ರಾಮ ಪ್ರಾಣ ಪ್ರತಿಷ್ಠೆಗೆ ವಿರೋಧ ಏಕೆ?
ನಾಲ್ವರು ಶಂಕರಾಚಾರ್ಯರು. ಇಬ್ಬರದು ಒಮ್ಮುಖ ವಿರೋಧ. ಒಬ್ಬರದು ಸಮ್ಮತದ ಜೊತೆಗೆ ಮೌನ. ಮತ್ತೊಬ್ಬರದು ಮಹಾ ಮೌನ. ಅದನ್ನು ಸಮ್ಮತಿ ಲಕ್ಷಣ ಎನ್ನಬಹುದು. ರಾಮ ಮಂದಿರ ಈಗ ವಿವಾದದ ಬಿಂದು. ರಾಮ ಇವರ ಅಪ್ಪನ ಆಸ್ತಿಯೇ ಎಂದು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸುವ ತನಕ ವಿವಾದ ಬೆಳೆದಿದೆ. ಶಂಕರಾಚಾರ್ಯರು ಅಯೋಧ್ಯೆಗೆ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ. ಆದರೆ ಅವರಲ್ಲೂ ಭಿನ್ನಮತ ಪ್ರಕಟವಾಗಿದೆ.
ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತ ನಾನು ರಾಮನನ್ನು ಆರಾಧಿಸುತ್ತೇನೆ; ಅಲ್ಲಾ, ಯೇಸು ಮೊದಲಾದವರನ್ನು ಗೌರವಿಸುತ್ತೇನೆ ಎಂದೂ ಹೇಳಿದ್ದಾರೆ. ಇದು ಸಮಾಜಮುಖಿ ವ್ಯಕ್ತಿಯಲ್ಲಿ ಇರಬೇಕಾದ ಸಹಜ ಗುಣ. ಪೆರಿಯಾರ್ ರಾಮಸ್ವಾಮಿಯವರ ತಂದೆ ಕಾಶಿಯಲ್ಲಿ ಒಂದು ಛತ್ರ ಕಟ್ಟಿಸಿದ್ದರು. ಆದರೆ ಅದರಲ್ಲಿ ಅವರಿಗೇ ಪ್ರವೇಶ ಇರಲಿಲ್ಲ ಎಂದು ಪೆರಿಯಾರ್ ಬರೆದಿದ್ದಾರೆ. ಒಂದು ದೇವಸ್ಥಾನ ಕಟ್ಟುವುದು ಎಂದರೆ ಒಂದು ಜಾತಿಯ ಮೂರು ಕುಟುಂಬಗಳಿಗೆ ಕೂತುಣ್ಣುವ ವ್ಯವಸ್ಥೆ ಮಾಡುವುದು ಎಂದು ಸಹ ಪೆರಿಯಾರ್ ಬರೆದಿದ್ದಾರೆ.
ಕುಟುಂಬಕ್ಕೆ ಮನೆ ಮತ್ತು ಆದಾಯ ಇದೆ ಎಂದು ತಿಳಿದ ಕೆಲವು ಶೂದ್ರರು ಸಹ ಬೆಂಗಳೂರಿನಲ್ಲಿ ರಸ್ತೆ ಮಧ್ಯೆಯೇ ದೇವಾಲಯ ಕಟ್ಟಿ, ಒತ್ತಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ವಿಧಾನ ಸೌಧಕ್ಕೆ ಹತ್ತಿರ, ಬಸ್ ರೈಲು ನಿಲ್ದಾಣದ ಬಳಿ ವಸತಿ ವ್ಯವಸ್ಥೆಗೆ ಅನುಕೂಲ ಆಗುವ ದೇವಾಲಯ ಯಾರಿಗೆ ಬೇಡ? ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಮುಸ್ಲಿಂ, ಕ್ರಿಶ್ಚಿಯನರು ಕೂಡ ತಮ್ಮ ಕಾಲುಹಾದಿಯ ಮಂದಿರ ಮಾಡಿಕೊಂಡಿದ್ದಾರೆ. ರಾಜ್ಯದ ರಾಜಕೀಯದ ನಾಡಿ ಚರ್ಚೆಯ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಇಂತಾ ಮೂರ್ನಾಲ್ಕು ಬ್ರಾಹ್ಮಣರ ಫುಟ್‍ಪಾತ್ ಮಂದಿರಗಳು ಇವೆ. ದಶಕದಲ್ಲಿ ಹತ್ತಿರದಲ್ಲೇ ಬಂಗಲೆ ಖರೀದಿ ಆಗಿದೆ. ಫುಟ್‍ಪಾತ್ ಮಂದಿರಗಳನ್ನು ಉರುಳಿಸುವಂತೆ ಸುಪ್ರೀಂ ಕೋರ್ಟ್ ಕಟ್ಟಳೆ ಇದೆ. ಆದರೆ ಯಾವ ಆಡಳಿತಕ್ಕೂ ಅದನ್ನು ಜಾರಿಗೆ ತರುವ ಧೈರ್ಯ ಇಲ್ಲ.
