ಕಾರ್ಕಳ : ಶಾಸಕರ ಸಾಧನೆಗೆ ಪೂರಕವಾದ ದಾಖಲೆಗಳೇ ಇಲ್ಲ: ಶುಭದರಾವ್ ಆರೋಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಬೈಲೂರ್ ನಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಾಣಗೊಳಿಸಿ ಕಾರ್ಕಳವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಗೊಳಿಸಿದ್ದೇನೆ ಎಂದು ಹೇಳುತ್ತಿದ್ದ ಶಾಸಕರ ಸಾಧನೆಗೆ ಪೂರಕವಾದ ದಾಖಲೆಗಳೇ ಇಲ್ಲ ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಆರೋಪಿಸಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾರ್ಕಳ ಎರ್ಲಪಾಡಿಯ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮನ ಪಾರ್ಕ್ ನಿರ್ಮಾಣಗೊಂಡಿರುವ ಜಮೀನು, ಗೋಮಾಳದ ಜಮೀನು ಆದ ಕಾರಣ ಮಂಜೂರಾತಿ ಪ್ರಸ್ತಾವನೆಯನ್ನು ತಿರಸ್ಕರಿಸಿ ಬಿಜೆಪಿ ಸರಕಾರವೇ ಅದೇಶ ಹೊರಡಿಸಿದೆ. ಹಾಗಾದರೆ ಪರಶುರಾಮ ಥೀಂ-ಪಾರ್ಕ್ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆಯೇ ? ಮುಂದೆ ಅದರ ನಿರ್ವಹಣೆಯ ಜವಾಬ್ದಾರಿ ಯಾರ ಹೊಣೆ ಎಂದು ಪ್ರಶ್ನಿಸಿದ್ದಾರೆ.

ಎರ್ಲಪಾಡಿ ಗ್ರಾಮದ ಸರ್ವೆ ನಂ.329/1ರಲ್ಲಿ 1.58 ಎಕ್ರೆ ಜಮೀನು ಗೋಮಾಳದ ಜಮೀನಾಗಿದ್ದು, ಅದರಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್‍ಗೆ ಆ ಜಾಗವನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾರ್ಕಳ ತಹಶೀಲ್ದಾರ್ ಎರ್ಲಪಾಡಿ ಗ್ರಾ.ಪಂ.ಗೆ ನೀಡಿರುವ ಆದೇಶದಿಂದ ಕೋಟ್ಯಂತರ ರೂಪಾಯಿ ಸರಕಾರದ ಅನುದಾನ ಬಳಕೆ ಮಾಡಿ ನಿರ್ಮಾಣಗೊಂಡ ಥೀಂ ಪಾರ್ಕ್ ಕಾನೂನು ಬಾಹಿರ ಅಭಿವೃದ್ಧಿ ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಪರಶುರಾಮ ಥೀಂ-ಪಾರ್ಕ್ ನಿರ್ಮಾಣಕ್ಕೆ ನಮ್ಮ ವಿರೋಧವಾಗಲಿ, ಆಕ್ಷೇಪವಾಗಲಿ ಇಲ್ಲ. ಆದರೆ ಮುಚ್ಚಿಟ್ಟಿರುವ ಸತ್ಯವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇವೆ. ಶಾಸಕರು ಕೂಡ ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸುವಂತೆ ಆಗ್ರಹಿಸುತ್ತೇನೆ ಎಂದು ಶುಭದರಾವ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಯದರ್ಶಿ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.

Related Posts

Leave a Reply

Your email address will not be published.