆಯ್ಕೆ ನಡೆದು, ಉಳಿದ ಮೂರು ರಾಜ್ಯಗಳ 15 ಸ್ಥಾನಗಳಿಗೆ ಚುನಾವಣೆ ನಡೆದು ಆ ಆಯ್ಕೆಯೂ ಸಹಜವಾಗಿ ನಡೆದು ಮುಗಿದಿದೆ.
ಭಾರತದಲ್ಲಿ 4,123 ವಿಧಾನ ಸಭಾ ಸದಸ್ಯ ಸ್ಥಾನಗಳಿವೆ. ನಿಧನದಿಂದ ತೆರವಾದ ಕೆಲವರ ಹೊರತು ಬೇರೆಲ್ಲ ಕಡೆ ಶಾಸಕರು ಇದ್ದಾರೆ. ಒಟ್ಟು ಶಾಸಕರಲ್ಲಿ ಬಿಜೆಪಿಯು ಹೆಚ್ಚು ಶಾಸಕರನ್ನು ಹೊಂದಿದೆ. ಆದರೆ ಬೇರೆಲ್ಲ ಪಕ್ಷಗಳು ಒಗ್ಗೂಡಿ 60 ಶೇಕಡಾದಷ್ಟು ಶಾಸಕರನ್ನು ಹೊಂದಿದ್ದಾರೆ. ಆದರೂ ಬಿಜೆಪಿಯು 66ರಲ್ಲಿ 30 ರಾಜ್ಯ ಸಭಾ ಸ್ಥಾನಗಳನ್ನು ಹೇಗೆ ಗೆದ್ದುಕೊಂಡಿತು? ಮಹಾರಾಷ್ಟ್ರದ ಮಾಜೀ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಅಶೋಕ್ ಚವ್ಹಾಣರನ್ನು ರಾಜ್ಯ ಸಭಾ ಚುನಾವಣೆ ಘೋಷಣೆ ಆಗುವಾಗ ಬಿಜೆಪಿಯು ತನ್ನ ಪಕ್ಷಕ್ಕೆ ಸೇರಿಸಿಕೊಂಡಿತು. ತತ್ಪರಿಣಾಮವಾಗಿ ಶಾಸಕರ ಖರೀದಿ ನಡೆಯಿತು. ಅಶೋಕ್ ಚವ್ಹಾಣ್ ಬಿಜೆಪಿಯ ರಾಜ್ಯ ಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು. ಕಳೆದ ಐದು ವರುಷಗಳಲ್ಲಿ ಕಾಂಗ್ರೆಸ್ಸಿನ ಹತ್ತು ಮಾಜೀ ಮುಖ್ಯಮಂತ್ರಿಗಳು ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿಯ ಖರೀದಿ ರಾಜಕೀಯಕ್ಕೆ ಇದು ಒಂದು ಸಣ್ಣ ಉದಾಹರಣೆ ಅಷ್ಟೆ. ಸಿಕ್ಕಿಂನದು ವಿಶ್ವ ದಾಖಲೆ. ಸಿಕ್ಕಿಂ ವಿಧಾನ ಸಭಾ ಸದಸ್ಯರ ಸಂಖ್ಯೆ 32. 1975ರಲ್ಲಿ ಇಂದಿರಾ ಗಾಂಧಿಯವರ ರಾಜಕೀಯ ಚಾಣಾಕ್ಷತೆಯಿಂದ ಭಾರತದ ಒಕ್ಕೂಟ ಸೇರಿದ ರಾಜ್ಯವಿದು. ಇಲ್ಲಿ ಕಳೆದೆರಡು ದಶಕದಿಂದ ಲೇಖಕ ಪವನ್‍ಕುಮಾರ್ ಚಾಮ್ಲಿಂಗ್‍ರ ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್ ಗೆದ್ದು ಅವರು ಮುಖ್ಯಮಂತ್ರಿ ಆಗಿದ್ದರು. 2019ರಲ್ಲಿ ಇಡೀ ಎಸ್‍ಡಿಎಫ್ ಪಕ್ಷವನ್ನು ಖರೀದಿಸಿದ ಬಿಜೆಪಿ ಏಗಲಾಗದೆ ಸಿಕ್ಕಿಂ ಕ್ರಾಂತಿಕಾರಿ ಫ್ರಂಟ್ ಎಂಬ ತಮ್ಮ ಹಿಂಬಾಲಕ ಪಕ್ಷವನ್ನು ಇಲ್ಲಿ ಬಿಟ್ಟಿದೆ. ಅವಿರೋಧ ಆಯ್ಕೆಯಲ್ಲೂ ಕೈಯಾಡಿಸಿದ ಬಿಜೆಪಿಗೆ ಚುನಾವಣೆ ನಡೆದಲ್ಲಿ ಗೆಲ್ಲುವುದು ಕಷ್ಟವಲ್ಲ.
ಹಿಮಾಚಲ ಪ್ರದೇಶದ 68 ಸದಸ್ಯ ಬಲದ ವಿಧಾನ ಸಭೆಯಲ್ಲಿ ಕಾಂಗ್ರೆಸ್ 40 ಸದಸ್ಯರನ್ನು ಹೊಂದಿದೆ. ಆದರೆ ಅದರ ಒಂಬತ್ತು ಸದಸ್ಯರನ್ನು ಬಿಜೆಪಿ ಅಪಹರಿಸಿತ್ತು ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸಕ್ಖು ಆಪಾದಿಸಿದ್ದಾರೆ. ಅಪಹರಿಸಿದ್ದಾರೋ ಇಲ್ಲವೋ ಒಂಬತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಮತ ಚಲಾಯಿಸಿದ್ದರಿಂದ ಸಾಕಷ್ಟು ಸಂಖ್ಯೆಯ ಕಾಂಗ್ರೆಸ್ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಮನು ಸಿಂಘ್ವಿ ಸೋತಿದ್ದಾರೆ. ಅದರಲ್ಲೂ ಒಂದು ಅದೃಷ್ಟದ ನಾಟಕವೂ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಾನ 34 ಮತಗಳು ಬಂದವು ಎಂದೂ, ಚೀಟಿ ಎತ್ತಿ ಬಿಜೆಪಿಯ ಹರ್ಷ ಮಹಾಜನ್ ಗೆದ್ದರು ಎಂದು ಘೋಷಿಸಿದ್ದಾಗಿ ಹೇಳಲಾಗಿದೆ. ಚಂಡೀಗಡ ಮೇಯರ್ ಚುನಾವಣಾಧಿಕಾರಿಯ ಕತೆ ಇಲ್ಲಿಯದೂ ಆಗಿದೆ.
ಉತ್ತರ ಪ್ರದೇಶದಲ್ಲಿ ಸಹಜವಾಗಿ ಬಿಜೆಪಿಯ 7, ಸಮಾಜವಾದಿ ಪಕ್ಷದ ಮೂವರು ಗೆಲ್ಲಬೇಕಿತ್ತು. ಆದರೆ ಸಮಾಜವಾದಿ ಪಕ್ಷ ಎರಡೇ ಗೆದ್ದು, ಬಿಜೆಪಿಯು 8 ಸ್ಥಾನಗಳನ್ನು ಗೆದ್ದಿತು. ಸಮಾಜವಾದಿ ಪಕ್ಷದ 8 ಶಾಸಕರು ಮತ್ತು ಬಿಎಸ್‍ಪಿ ಮತ್ತಿತರ ಶಾಸಕರು ಕೂಡ ಬಿಜೆಪಿಗೆ ಅಡ್ಡ ಮತ ಹಾಕಿದ್ದಾಗಿ ಹೇಳಲಾಗಿದೆ. ಸಮಾಜವಾದಿ ಪಕ್ಷದ ಐವರು ಶಾಸಕರಂತೂ ಮತ ಹಾಕಿ ನೇರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಪಕ್ಕ ಹೋಗಿ ಕುಳಿತಿದ್ದರು. ಇದು ಪಕ್ಷಾಂತರ ನಿಷೇಧ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.
ಕರ್ನಾಟಕದಲ್ಲಿ ಬಿಜೆಪಿಯ ಯಲ್ಲಾಪುರದ ಶಾಶಕ ಶಿವರಾಮ ಹೆಬ್ಬಾರ್ ಮತ ಚಲಾಯಿಸಲೇ ಇಲ್ಲ. ಎಸ್. ಟಿ. ಸೋಮಶೇಖರ್ ಅವರು ಬಿಜೆಪಿ ಉಸ್ತುವಾರಿ ಬೆಲ್ಲದರಿಗೆ ತೋರಿಸಿಯೇ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಬರುವುದಿಲ್ಲ ಏಕೆಂದರೆ ಅವರು ಬಿಜೆಪಿಯ ವಿಪ್ ಪಡೆದಿರಲಿಲ್ಲ. ಅಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಮೂವರು ಕಾಂಗ್ರೆಸ್ಸಿನ ಸ್ವಂತ ಬಲದಿಂದಲೇ ಗೆದ್ದಿರುವುದರಿಂದ ಉಳಿದ ಹೆಚ್ಚುವರಿ ಮತಗಳು ಒಟ್ಟು 5 ಅಪ್ರಸ್ತುತ. 3 ಪಕ್ಷೇತರ, 1 ರೆಡ್ಡಿ ಮತ್ತು ಸೋಮಶೇಖರ್ ಒಂದು ಈ 5 ಮತಗಳು ಅಲ್ಲದೆಯೂ ಕಾಂಗ್ರೆಸ್ ಮೂರು ಸ್ಥಾನ ಗೆಲ್ಲುವಷ್ಟು ಬಲ ಹೊಂದಿತ್ತು. ಎಲ್ಲ ರಾಜ್ಯಗಳಲ್ಲಿ ಖರೀದಿ ರಾಜಕೀಯ ನಡೆಸಿದ ಬಿಜೆಪಿಯು ಈ ರಾಜ್ಯ ಸಭಾ ಚುನಾವಣೆಯಲ್ಲಿ ಯಾಕೆ ಖರೀದಿ ನಡೆಸಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೈತ್ರಿ ಅಭ್ಯರ್ಥಿ ಬಿಜೆಪಿಯವರಾಗಿರಲಿಲ್ಲ. ಅವರು ಜೆಡಿಎಸ್ ಅಭ್ಯರ್ಥಿ ಆಗಿದ್ದರು.
ರಾಜ್ಯ ಸಭೆಯ ಸದಸ್ಯರ ಸಂಖ್ಯೆ ಗರಿಷ್ಠ 250. ಅದರಲ್ಲಿ 238 ಸದಸ್ಯರು ದೇಶದ ಶಾಸಕರಿಂದ ಗೆದ್ದು ಬರುವವರಾಗಿದ್ದಾರೆ. ಉಳಿದ 12 ಸದಸ್ಯರನ್ನು ಸಾಹಿತ್ಯ, ಕಲೆ, ವಿಜ್ಞಾನ, ಸಮಾಜ ಸೇವೆ ಕ್ಷೇತ್ರದಿಂದ ಗುರುತಿಸಿ ನೇಮಕ ಮಾಡಲಾಗುತ್ತದೆ. ಈ 12 ಸ್ಥಾನ ರಾಷ್ಟ್ರಪತಿಗಳಿಂದ ನೇಮಕ ಆಗಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಕೇಂದ್ರ ಸರಕಾರ ಸೂಚಿಸದವರನ್ನು ರಾಷ್ಟ್ರಪತಿಗಳು ನೇಮಿಸುವುದು ನಡೆದು ಬರುತ್ತಿದೆ. ರಾಜೀನಾಮೆ ಮತ್ತು ಸಾವು ಇತರ ಕಾರಣಗಳಿಂದಲೂ ರಾಜ್ಯ ಸಭಾ ಸದಸ್ಯರ ಅವಧಿ ಮತ್ತು ನಿವೃತ್ತಿಯ ದಿನಾಂಕಗಳು ವ್ಯತ್ಯಾಸ ಆಗುತ್ತಿರುತ್ತವೆ. ಚುನಾವಣೆ ಗೆದ್ದು ಒಂದು ದಿನ ಕೂಡ ಶಾಸಕರಾಗಿರದಿದ್ದ ಉದಾಹರಣೆಗಳೂ ಇವೆ. ರಾಜ್ಯಸಭೆಗೆ ಆ ಭಯ ಇಲ್ಲ. ಅದು ವಿಸರ್ಜನೆ ಆಗುವುದಿಲ್ಲ.
