ದೇಶೀ ಶಿಕ್ಷಣದ ನೆಲೆಯಲ್ಲಿ ಹೊಸ ಶಿಕ್ಷಣ ನೀತಿಯ ಯಶಸ್ಸು ಕಾದು ನೋಡಬೇಕಿದೆ: ಪ್ರೊ. ಪಿ.ವಿ. ಕೃಷ್ಣ ಭಟ್ಟ

ಉಜಿರೆ, ಮಾ.29: ಭಾರತದ ದೇಶೀಯ ಶಿಕ್ಷಣ ಪದ್ಧತಿಗಳು ಜೀವನ ಪದ್ಧತಿ, ಮೌಲ್ಯಗಳನ್ನು ಆಧರಿಸಿ ಇದ್ದವು. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಬಗ್ಗೆ ಪುನರ್ ವಿಮರ್ಶೆ ನಡೆದಿದೆ. ಹೊಸ ಶಿಕ್ಷಣ ನೀತಿಯೂ ಬಂದಿದೆ. ಆದರೆ ಅದು ಇದುವರೆಗೆ ಉಂಟಾಗಿರುವ ಕೊರತೆಗಳನ್ನು ಎಷ್ಟರ ಮಟ್ಟಿಗೆ ನಿವಾರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಒಡಿಷಾದ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ವಿ. ಕೃಷ್ಣ ಭಟ್ಟ ಅವರು ಹೇಳಿದರು.

ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಮಾ.29ರಂದು ಅವರು ‘ಇಂಡೀಜಿನಸ್ ಪ್ರಾಕ್ಟೀಸಸ್ ಇನ್ ಹೈಯರ್ ಎಜುಕೇಶನ್ ಇನ್ ಇಂಡಿಯಾ: ಸ್ಟೆಪ್ಸ್ ಅಹೆಡ್’ ರಾಷ್ಟ್ರೀಯ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗವು ನವದೆಹಲಿಯ ರಾಷ್ಟ್ರೀಯ ಸಮಾಜ ವಿಜ್ಞಾನ ಪರಿಷದ್ ಸಹಯೋಗ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಸೋಶಲ್ ಸೈನ್ಸ್ ರಿಸರ್ಚ್

(ಐಸಿಎಸ್ಎಸ್ಆರ್) ಪ್ರಾಯೋಜಕತ್ವದಲ್ಲಿ ಈ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಿದೆ.

“ಶಿಕ್ಷಣಕ್ಕೆ ಮುಖ್ಯವಾಗಿ ಬೇಕಿರುವುದು ಜೀವನದ ದೃಷ್ಟಿ. ಶಿಕ್ಷಣದ ದರ್ಶನ ಜೀವನದ ದರ್ಶನದಿಂದ ರೂಪುಗೊಳ್ಳುತ್ತದೆ. ಭಾರತದ ಶಿಕ್ಷಣ ವ್ಯವಸ್ಥೆಗೆ ಪ್ರಾಚೀನ ಪರಂಪರೆ ಇದೆ. ಜೀವನ ಪದ್ಧತಿಯನ್ನು ಆಧರಿಸಿದ್ದ ಆ ಶಿಕ್ಷಣ ಪರಂಪರೆ ನಾಶವಾಗಿ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಆರಂಭವಾಯಿತು. ಮೌಲ್ಯವಿಹೀನವಾದ ಶಿಕ್ಷಣ ಪದ್ಧತಿಯನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇವೆ. ಅದು ದೊಡ್ಡ ದುರಂತ. ಆದರೆ ಈಗ ಶಿಕ್ಷಣದ
ವ್ಯವಸ್ಥೆಯನ್ನು ರಾಷ್ಟ್ರೀಯ ನೆಲೆಗಟ್ಟಿನ ಮೇಲೆ ರೂಪಿಸುವ ಕಾರ್ಯ ಆಗುತ್ತಿದೆ” ಎಂದು ಅವರು ಹೇಳಿದರು.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದಂತಹ ಕಲ್ಪನೆಯೇನೆಂದರೆ ಧರ್ಮಾಧಿಷ್ಠಿತ ಸಮಾಜ. ಕೃತಯುಗದಲ್ಲಿ ಜನರು ತಮ್ಮ ತಮ್ಮ ಧರ್ಮವನ್ನು ಆಚರಣೆ ಮಾಡುತ್ತಿದ್ದುದರಿಂದ ಇಡೀ ಸಮಾಜದ ರಕ್ಷಣೆ ಧರ್ಮದ ಮೂಲಕ ಆಗುತ್ತಿತ್ತು ಎಂಬ ವರ್ಣನೆ ಇದೆ. ‘ಧರ್ಮ’ ವಿಶಾಲ ಅರ್ಥವುಳ್ಳದ್ದು, ಇಡೀ ಸಮಾಜದ ವ್ಯವಸ್ಥೆಗೆ ಆಧಾರವಾಗಿರುವುದು. ಅದನ್ನು ಅವಗಣಿಸಿ ಶಿಕ್ಷಣದ ವ್ಯವಸ್ಥೆಯನ್ನು ರೂಪಿಸುವ ಕೆಲಸ ನಮ್ಮ ದೇಶದಲ್ಲಿ ನಡೆದಿತ್ತು ಎಂದು ಅವರು ತಿಳಿಸಿದರು.

ಭಾರತದ ಮತ-ಧರ್ಮ ಪರಿಕಲ್ಪನೆ ವಿಶಿಷ್ಟವಾದುದು. ಆದರೆ ಜೀವನ ಪದ್ಧತಿಯಾದ ಧರ್ಮವನ್ನು ‘ರಿಲಿಜಿಯನ್’ ಎಂದು ಭಾಷಾಂತರಿಸಿ ‘ಧರ್ಮ’ ಪದದ ಅರ್ಥವನ್ನು ಕುಗ್ಗಿಸಿ, ಜಾತ್ಯತೀತತೆಯ ಹೆಸರಿನಲ್ಲಿ ಭಾರತದ ಪ್ರಾಚೀನ ಪರಂಪರೆಯನ್ನು ಅಲ್ಲಗಳೆಯುವ ಅಭ್ಯಾಸ ಆರಂಭವಾಯಿತು ಎಂದು ಅವರು ವಿಮರ್ಶಿಸಿದರು.

ಧರ್ಮಸ್ಥಳದ ಬಗ್ಗೆ ಮಾತನಾಡಿದ ಅವರು, “ಒಂದು ಧಾರ್ಮಿಕ ಸಂಸ್ಥೆ ಸಮಾಜಕ್ಕೆ ಏನೇನು ಮಾಡಬಹುದು ಎಂಬುದನ್ನು ಧರ್ಮಸ್ಥಳ ಕ್ಷೇತ್ರ ಮಾಡಿ ತೋರಿಸಿದೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಕ್ಷೇತ್ರವು ಧರ್ಮ ಸಾಮರಸ್ಯದ, ಜಾತಿ ಭೇದ ಮೀರಿದ, ನಿತ್ಯ ಅನ್ನದಾನದ, ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ಸ್ಥಳವಾಗಿದೆ” ಎಂದು ಬಣ್ಣಿಸಿದರು.

ಮುಖ್ಯ ಅತಿಥಿ, ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ (Deemed to be University) ಪ್ರೊ – ವೈಸ್ – ಚಾನ್ಸೆಲರ್ ಡಾ. ಎಂ. ಎಸ್. ಮೂಡಿತ್ತಾಯ ಮಾತನಾಡಿ, ಜೀವನದಲ್ಲಿ ಸಂತೋಷವಾಗಿರುವುದಕ್ಕೆ ಬೇಕಾದ ಸಾಧನ ಎಂದರೆ ಶಿಕ್ಷಣ. ಶಿಕ್ಷಣವು ನಮ್ರತೆಯನ್ನು ನೀಡಬೇಕು. ಆದರೆ ಉನ್ನತ ಶಿಕ್ಷಣದ ಸರಕೀಕರಣವಾಗುತ್ತಿದೆ. ಜೀವನದಲ್ಲಿ ಸಂಪತ್ತೂ ಬೇಕು. ಆದರೆ ಲಾಭ ಹೆಚ್ಚಿಸುವುದೇ ಉದ್ದೇಶವಾಗಬಾರದು. ಹಾಗಾಗಿ ಶಿಕ್ಷಣದಲ್ಲಿ ದೇಶೀಯತೆ ಆರಂಭವಾಗಬೇಕು. ಇಂದಿನ ಯುವಜನತೆ ನಮ್ಮ (ದೇಶದ) ಭೂತಕಾಲದ

ಅನುಭವ, ಭವಿಷ್ಯದ ಆಕಾಂಕ್ಷೆಯೊಂದಿಗೆ ವರ್ತಮಾನದಲ್ಲಿ ಪ್ರಯೋಗಶೀಲರಾಗಿ ಸಾಧನೆ ಮಾಡಬೇಕು ಎಂದರು.

ನವದೆಹಲಿಯ ಐಸಿಎಸ್ಎಸ್ಆರ್ ಸದಸ್ಯೆ ಹಾಗೂ ಇಂಡಿಯಾ ಪಾಲಿಸಿ ಫೌಂಡೇಶನ್ ಅಧ್ಯಕ್ಷೆ ಪ್ರೊ. ಶೀಲಾ ರೈ (Prof. Sheila Rai) ಮಾತನಾಡಿ, “ದೇಶವು ಉತ್ತಮ ಮಾನವ ಸಂಪನ್ಮೂಲವನ್ನು ಹೊಂದಿದ್ದು, ಅದು ಸದ್ಬಳಕೆಯಾಗಬೇಕು. ಚ್ಯಾಟ್’ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ಇತ್ಯಾದಿ ಸವಾಲುಗಳನ್ನು ಎದುರಿಸಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕ ರೆ ನೀಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪೂರ್ವಿ ಹಾಗೂ ತಂಡದವರು ಪ್ರಾರ್ಥಿಸಿದರು. ಸೆಮಿನಾರ್ ಸಂಯೋಜಕ, ತುಮಕೂರು ವಿಶ್ವವಿದ್ಯಾನಿಲಯದ ನಿರ್ದೇಶಕ (ಸಂಶೋಧನೆ) ಡಾ. ರಮೇಶ್ ಸಾಲಿಯಾನ್ ಸ್ವಾಗತಿಸಿದರು. ಸೆಮಿನಾರ್ ಸಂಘಟನಾ ಕಾರ್ಯದರ್ಶಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗಣರಾಜ್ ಕೆ. ವಂದಿಸಿದರು. ಪ್ರಾಧ್ಯಾಪಕ ಡಾ. ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಚಾರ ಗೋಷ್ಠಿಗಳು ನಡೆದವು.

Related Posts

Leave a Reply

Your email address will not be published.