ಶ್ರೀ ನಿಧಿ ಮಹಿಳಾ ಮಂಡಳಿಯಿಂದ ಆಟಿ ಡೊಂಜಿ ದಿನ
ನಮ್ಮ ಹಿರಿಯರಿಗೆ ಹೊಟ್ಟೆಗೆ ತಿನ್ನಲೂ ಆಹಾರದ ಕೊರತೆ ಇದ್ದರೂ ದಾರಾಳ ಮನಸ್ಸಿಗೆ ನೆಮ್ಮದಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲಾವೂ ಇದ್ದರೂ ಮನಸ್ಸಿಗೆ ನೆಮ್ಮದಿಯೇ ಇಲ್ಲ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಅವರು ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಳಿ ಆಯೋಜಿಸಿದ ಆಟಿ ಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಹಿರಿಯರಲ್ಲಿ ಆಸ್ತಿ ಅಂತಸ್ತಿನ ಕೊರತೆ ಇದ್ದರೂ ಮನಸ್ಸಿಗೆ ಮಾನಸಿಕ ನೆಮ್ಮದಿ ಇತ್ತು, ದೇಹ ದಣಿವಿನಿಂದಾಗಿ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿತ್ತು, ಆದರೆ ಇಂದಿನ ನಮ್ಮ ಕಾಲಘಟ್ಟದಲ್ಲಿ ಆಸ್ತಿ ಐಶ್ವರ್ಯಗಳಿದ್ದರೂ ನೆಮ್ಮದಿಯ ಕೊರತೆಯಿಂದಾಗಿ ನಿದ್ರೆಗಾಗಿ ಮಾತ್ರೆ ಸೇವಿಸುವ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಶೀಲಾ ಕೆ. ಶೆಟ್ಟಿ ಮಾತನಾಡಿ, ಇಂದಿನ ದಿನದಲ್ಲಿ ಆಟಿ ತಿಂಗಳು ಶ್ರೀಮಂತವಾಗಿದೆಯಾದರೂ..ಅಂದಿನ ದಿನಗಳು ಕಷ್ಟ ಕಾರ್ಪಣ್ಯದಿಂದ ಕೂಡಿತ್ತು, ಹೊಟ್ಟೆಗೆ ಆಹಾರವಿಲ್ಲದೆ ಪ್ರಕೃತಿಯಲ್ಲಿ ಸಿಗುತ್ತಿದ್ದ ಹಣ್ಣು ಹಂಪಲುಗಳೇ ಹಸಿವು ನೀಗಿಸುತ್ತಿತ್ತು ಎಂದರು.
ಈ ಸಂದರ್ಭದಲ್ಲಿ ನೂತನ ಶಾಸಕರಿಗೆ ಮಹಿಳಾ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕಾರ್ಯಕ್ರಮದ ಅಂಗವಾಗಿ ಮಾತೃ ಸಂಸ್ಥೆಯ ಸದಸ್ಯರಿಗಾಗಿ ಆಯೋಜಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂತಿಮವಾಗಿ ಸಂಸ್ಥೆಯ ಸದಸ್ಯೆಯರಿಂದ ಮನರಂಜನಾ ಕಾರ್ಯಕ್ರಮ ಜರುಗಿತು.
ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಪಡುಬಿದ್ರಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಎರ್ಮಾಳು, ಬಡ ಎರ್ಮಾಳು ಅಟೋ ಯುನಿಯನ್ ಗೌರವ ಅಧ್ಯಕ್ಷ ಸಂತೋಷ್ ಶೆಟ್ಟಿ ಬರ್ಪಾಣಿ, ತೆಂಕ ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್ ಇದ್ದರು. ಸಂಸ್ಥೆಯ ಅಧ್ಯಕ್ಷೆ ಅಮ್ಮಣ್ಣಿ ಸ್ವಾಗತಿಸಿ, ಸದಸ್ಯೆ ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಾಹಿಸಿದ್ದು, ವಿಮಲ ಸಾಲ್ಯಾನ್ ವಂದಿಸಿದರು.