1985ರಲ್ಲಿ ಕರ್ನಾಟಕ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಾಯಿತು. ಆಗ ತಾನೆ ಮಂಡ್ಯ ಜಿಲ್ಲೆಯ ಕಿರುಗಾವಲಿನಿಂದ ಗೆದ್ದಿದ್ದ ಶಾಸಕರು ವಿಧಾನಸಭೆಗೇ ಕಾಲಿಡಲಾಗಲಿಲ್ಲ. ಇಂತಾದ್ದು ಚುನಾವಣಾ ರಾಜಕೀಯದಲ್ಲಿ ನಡೆದುದಿದೆ. ಆದರೆ ರಾಜ್ಯ ಸಭೆ, ವಿಧಾನಸಭೆ ಸದಸ್ಯರಿಗೆ ಈ ಭಯ ಇಲ್ಲ. ಒಬ್ಬರ ಸಾವಿನಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದರೆ ಹೊಸ ರಾಜ್ಯ ಸಭಾ ಸದಸ್ಯರಿಗೆ ಆರು ವರುಷದಲ್ಲಿ ಹಿಂದಿನವರು ಬಳಸಿ ಉಳಿದ ಕಾಲಾವಧಿ ಮಾತ್ರ ದೊರೆಯುತ್ತದೆ. ವಿಧಾನ ಪರಿಷತ್ ವಿಷಯದಲ್ಲಿಯೂ ಇದೇ ನಡೆಯುತ್ತದೆ.
ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ್ದರಿಂದ ರಾಜ್ಯ ಸಭಾ ಬಲ 245ಕ್ಕೆ ಇಳಿದಿದೆ 12 ನೇಮಿಸಿದ ಮತ್ತು 233 ವಿಧಾನ ಸಭೆಗಳ ಮೂಲಕ ಗೆಲುವು ಕಂಡವರದಾಗಿದೆ. ಉಪ ರಾಷ್ಟ್ರಪತಿಗಳು ಸಂವಿಧಾನ ರೀತ್ಯಾ ರಾಜ್ಯ ಸಭೆಯ ಸಭಾಪತಿಯಾಗಿ ಇರುತ್ತಾರೆ. ಈಗಿರುವವರು ಜಗದೀಪ್ ದನ್ಕರ್. ಭಾರತೀಯ, 30 ಪ್ರಾಯ, ಕ್ರಿಮಿನಲ್ ಶಿಕ್ಷಿತರಲ್ಲದ, ಸರಕಾರದ ಯಾವುದೇ ಲಾಭದಾಯP ಹುದ್ದೆÀ ಹೊಂದಿರದ ವ್ಯಕ್ತಿ ರಾಜ್ಯ ಸಭಾ ಸದಸ್ಯರಾಗಲು ಅರ್ಹರು. ಪ್ರತಿ ಬಾರಿ ಅಧಿವೇಶದ ಮೊದಲ ದಿನ ಜಂಟಿ ಅಧಿವೇಶನ ನಡೆಯುವುದರ ಹೊರತಾಗಿ ರಾಜ್ಯ ಸಭಾ ಸದಸ್ಯರದು ಲೋಕ ಸಭಾ ಸದಸ್ಯರಿಗಿಂತ ಪ್ರತ್ಯೇಕವಾದ ಮೇಲ್ಮನೆ ಆಗಿರುತ್ತದೆ. ಹಿರಿಯರ ಮನೆ ಎನ್ನುತ್ತಾರೆ. ಆದರೆ ಕಿರಿಯರ ರಾಜಕೀಯ ಆಯ್ಕೆಯೂ ಸಾಕಷ್ಟಿದೆ.
ಬರಹ: ಪೇರೂರು ಜಾರು