ವೈವಿಧ್ಯಮಯ ವಸ್ತು-ವಿಷಯಗಳಿಗೆ ಸಾಕ್ಷಿಯಾದ ‘ಕವಿಗೋಷ್ಠಿ’
ಉಜಿರೆ, ಫೆ.5: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ನಡೆದ ‘ಕವಿಗೋಷ್ಠಿ’ಯು ವೈವಿಧ್ಯಮಯ ವಸ್ತು-ವಿಷಯಗಳ ಕವನ ವಾಚನಕ್ಕೆ ವೇದಿಕೆಯಾಯಿತು.
ಜಿಲ್ಲೆಯ 20 ಪ್ರಸಿದ್ಧ ಕವಿಗಳು ಹಾಗೂ ಕವಯತ್ರಿಯರು ಭಾಗವಹಿಸಿದ್ದರು. ಪ್ರಸಕ್ತ ರಾಜಕೀಯ ಸನ್ನಿವೇಶ, ವೈಚಾರಿಕತೆ, ಬದುಕಿಗೆ ಮುಳುವಾಗುವ ಮೌಢ್ಯಗಳು, ಏಕತೆಯ ಭಾವನೆ, ಜೀವನಾನುಭವ, ತಾಯಿಯೆಂಬ ಅನನ್ಯ ಭಾವಗಳನ್ನು ಕವನ ವಾಚನದ ಮೂಲಕ ಅರ್ಥಗರ್ಭಿತವಾಗಿ ಪ್ರಸ್ತುತಪಡಿಸಿದರು.
ಕವಿ ಡಾ. ಸುರೇಶ ನೆಗಳಗುಳಿ ‘ಸತ್ತು ಬದುಕಿದ ಹಾಗೆ ಆಗುವುದುಂಟು ಒಮ್ಮೊಮ್ಮೆ’ ಗಜಲ್ ನ ಮುಖೇನ ಬದುಕಿನುದ್ದಕ್ಕೂ ಸಂಭವಿಸುವ ತಪ್ಪಿನಿಂದಾಗುವ ಪರಿಣಾಮವನ್ನು ಅಭಿವ್ಯಕ್ತಪಡಿಸಿದರು. ಕವಿ ಅಚುಶ್ರೀ ಬಾಂಗೇರು ‘ಬೇಕಾಗಿದ್ದಾರೆ’ ಎಂಬ ಶೀರ್ಷಿಕೆಯ ಕವನದಲ್ಲಿ ಅನಿಷ್ಠ ಪದ್ಧತಿ, ಜಾತಿ ಭೇದ, ಮೌಢ್ಯಗಳನ್ನು ಹೊರ ಹಾಕಲು ಗಂಜಲವನ್ನು ನೀಡಿ ಪರಿಶುದ್ಧ ಮಾಡುವವರು ಬೇಕಾಗಿದ್ದಾರೆ ಎಂದು ಕರೆ ನೀಡಿದರು.
ಕವಿ ಮರಿಯನ್ ಪಿಯುಸ್ ಡಿ’ಸೋಜಾ ‘ಬೇಕಿದೆ ಮಾನವೀಯತೆಯ ಸ್ಪರ್ಶ’ ಕವಿತೆಯಲ್ಲಿ ಏಕತೆಯನ್ನು ಬಿಂಬಿಸಿದರು. ಮಲ್ಲೇಶಯ್ಯ ಎಚ್.ಎಂ. ‘ಕತ್ತಲೆ ಬೆತ್ತಲೆಯೆನು’ ಕವಿತೆಯಲ್ಲಿ ಅತ್ಯಾಚಾರವಾದ ಹೆಣ್ಣಿನ ವೇದನೆಯನ್ನು ವರ್ಣಿಸಿದರು. ವಿಂಧ್ಯಾ ಎಸ್. ರೈ ಅವರ ‘ಶಾಶ್ವತಿ’ ಕವನ ಹಾಗೂ ರಮೇಶ್ ನಾಯ್ಕ ಮತ್ತು ಅರುಣಾ ಶ್ರೀನಿವಾಸ್ ಅವರ ‘ಅಮ್ಮ’ ಕವನ ಹಾಗೂ ಹರೀಶ್ ಮಂಜೊಟ್ಟಿ ಅವರ ‘ನಿರಾಭರಣ ಸುಂದರಿ’ ಕವನಗಳು ಜೀವನದಲ್ಲಿ ತಾಯಿ ಪಡುವ ಕಷ್ಟಕಾರ್ಪಣ್ಯಗಳನ್ನು ಬಿಂಬಿಸಿದವು.