ಹಿಂದೊಂದು ಕಾಲದಲ್ಲಿ ದೇವರು ಸುಲಭ ಲಭ್ಯನಲ್ಲ ಎನ್ನಲು ಮತ್ತು ಮಾನವರ ಕೆಟ್ಟ ಕೆಲಸ ನೋಡದಿರಲಿ ಎಂದು ಬೆಟ್ಟದ ಮೇಲೆ ಆಲಯ ಕಟ್ಟುತ್ತಿದ್ದರು. ಈಗ ಎಲ್ಲಿ ಜನ ಓಡಾಡುತ್ತಾರೋ ಅಲ್ಲೇ ಗುಡಿ. ಜನರಿಗೂ ಆತುರ. ಭಕ್ತಿ ಎಂದು ಅವಸರವಾಗಿ ನಮಸ್ಕರಿಸಿ ಓಡಬೇಕು. ಗುಡಿಯವರ ಕಾತರ ಎಷ್ಟು ಹಾಕಿದರು ಎಂದು? ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವಿಹಿಂಪದ ಚಂಪತ್ ರಾಯ್ ದೇವಾಲಯ ರಾಮಾನಂದ ಇಲ್ಲವೇ ರಾಮ ನಂದಿ ಪಂಥಕ್ಕೆ ಸೇರಿದ್ದು ಎಂದು ಹೇಳಲು ಮುಖ್ಯ ಕಾರಣ ಮುಂದಿನ ಅಧಿಕಾರ ಮತ್ತು ಆದಾಯ. ಉಡುಪಿಯಲ್ಲಿ ಬಿಜೆಪಿ ದಯೆಯಿಂದ ರಾತೋರಾತ್ರಿ ದೇವಾಲಯ ಬೋರ್ಡನ್ನು ಮಠ ಮಾಡಿದ್ದರು. ಅದಕ್ಕೆ ನೆರವಾದವರಿಗೆ ಮಠ ಸಾರ್ವಜನಿಕ ಅಲ್ಲ ಎಂಬ ಸಣ್ಣ ಅರಿವು ಕೂಡ ಇರಲಿಲ್ಲ.
ನಾಲ್ವರು ಶಂಕರಾಚಾರ್ಯರಲ್ಲಿ ತುಂಬ ಕಟುವಾಗಿ ವಿರೋಧಿಸಿದವರು ಎಂದರೆ ಒಡಿಶಾದ ಪುರಿಯ ಗೋವರ್ಧನ ಪೀಠದ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು. ಅಪೂರ್ಣ ಮಂದಿರದಲ್ಲಿ ಪ್ರೇತಗಳು ಓಡಾಡುತ್ತವೆ. ಪ್ರಧಾನಿ ಮೋದಿಯವರು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಮಾಡುವಾಗ ನಾನು ಹೊರಗೆ ನಿಂತು ಚಪ್ಪಾಳೆ ತಟ್ಟಬೇಕೆ ಎಂದೆಲ್ಲ ನಿಶ್ಚಲಾನಂದ ಸರಸ್ವತಿ ಪ್ರಶ್ನಿಸಿದ್ದಾರೆ. ಹಿಂದುಳಿದವರು ಅವರ ದೇವಾಲಯ ಅವರೇ ಪ್ರತಿಷ್ಠಾಪಿಸಿಕೊಳ್ಳಬೇಕು ಎಂದು ಕ್ರಾಂತಿ ಕಾರ್ಯ ಮಾಡಿದವರು ಮತ್ತು ಸಾರಿದವರು ಬ್ರಹ್ಮರ್ಷಿ ನಾರಾಯಣ ಗುರುಗಳು. ನಾರಾಯಣ ಗುರುಗಳನ್ನು ವೈದಿಕರು ಹಿಂದೂ ಧರ್ಮ ಹಾಳು ಮಾಡುತ್ತಿದ್ದಾರೆ ಎಂದು 14 ವರುಷ ಕೋರ್ಟಿಗೆ ಅಲೆದಾಡಿಸಿದ್ದರು. ಪ್ರಧಾನಿ ಮೋದಿಯವರು ತಮ್ಮನ್ನು ಹಿಂದುಳಿದ ವರ್ಗದವರು ಎಂದು ಹೇಳಿಕೊಂಡಿದ್ದಾರೆ. ಅವರ ವೃತ್ತಿ ಜಾತಿಯ ಮೇಲೆ ಅವರನ್ನು ವೈಶ್ಯ ಎನ್ನಬಹುದು. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ವೈಶ್ಯರು, ಶೂದ್ರರೆಲ್ಲ ಪಾಪ ಯೋನಿಯಿಂದ ಹುಟ್ಟಿದವರು ಎಂದಿದ್ದಾನೆ. ನಾರಾಯಣ ಗುರುಗಳ ತತ್ವದಂತೆ ಮೋದಿಯವರಿಗೆ ರಾಮ ಪ್ರಾಣ ಪ್ರತಿಷ್ಠೆ ಮಾಡುವ ಹಕ್ಕು ಇದೆ. ಆದರೆ ಚಾತುರ್ವರ್ಣ ಬಯಸುವ ವೈದಿಕ ಹಿಂದೂ ಇದನ್ನು ಒಪ್ಪುವುದಿಲ್ಲ. ಭಗವದ್ಗೀತೆಯಲ್ಲಿ ಅವರನ್ನು ತಾನೆ ಶ್ರೀಕೃಷ್ಣನು ಪುಣ್ಯ ಯೋನಿಗೆ ಹುಟ್ಟಿದವರು ಎಂದು ಹೇಳಿರುವುದು!
ಉತ್ತರಾಖಂಡದ ಬದರಿಕಾಶ್ರಮದ ಜ್ಯೋತಿರ್ಮಠ ಇಲ್ಲವೇ ಜೋಶಿ ಮಠದ ಸ್ವಾಮಿ ಅವಿಮುಕ್ತೇಶ್ವರ ಮಹರಾಜ್ ಅವರು ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠೆ ಸನಾತನ ವೈದಿಕ ಧರ್ಮಕ್ಕೆ ವಿರೋಧವಾದುದು ಎಂದಿದ್ದಾರೆ. ನಾಲ್ವರು ಶಂಕರಾಚಾರ್ಯರು ಕೂಡ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಸಹ ಇವರು ಹೇಳಿದ್ದಾರೆ. ಕಾಂಗ್ರೆಸ್ಸಿನ ಅಗ್ರ ನಾಯಕರು ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದಾಗ ಕೆಲವು ಬಿಜೆಪಿ ನಾಯಕರು ಅರಚಿದ್ದು ಪ್ರಕಟಣೆಗೆ ಸಹ ಅರ್ಹವಲ್ಲ. ಆದರೆ ಶಂಕರಾಚಾರ್ಯರು ಬರುವುದಿಲ್ಲ ಎಂದುದಕ್ಕೆ ಯಾವ ಬಿಜೆಪಿ ನಾಯಕರೂ ಬಾಯಿ ಬಿಡುತ್ತಿಲ್ಲ. ಗುಜರಾತಿನ ದ್ವಾರಕಾ ಪೀಠದ ಸದಾನಂದ ಸರಸ್ವತಿಯವರು ಮೋದಿಯವರು ಆಲಯ ಉದ್ಘಾಟನೆ ಮಾಡುವುದನ್ನು ಬೆಂಬಲಿಸಿದ್ದಾರೆ. ಆದರೆ ಉದ್ಘಾಟನೆಗೆ ಹೋಗುವ ಸೂಚನೆ ನೀಡಿಲ್ಲ. ಶೃಂಗೇರಿ ಶಾರದಾ ಪೀಠದ ಸ್ವಾಮಿ ಭಾರತೀ ತೀರ್ಥ, ವಿಧುಶೇಖರ ಭಾರತಿಯವರದು ಗಾಢ ಮೌನ. ಅಂದರೆ ಅವರದು ದ್ವಾರಕಾ ಪೀಠದ ಸ್ವಾಮೀಜಿಯವರ ಅಭಿಮತ ಇರಬಹುದು. ಒಟ್ಟಾರೆ ಶಂಕರಾಚಾರ್ಯರ ಮಠಗಳ ನಡುವೆ ರಾಮ ಮಂದಿರವು ಭಿನ್ನಮತ ಹುಟ್ಟುಹಾಕಿದೆ.
ದೇವರು, ಧರ್ಮಗಳನ್ನು ಕೆಲವರ ಯಜಮಾನಿಕೆಗೆ ಕೊಟ್ಟ ಜನಸಾಮಾನ್ಯರು ಇಂಗು ತಿಂದ ಮಂಗ ಆಗದಿದ್ದರೆ ಸರಿ.
ಭಕ್ತಿ ಎಂಬುದು ತೋರುಂಬ ಲಾಭ ಎಂದಿದ್ದಾರೆ ಅಲ್ಲಮ ಪ್ರಭುಗಳು. ನಿಮಗೆ ತೋರಿಸಿ ಅವರು ಉಣ್ಣಲು ಇರುವವುಗಳೇ ಭಕ್ತಿ ಪ್ರದರ್ಶನ
ಬರಹ: ಪೇರೂರು ಜಾರು