ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಮಿನಿ ವಸ್ತು ಸಂಗ್ರಹಾಲಯ
ಉಜಿರೆ: ಇಲ್ಲಿನ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ 25ನೆಯ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ತೆರೆಯಲಾಗಿದ್ದ ಮಂಜೂಷಾ ವಸ್ತುಸಂಗ್ರಹಾಲಯದ ಪ್ರದರ್ಶನ ಮಳಿಗೆ (ಮಿನಿ ವಸ್ತು ಸಂಗ್ರಹಾಲಯ) ಸಾಹಿತ್ಯ ಪ್ರೇಮಿಗಳ ಜೊತೆಗೆ ಎಲ್ಲ ಪ್ರೇಕ್ಷಕರ ಗಮನ ಸೆಳೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿಶೇಷ ಆಕರ್ಷಣೆಯಾದ ‘ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆ’ ಮತ್ತು ‘ಮಂಜೂಷಾ ವಸ್ತು ಸಂಗ್ರಹಾಲಯ’ದಲ್ಲಿ ಸಾವಿರಾರು ವರ್ಷಗಳ ಹಿಂದಿನ ವಸ್ತುಗಳ ಜೊತೆಗೆ, ತಾಡೋಲೆ, ಮತ್ತು ಕಾಗದದ ಹಸ್ತಪ್ರತಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 50 ವರ್ಷಗಳ ಸತತ ಪ್ರಯತ್ನದ ಫಲವೇ ಮಂಜೂಷಾ ವಸ್ತು ಸಂಗ್ರಹಾಲಯ. ಇಲ್ಲಿ ಐತಿಹಾಸಿಕ, ಸಾಮಾಜಿಕ, ಜಾನಪದ ಹಾಗೂ ಸಮಕಾಲೀನ ಕುರುಹುಗಳ ದಾಖಲೆಗಳ ಜೊತೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಆವಿಷ್ಕಾರಗೊಂಡ ಪಳೆಯುಳಿಕೆಗಳೂ ಇವೆ. ಈ ವಿಧವಾಗಿ ಕಲಾತ್ಮಕತೆಯೊಂದಿಗೆ ರೂಪುಗೊಂಡ ಅಪೂರ್ವ ವಸ್ತುಗಳ ಸಂಗ್ರಹಾಲಯ ಸಾವಿರಾರು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಲ್ಲದೇ ಭಾರತೀಯ ಪುರಾತನ ವಸ್ತುಗಳೊಂದಿಗೆ ಪ್ರಪಂಚದಾದ್ಯಂತ ಲಭ್ಯವಾದ ವಸ್ತುಗಳನ್ನು ಸಂಗ್ರಹಿಸಲಾಗಿದೆ.
ಇದರ ಜೊತೆಗೆ ತಾಡೋಲೆ ಹಾಗೂ ಕಾಗದ ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ.
ಕನ್ನಡ, ತುಳು, ತೆಲುಗು, ಮಲೆಯಾಳ, ನಂದಿನಾಗರಿ, ದೇವನಾಗರಿ, ಗ್ರಂಥಾಕ್ಷರ, ತಮಿಳು ಮತ್ತು ಮರಾಠಿ ಲಿಪಿಗಳಲ್ಲಿ ಕೆತ್ತಲಾದ ತಾಳೆಗರಿಗಳ ಸಂಗ್ರಹಗಳು ಜ್ಞಾನವೃದ್ಧಿಗೆ ಪೂರಕವಾಗಿದೆ. ‘ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆ’ಯಲ್ಲಿ ಒಟ್ಟೂ 7,084 ಹಸ್ತಪ್ರತಿ ಮತ್ತು ತಾಳೆಗರಿಗಳನ್ನು ಸಂರಕ್ಷಿಸಲಾಗಿದೆ. ಮಂಜೂಷಾ ಮತ್ತು ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆಯಲ್ಲಿ ಒಟ್ಟೂ 34 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾಚೀನ ಕಾಲದಲ್ಲಿ ಉಪಯೋಗಿಸುತ್ತಿದ್ದ ತಾಳೆಗರಿಗಳು ಮತ್ತು ಅವುಗಳ ಮೇಲೆ ಲಿಪಿಗಳನ್ನು ಕೆತ್ತಲು ಉಪಯೋಗಿಸುತ್ತಿದ್ದ ಕಟಿಗಳ ಸಂಗ್ರಹಗಳನ್ನು ಸಮ್ಮೇಳನದ ಮಿನಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಹತ್ವವನ್ನು ಕಳೆದುಕೊಳ್ಳುತ್ತಿರುವ ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸುವಂತಹ ಉತ್ತಮ ಯೋಜನೆಯಲ್ಲಿ ತೊಡಗಿಸಿಕೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಕ್ಸ್: ಮಂಜೂಷಾ ಹಾಗೂ ‘ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆ’ಯಲ್ಲಿ ಹಸ್ತಪ್ರತಿಗಳನ್ನು ಪಾರಂಪರಿಕ ಮತ್ತು ವೈಜ್ಞಾನಿಕ ವಿಧಾನದಲ್ಲಿ ಕಾಪಾಡಲಾಗುತ್ತಿದ್ದು, ಲವಂಗ, ಬಜೆ ಬೇರು, ಕರ್ಪೂರ, ಸಿಲಿಕಾ ಜೆಲ್, ಸೀಡರ್ ಮರದ ಎಣ್ಣೆ, ಕಾಳು ಮೆಣಸು, ಓಮಕಾಳು, ಚೆಕ್ಕೆ, ಪಿ.ಡಿ.ಬಿ. ಪ್ಯಾರಾಡೈಕ್ಲೋರ್ ಬೆಂಜಿನ್ ಮತ್ತು ಥೈಮೋಲ್ ಮುಂತಾದ ಸಂರಕ್ಷಕಗಳನ್ನು ಬಳಸಿ ಅಮೂಲ್ಯ ಪ್ರತಿಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗುತ್ತಿದೆ. ಸಮ್ಮೇಳನದ ಮಳಿಗೆಯಲ್ಲಿ ಈ ಸಂರಕ್ಷಕಗಳನ್ನು ಪ್ರದರ್ಶಿಸಲಾಗಿತ್ತು.
ಕೋಟ್: “ಮಿನಿ ವಸ್ತು ಸಂಗ್ರಹಾಲಯಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ತಾಳೆಗರಿ, ಲಿಪಿಗಳು ಮತ್ತು ಶಾಸನಗಳನ್ನು ಬಹಳ ಕುತೂಹಲದಿಂದ ವೀಕ್ಷಿಸಿದ್ದು ಸಂತೋಷ ನೀಡಿದೆ.” -ಮಮತಾ ಅರುಣ್, ಕ್ಲರ್ಕ್, ‘ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆ’
ಕೋಟ್ 2: “ತಾಳೆಗರಿಯನ್ನು ಎಲ್ಲಾ ಕಡೆ ನೋಡಲು ಸಿಗುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಒಂದು ವಿಶೇಷ ಮಳಿಗೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಇರುವುದು ವಿದ್ಯಾರ್ಥಿಗಳಿಗೆ ಅದರ ಪರಿಚಯವಾಗುವಲ್ಲಿ ಸಹಕಾರಿಯಾಗಿದೆ.” -ಪ್ರೀತಿ ಹಡಪದ, ಪತ್ರಿಕೋದ್ಯಮ ವಿದ್ಯಾರ್ಥಿನಿ. ಉಜಿರೆ.
…
ವರದಿ: ಭಾರತಿ ಹೆಗಡೆ,
ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರ: ಸಮರ್ಥ ಭಟ್,
ಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