ಮುಂಬರುವ ಚುನಾವಣೆಯ ಕುರಿತು ‘ಮತ್ತೆ ಬಂದಿದೆ ಚುನಾವಣೆ ನಾನು ಗೇಯಬೇಕು ಸಾಕಷ್ಟು ಮೇಯಬೇಕು’ ಎಂದು ರಾಜಕೀಯದ ವಾಸ್ತವ ಸಂಗತಿಯನ್ನು ಚಂದ್ರಾವತಿ ಬಡ್ಡಡ್ಕ ಪ್ರಸ್ತುತಪಡಿಸಿದರು. ರೇಣುಕಾ ಸುಧೀರ್ ಅವರ ಕವನ ಡೆಂಗ್ಯೂ ಜ್ವರದಿಂದ ಅನುಭವಿಸುವ ಹಿಂಸೆ ಹಾಗೂ ಸುಧಾ ನಾಗೇಶ್ ಅವರ‘ಬದುಕು’ ಕವನ ಕೊರೊನಾ ಜ್ವರದಿಂದಾಗಿ ವಿದ್ಯಾರ್ಥಿಗಳ ಮೇಲೆ ಆಗಿರುವ ಪರಿಣಾಮ ನೆರೆದಿದ್ದ ಮನಸ್ಸುಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡಿತು.
ಗಜಲ್ ಮೂಲಕ ಸುಭಾಷಿಣಿ ಹಾಗೂ ಪೂಜಾ ಪಕ್ಕಳ ವಿಶ್ವದಾದ್ಯಂತ ಹಲವು ಮಾನವೀಯತೆಯನ್ನು ಸೆಳೆಯುವಂಥಹ ವಿಷಯಗಳು ಮತ್ತು ಮಾನವೀಯತೆ ಕದವ ತಟ್ಟುವ ಹಲವು ಪ್ರಕರಣಗಳನ್ನು ಮೂಲವಾಗಿಸಿಕೊಂಡು ‘ಮಾನವತೆ ಮೈಮರೆತು ಮಲಗಿದ್ದಲ್ಲಿ’ ಕವನ ವಾಚಿಸಿದರು.
ಮುನವ್ವರ್ ಜೋಗಿಬೆಟ್ಟು ಪರಿಸರ ಜಾಗೃತಿಯ ‘ಆಕೇಶಿಯಾ’ ಕವನ ವಾಚಿಸಿದರು. ಶಂಕರ್ ತಾಮ್ಹನ್’ಕರ್ ಚಂದ್ರನ ಆಕಾರದ ಮೇಲೆ ಬರೆದ ಕವನ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಮುಹಮ್ಮದ್ ಸಿಂಸಾರುಲ್ ಹಕ್ ಯುವಜನತೆಯನ್ನು ಒಂದುಗೂಡಿಸುವ ಕವನವನ್ನು ಪ್ರಸ್ತುತಪಡಿಸಿದರು.
ಗುಣಾಜೆ ರಾಮಚಂದ್ರ ಭಟ್ ‘ಭಾವ ದಳ’ ಕವನ ವಾಚಿಸಿದರು. ಕಾವೀ ಕೃಷ್ಣದಾಸ ‘ನಿನ್ನ ನೀ ಕೇಳಿಕೋ’ ಕವನ, ಡಾ. ಗೀತಾ ಕುಮಾರಿ ‘ಕಲಿಯುಗ ಭೀಮ’ ಕವನ, ವಿದ್ಯಾಶ್ರೀ ಅಡೂರು ‘ಮರಳಿ ಮಣ್ಣಿಗೆ’ ಎಂಬ ಕವನವನ್ನು ವಾಚಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ, “ವಸ್ತು ವಿಷಯಗಳನ್ನು ಆರಿಸಿ ಕವನಗಳನ್ನು ಕಟ್ಟುವ ರೀತಿ ಹಾಗೂ ಸ್ವರೂಪ, ಭಾಷೆ ಬಹಳ ಮುಖ್ಯವಾಗಿರುತ್ತದೆ. ಈ ಕವಿಗೋಷ್ಠಿ ಒಳ್ಳೆಯ ವಿಚಾರಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಸ್ವಾಗತಿಸಿ, ಕೆಮ್ಮಟೆ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ವಸಂತಿ ಟಿ. ನಿಡ್ಲೆ ವಂದಿಸಿದರು. ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಫೋಟೋ: ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಮಾತನಾಡಿದರು.
ವರದಿ: ಕ್ರೀಷ್ಮಾ ಆರ್ನೋಜಿ
ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರ: ಶಶಿಧರ ನಾಯ್ಕ್,
ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