ಸುಳ್ಯ: ವಿದ್ಯಾಮಾತಾ ಅಕಾಡೆಮಿಯ ಮುಕುಟಕ್ಕೆ ಮತ್ತೊಂದು ರಾಜ್ಯ ಪ್ರಶಸ್ತಿಯ ಗರಿ
ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆಗಳ ತರಬೇತಿಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಗೆ 2024ರ ಸಾಲಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ಕೊಡಲ್ಪಡುವ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯು ಲಭಿಸಿದೆ.
ಸವಣೂರಿನಲ್ಲಿ ನಡೆಯುತ್ತಿರುವ ಯುವಜನ ಮೇಳದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಸುಳ್ಯ ಶಾಸಕಿ ಕುಮಾರಿ ಭಾಗೀರತಿ ಮುರುಳ್ಯ ರವರು ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರಿಗೆ ಪ್ರಧಾನ ಮಾಡಿದರು. ಹತ್ತು ಹಲವಾರು ಪ್ರಶಸ್ತಿಗಳೊಂದಿಗೆ ಕಳೆದ 2023ರ ಸಾಲಿನ “ರಾಜ್ಯ ಶಿಕ್ಷಣ ಸೇವಾ ರತ್ನ”, “ಮಂದಾರ”, ಪ್ರಶಸ್ತಿಗಳೊಂದಿಗೆ ರಾಜ್ಯಮಟ್ಟದ “ರಾಜ್ಯ ಯುವ ಸಾಂಘಿಕ” ಪ್ರಶಸ್ತಿಯನ್ನು ವಿದ್ಯಾಮಾತಾ ಅಕಾಡೆಮಿಯು ಮುಡಿಗೇರಿಸಿಕೊಂಡಿದೆ. ಕರಾವಳಿ ಭಾಗದಲ್ಲಿ 5 ವರ್ಷದಿಂದ 40 ವರ್ಷದ ವರೆಗಿನವರಿಗೆ ಉದ್ಯೋಗ ಕೌಶಲ್ಯತೆ, ಶಿಕ್ಷಣ ಮೌಲ್ಯ, ವಿವಿಧ ನೇಮಕಾತಿಗಳಿಗೆ ತರಬೇತಿ, ಖಾಸಗಿ ಉದ್ಯೋಗಗಳ ನೇರ ಸಂದರ್ಶನಗಳನ್ನು ಒಂದೇ ಸೂರಿನಡಿಯಲ್ಲಿ ಕೊಡುವ ಏಕೈಕ ಸಂಸ್ಥೆ ಎಂಬ ಗರಿಮೆ ವಿದ್ಯಾಮಾತಾ ಅಕಾಡೆಮಿಗೆ ಇದೆ. “ಅತ್ಯಂತ ಕಷ್ಟಪಟ್ಟು ಬೆಳೆಸಿದ ಸಂಸ್ಥೆಯನ್ನು ಸಾಮಾಜಿಕವಾಗಿ ಗುರುತಿಸುತ್ತಿರುವುದು ಅತ್ಯಂತ ಖುಷಿ ಕೊಟ್ಟಿದೆ” ಎಂದು ಭಾಗ್ಯೇಶ್ ರೈ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ.