ಸಾಹಿತ್ಯ ಸಮ್ಮೇಳನದಲ್ಲಿ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ
ಉಜಿರೆ, ಫೆ.4: ಸಾಹಿತ್ಯವು ಭಾಷೆ ಮತ್ತು ಅಕ್ಷರದ ಸಮ್ಮಿಶ್ರಣ. ಪತ್ರಕರ್ತರು ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರ ಗುರುತಿಸುವಿಕೆ ಒಂದು ದಿನಕ್ಕೆ ಮುಗಿದರೂ ಸಾಹಿತಿಗಳ ಗುರುತಿಸುವಿಕೆ ತುಂಬಾ ದಿನ ಇರುತ್ತದೆ ಎಂದು ಅಮರಸುಳ್ಯ ಅಧ್ಯಯನ ಕೇಂದ್ರ ಸುಳ್ಯದ ನಿರ್ದೇಶಕ ಡಾ. ಬಿ. ಪ್ರಭಾಕರ ಶಿಶಿಲ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯದೆಡೆಗೆ ಜನರ ಒಲವು ಕಡಿಮೆಯಾಗುತ್ತಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷಾ ಪ್ರಾಧ್ಯಾಪಕರ ಭಾಗವಹಿಸುವಿಕೆ ಕಡ್ಡಾಯಗೊಳಿಸಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಡಾ. ಹೇಮಾವತಿ ವೀ. ಹೆಗ್ಗಡೆಯವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಪ್ರಶಸ್ತಿ ಘೋಷಿಸಬೇಕು. ಆ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, “ಜನರನ್ನು ತಪ್ಪು ದಾರಿಯಲ್ಲಿ ನಡೆಸುವ ಕಾವ್ಯ ಸಾರ್ಥಕವಾಗದು. ಗದ್ಯವೇ ಪದ್ಯದ ನಿಜವಾದ ಕಥಾವಸ್ತು. ಕಟ್ಟುಪಾಡುಗಳನ್ನೊಳಗೊಂಡ ಕಾವ್ಯಗಳು ಮತ್ತೆ ಸೃಷ್ಟಿಯಾಗಲಿ. ಕವಿಗಳಿಂದ ಲೋಕಕ್ಕೆ ಸಂದೇಶವನ್ನು ನೀಡುವಂಥ ಕಾವ್ಯ ಉತ್ಕರ್ಷತೆಯನ್ನು ಕಾಣುವ ಮೂಲಕ ಕರಾವಳಿಯಲ್ಲಿ ಸಾಹಿತ್ಯ ಪ್ರೀತಿ ಹೆಚ್ಚಲಿ” ಎಂದು ಆಶಿಸಿದರು.
ಸುಪ್ರೀತಾ ಚರಣ್ ಪಾಲಪ್ಪೆಯವರ ‘ಭಾವಸಾರ’; ಸುಭಾಷಿಣಿ ಬೆಳ್ತಂಗಡಿಯವರ ‘ಒಲವ ಕನವರಿಕೆ’; ಪ್ರಕಾಶ ಪ್ರಭು ಅವರ ‘ಏಳಿ ರಾಗಗಳೇ’; ದಾ.ನ. ಉಮಣ್ಣನವರ ‘ದೇವರ ಬೇಸಾಯ’; ಪ್ರೊ. ಎನ್.ಜಿ. ಪಟವರ್ಧನ್ ಅವರ ‘ರಾಗಲೀಲೆ’; ಅಶ್ವಿನಿ ಕಿಡಿಬೈಲು ಅವರ ‘ಸೌಪರ್ಣಿಕಾ’; ಮಂಜುನಾಥ್ ಭಟ್ ಅವರ ‘ಕುಡುಮ ರತ್ನ’ ಮತ್ತು ‘ಲೋಕಾಭಿರಾಮ’; ಕೆ. ಎ.ಯುಂ. ಅನ್ಸಾರಿ ಮೂಡಂಬೈಲು ಅವರ ‘ಚೆಂಡೆ’; ಶ್ರೀಮತಿ ಆಶಾ ಅಡೂರು ಅವರ ‘ಕಾವ್ಯಪ್ರಭ’; ಮಲ್ಲೇಶಯ್ಯ ಹೆಚ್.ಎಂ. ಅವರ ‘ಭಾವಸುಮ’; ಜಯಪ್ರಕಾಶ್ ಪುತ್ತೂರು ಅವರ ‘ಬದುಕಲು ಬಿಡಿ ಪ್ಲೀಸ್’; ಹರ್ಷಿತ್ ಪಿಂಡಿವನ ಅವರ ‘ಮಾತು-ಮಂಥನ’; ಶಕುಂತಲಾ ಭಟ್ ಅವರ ‘ಅರ್ಥ –ಅನರ್ಥ’ ಮತ್ತು ‘ಕಿನ್ನರಿ’; ಶಿಕಾರಿಪುರ ಈಶ್ವರ ಭಟ್ ಅವರ ‘ಮಾನಸ-ಯಾನ’; ಡಾ. ಕೃಷ್ಣಮೂರ್ತಿ ಟಿ. ಅವರ ‘ವಿದ್ಯಾರ್ಥಿ ವಿಜಯಪಥ’; ಚಂದ್ರಶೇಖರ್ ಅಂತರ ಅವರ ‘ಗುಬ್ಬಿಗೂಡು’ ಸೇರಿದಂತೆ ಹಲವು ಕಥಾ ಸಂಕಲನ, ಕವನ ಸಂಕಲನ ಮತ್ತು ಕಾದಂಬರಿಗಳು ಲೋಕಾರ್ಪಣೆಗೊಂಡವು.
ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹಾಗೂ ಕೃತಿಗಳ ರಚನಾಕಾರರು ಉಪಸ್ಥಿತರಿದ್ದರು. ಪ್ರಮೋದ್ ಆರ್. ನಾಯಕ್ ಸ್ವಾಗತಿಸಿ, ಗಂಗಾರಾಣಿ ಜೋಶಿ ವಂದಿಸಿದರು. ಬಿ. ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.