“ಗಂಟೆ ಶಬ್ದ ಕೇಳಿದರೆ ಗುಂಡು ಬೀಳೋ ಪರಿಸ್ಥಿತಿ ಅಲ್ಲಿದೆ” : ಶಿವಪಾಡಿಯಲ್ಲಿ ಅಜಿತ್ ಹನುಮಕ್ಕನವರ್ ಮಾತುಗಳು

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 03, 2023 ರ ಶುಕ್ರವಾರದಂದು ನಡೆದ ಅತಿರುದ್ರ ಮಹಾಯಾಗದ ಹತ್ತನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೈರಂಗಳ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ದಯಾನಂದ ರೆಡ್ಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕಾ ಫೆಡರೇಶನ್ ನ ಅಧ್ಯಕ್ಷರಾದ ಯಶಪಾಲ್ ಸುವರ್ಣ, ಮಣಿಪಾಲದ ಉದ್ಯಮಿ ಬಾಲಕೃಷ್ಣ ಶೆಣೈ, ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಮಹೇಶ್ ಠಾಕೂರ್, ಉಡುಪಿ ನಗರಸಭಾ ಸದಸ್ಯರು, ಯಾಗ ಸಮಿತಿಯ ಪದಾಧಿಕಾರಿಗಳು, ದೇವಸ್ಥಾನದ ಮೊಕ್ತೇಸರರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.

ನಂತರ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅಜಿತ್ ಹನುಮಕ್ಕನವರ್, ‘ಕಳೆದ ಎರಡು ವರ್ಷಗಳಲ್ಲಿ ನಮ್ಮೂರಿಗೆ ಹೋಗಿದ್ದಕ್ಕಿಂತ ಹೆಚ್ಚಾಗಿ ಕರಾವಳಿಗೆ ಹೋಗಿದ್ದೇನೆ. ಪ್ರತೀ ಬಾರಿ ಇಲ್ಲಿಗೆ ಬಂದು ಹೋದರೆ, ನನಗೇನೋ ಒಳ್ಳೆಯದಾಗುತ್ತೆ. ನಾನು ಜೀವನದಲ್ಲಿ ಮೊದಲ ಬಾರಿ ಅತಿರುದ್ರ ಮಹಾಯಾಗ ಕಾರ್ಯಕ್ರಮವನ್ನು ನೋಡುತ್ತಿರುವುದು. ಒಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಮಾಡುವಂತಹ ಹಾಗೂ ಭಾಗವಹಿಸುವಂತಹ ಕಾರ್ಯಕ್ರಮವಿದು. ಈ ಕಾರ್ಯಕ್ರಮ ನಡೆಯುತ್ತಿರುವ ಸುದ್ದಿ ಎಲ್ಲಿಯ ತನಕ ಹರಡುತ್ತೋ, ಅಲ್ಲಿಯ ಜನರು ಶಿವಪಾಡಿಗೆ ಬಂದು ಭಾಗವಹಿಸಬೇಕು. ಈ ಕಾರ್ಯಕ್ರಮವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಇದನ್ನು ಕಾಣುವುದೇ ಒಂದು ಸೌಭಾಗ್ಯ. ಹಿಂದೆ ಇಂತಹ ಕಾರ್ಯಕ್ರಮಗಳನ್ನು ಮಾಡಲು ತೆರಿಗೆ ಕಟ್ಟುವ ಪರಿಸ್ಥಿತಿ ಇತ್ತು ಮತ್ತು ಪ್ರಾಣವನ್ನೇ ಕೊಟ್ಟು ಮಾಡಿಸುವ ಪರಿಸ್ಥಿತಿ ಇತ್ತು. ಆದರೆ ಇಂದು ಧೈರ್ಯವಾಗಿ, ಹೆಮ್ಮೆಯಿಂದ ಹಾಗೂ ಖುಷಿಯಿಂದ ಮಾಡುವಂತಹ ಅವಕಾಶ ನಮಗೀಗ ಬಂದಿದೆ. ಇಲ್ಲಿ ನಡೆಯುತ್ತಿರುವ ನಮ್ಮ ಶೈವ ಪರಂಪರೆಯ ಆಚರಣೆಯು, ಭಕ್ತಿಯನ್ನು ಉದ್ದೀಪನೆಗೊಳಿಸುವಂತೆ ಕಣ್ಣ ಮುಂದೆ ನಡೆಯುತ್ತಿದೆ. ಈ ಆಚರಣೆಯ ಮೂಲ ಕಾಶ್ಮೀರ. ಆದರೆ ಇವತ್ತಲ್ಲಿ ಈ ಆಚರಣೆ ಮಾಡುವ ಹಾಗಿಲ್ಲ. ಇತ್ತೀಚಿನ ವಿದ್ಯಾಮಾನಗಳಲ್ಲೂ ಅಲ್ಲಿ ಘಂಟೆ ಶಬ್ದ ಕೇಳಿದರೇನೇ ಗುಂಡು ಬೀಳುವ ಅಪಾಯವಿದೆ. ಅಲ್ಲಿ ಜನರಿಗೆ ಬದುಕಲು ಆಗುತ್ತಿಲ್ಲ. ಆದ್ದರಿಂದ ಇಂತಹ ಕಾರ್ಯಗಳನ್ನು ಎಲ್ಲಿ ಮಾಡಲು ಸಾಧ್ಯವಿದೆಯೋ ಮಾಡಬೇಕು. ಈ ಕಾರ್ಯಕ್ರಮದಲ್ಲಿ ಯುವ ಸಮುದಾಯವೂ ಭಾಗವಹಿಸುತ್ತಿರುವುದು ಸಮಾಧಾನದ ಸಂಗತಿ. ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಅಂದುಕೊಂಡರೆ, ಮಾಡುವುದಕ್ಕೆ ಆಗಲ್ಲ. ಕಾರ್ಯಕ್ರಮವನ್ನು ಮಾಡುವವರಿಗೆ, ಕಾರ್ಯಕ್ರಮದಲ್ಲಿ ಭಾಗಿಯಾಗುವಂತವರಿಗೆ ಪೂರ್ವ ಜನ್ಮದ ಪುಣ್ಯ ಇರಬೇಕು. ಆದ್ದರಿಂದ ಆತ್ಮಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ದಿಕ್ಸೂಚಿ ಭಾಷಣದ ಬಳಿಕ ಪ್ರಸಿದ್ಧ ಶಾಸ್ತ್ರೀಯ ಗಾಯಕರಾದ ಶ್ರೀ ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Related Posts

Leave a Reply

Your email address will not be published.