ಶಿರ್ವ :ಮೆಸ್ಕಾಂ ಸಿಬ್ಬಂದಿಗಳ ಮೇಲೆ ನುಗ್ಗಿದ ಕಾರು
ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯಲ್ಲಿ ಮೆಸ್ಕಾಂ ಸಿಬ್ಬಂದಿ ಗಳು ಟ್ರಾನ್ಸ್ಪರ್ಮಾರ್ ಅಳವಡಿಸುತ್ತಿದ್ದ ವೇಳೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸುತ್ತಿದ್ದರೂ ಮುನ್ನಗ್ಗಿ ಬಂದ ಕಾರೊಂದು ಕಾರ್ಯನಿರತ ಮೆಸ್ಕಾಂ ಸಿಬ್ಬಂದಿಗಳಿಗೆ ಗುದ್ದಿದ ಮೂವರು ಗಾಯಗೊಂಡಿದ್ದಲ್ಲದೆ, ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದ ಘಟನೆ ಶಿರ್ವದಲ್ಲಿ ಸಂಭವಿಸಿದೆ.
ಶಿರ್ವ ನ್ಯಾರ್ಮ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಕೆಲಸ ಪ್ರಗತಿಯಲ್ಲಿದ್ದು, 12 ಮಂದಿ ಮೆಸ್ಕಾಂ ಸಿಬ್ಬಂದಿ ಕೆಲಸ ಮಾಡುತ್ತಿದ್ದರಿಂದ ಕೆಲ ಹೊತ್ತು ಕಾಮಗಾರಿಗಾಗಿ ರಸ್ತೆ ತಡೆ ನಡೆಸಲಾಗಿತ್ತು, ಈ ಸಂಧರ್ಭ ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಸಾಗುತ್ತಿದ್ದ ರಿಜ್ಜ್ ಕಾರಿನ ಚಾಲಕ ನೇರವಾಗಿ ಮೆಸ್ಕಾಂ ಸಿಬ್ಬಂದಿಗಳ ಮೇಲೇರಿ ಬಂದ ಪರಿಣಾಮ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಇದೇ ಸಂದರ್ಭ ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ಕಾರು ಜಖಂ ಗೊಂಡಿದೆ. ಗಾಯಗೊಂಡ ಸಿಬ್ಬಂದಿಗಳನ್ನು ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಉಂಟಾಗಿ, ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಸಾಗುವವರಿಗೆ ಸಂಕಷ್ಟ ಉಂಟಾಗಿದೆ ಶಿರ್ವ ಪೊಲೀಸರು ಹಾಗೂ ಸಾರ್ವಜನಿಕರು ರಸ್ತೆ ಸಂಚಾರ ಸುಗಮಗೊಳಿಸಲು ಶ್ರಮಿಸಿದ್ದಾರೆ.