ಶಿವಪಾಡಿಯಲ್ಲಿ ಸಾಗುತ್ತಿರುವ ಅತಿರುದ್ರ ಮಹಾಯಾಗದ ಎಂಟನೇ ದಿನದ ಪೂಜಾ ಕಾರ್ಯಗಳು

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಎಂಟನೇ ದಿನ ಮಾರ್ಚ್ 01, 2023 ರ ಬುಧವಾರದಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಪುರುಷಸೂಕ್ತ ಹೋಮ ನೆರವೇರಿತು. ಮಧ್ಯಾಹ್ನದಿಂದ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯುತ್ತಿದ್ದು, ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ಶ್ರೀ ದೇವರ ಅನ್ನ ಸಂತರ್ಪಣೆಯನ್ನು ಸ್ವೀಕರಿಸಿ ಧನ್ಯರಾದರು.

ಸಂಜೆ ಶತಚಂಡಿಕಾ ಯಾಗಮಂಟಪದಲ್ಲಿ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಾಸಾದ ಶುದ್ಧಿ, ಕುಂಡ ಸಂಸ್ಕಾರ ಹೋಮ ಮತ್ತು ಅತಿರುದ್ರ ಯಾಗಮಂಟಪದಲ್ಲಿ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿವೆ. ಇದರೊಂದಿಗೆ ಪ್ರಖ್ಯಾತ ಪ್ರೇರಣಾದಾಯಿ ಮತ್ತು ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಬಿ. ಕೆ. ವೀಣಾ, ಶಿರಸಿ ಅವರಿಂದ ಧಾರ್ಮಿಕ ಉಪನ್ಯಾಸ, ವಿಶ್ವವಿಖ್ಯಾತ ಜಾದೂಗಾರರಾದ ಪ್ರೊ. ಶಂಕರ್ ಹಾಗೂ ಜೂ. ಶಂಕರ್ ಅವರಿಂದ “ಜಾಗೃತಿಗಾಗಿ ಜಾದೂ – ಆಧ್ಯಾತ್ಮಿಕ ಜಾದೂ ಪ್ರದರ್ಶನ” ಮತ್ತು ಗ್ಲೋ ಆರ್ಟ್ ಖ್ಯಾತಿಯ ಬೆಂಗಳೂರಿನ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ ಅವರಿಂದ “ಗಾಳಿಯಲ್ಲಿ ಚಿತ್ತಾರ” ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.