ಮತವಿಭಜನೆ ಮಾಡದೆ ರಮಾನಾಥ ರೈ ಗೆಲ್ಲಿಸಬೇಕು : ಚಂದ್ರಶೇಖರ ಪೂಜಾರಿ
ಬಂಟ್ವಾಳ : ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈಯವರನ್ನು ಗೆಲ್ಲಿಸಬೇಕು. ಕ್ಷೇತ್ರದ ಜನರು ಮತವಿಭಜನೆ ಮಾಡದೆ ಎಲ್ಲಾ ಮತಗಳನ್ನು ರೈಯವರಿಗೆ ನೀಡಬೇಕು ಎಂದು ನ್ಯಾಯವಾದಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ವಿನಂತಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಇಂತಹ ಸನ್ನಿವೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಇಲ್ಲವಾದರೆ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತವೆ. ಎಸ್ ಡಿಪಿಐ ಮತ್ತು ಬಿಜೆಪಿಗೆ ಮತಹಾಕಿದರೆ ಕೋಮುಶಕ್ತಿಗಳು ಶಕ್ತಿಯುತವಾಗುತ್ತವೆ. ಜಾತ್ಯತೀತ ಭಾರತದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಮಾತ್ರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ರಮಾನಾಥ ರೈ ಅವರನ್ನು ಜನರು ದೇವತಾ ಮನುಷ್ಯನಂತೆ ನೋಡುತ್ತಾರೆ. ಅವರು ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಯ ಹರಿಕಾರರು, ಸಾಮಾಜಿಕ ನ್ಯಾಯದ ರೂವಾರಿ. ಜನಸೇವೆಗಾಗಿಯೇ ಬದುಕಿದ ಅವರನ್ನು ಮತ್ತೊಮ್ಮೆ ನಮ್ಮ ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆ ಮಾಡೋಣ ಎಂದು ಪೂಜಾರಿ ಮನವಿ ಮಾಡಿದರು.
ಜನರು ಬದುಕಿದರೆ, ನೆಮ್ಮದಿಯ ಜೀವನ ಮಾಡಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ದೇಶದಲ್ಲಿ ಸಹೋದರತ್ವ ನೀತಿ ಜನಜನಿತವಾಗಬೇಕು. ಸರ್ವಜನರೂ ಒಂದಾಗಿ ಬಾಳಬೇಕು. ಬಿಜೆಪಿಯ ವಿಭಜನೆ ಸಿದ್ಧಾಂತ ಇದಕ್ಕೆ ತೊಡಕಾಗಿದೆ. ಇಂತಹ ಬಿಜೆಪಿಯನ್ನು ತಿರಸ್ಕರಿಸಿ, ಬಂಟ್ವಾಳದಲ್ಲಿ ರಮಾನಾಥ ರೈಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಪೂರ್ಣ ಬಹುಮತದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ನೆರವಾಗಬೇಕು ಎಂದು ಅವರು ತಿಳಿಸಿದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲಿಗ, ಮಾಜಿ ಪುರಸಭಾ ಸದಸ್ಯ ರಿಯಾಝ್ ಕೆಳಗಿನಪೇಟೆ, ಮಾಜಿ ಪುರಸಭಾ ಸದಸ್ಯೆ ಜೊಸ್ಪಿನ್ ಡಿಸೋಜಾ, ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಚುನಾವಣಾ ಕಚೇರಿ ಉಸ್ತುವಾರಿಗಳಾದ ನಾರಾಯಣ ನಾಯ್ಕ್, ಪರಮೇಶ್ವರ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು