ಅಕ್ರಮ ಟೋಲ್ : ಅಭಿನಂದನೆಯ ಫ್ಲೆಕ್ಸ್ ಸ್ಮಶಾನ ಪಾಲು ..

ಸುರತ್ಕಲ್‌, ನ.28: ಸುರತ್ಕಲ್‌ ಟೋಲ್‌ಗೇಟ್‌ ನ.30ರಿಂದ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನವಾಗು ತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರಿಗೆ ಅಭಿನಂದನೆ ತಿಳಿಸುವ ಬೃಹತ್‌ ಬ್ಯಾನರ್‌ಗಳು ಸುರತ್ಕಲ್ ನ ಸ್ಮಶಾನ ಸೇರಿವೆ.

ಸುರತ್ಕಲ್‌ ಹೃದಯಭಾಗದಲ್ಲಿರುವ ಸ್ಮಶಾನದ ಒಳಭಾಗದಲ್ಲಿ ಹಲವು ಬ್ಯಾನರ್‌ಗಳು ಪತ್ತೆಯಾಗಿದ್ದು, “ಸುರತ್ಕಲ್‌ ಟೋಲ್‌ಗೇಟ್‌ ರದ್ದು ಮಾಡುವ ಭರವಸೆಯನ್ನು ಈಡೇರಿಸಿದ ಮಾನ್ಯ ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಸ್ಥಳೀಯ ಶಾಸಕರಾದ ಡಾ. ಭರತ್‌ ಶೆಟ್ಟಿ ವೈ. ರವರಿಗೆ ಹಾರ್ದಿಕ ಅಭಿನಂದನೆಗಳು” ಎಂದು ಬ್ಯಾನರ್ ಗಳಲ್ಲಿ ಮುದ್ರಿಸಲಾಗಿದೆ.

HEJAMADI TOLL

ಈ ಬ್ಯಾನರ್ ಗಳು ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳು ಇರುವುದರಿಂದ ಮತ್ತು ತೆರವಿಗೆ ಬಿಜೆಪಿಯ ಯಾವುದೇ ಪಾತ್ರಗಳಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವುದರಿಂದ ಬ್ಯಾನರ್ ಗಳನ್ನು ಸ್ಮಶಾನದಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.‌

HEJAMADI TOLL

ಈ ಕುರಿತು ಪ್ರತಿಕ್ರಿಸಿರುವ ಟೋಲ್‌ಗೇಟ್‌ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ, “ಟೋಲ್‌ ಗೇಟ್‌ ತೆರವುಗೊಂಡಿರುವುದು ಬಿಜೆಪಿಯ ಅಸಮರ್ಥ ಸಂಸದರು, ಶಾಸಕರಿಂದ ಅಲ್ಲ, ಅದು ಹೋರಾಟ ಸಮಿತಿ ಮತ್ತು  ಸಮಾನ ಮನಸ್ಕ ಸಂಘಟನೆಗಳ ಅವಿರತ ಹೋರಾಟದ ಫಲವಾಗಿ ತೆರವುಗೊಳ್ಳುತ್ತಿದೆ. ಟೋಲ್‌ ಗೇಟ್‌ ತೆರವಿನ ಕ್ರೆಡಿಟ್‌ ಪಡೆದುಕೊಳ್ಳುವ ಸಲುವಾಗಿ ಬಿಜೆಪಿ ಇಂತಹಾ ಫ್ಲೆಕ್ಸ್‌ಗಳನ್ನು ಅಳವಡಿಸಲು ಮುಂದಾಗಿತ್ತು. ಆದರೆ, ಬಿಜೆಪಿಯ ಒಳಗಿಂದಲೇ ಅಸಮಾಧಾನಗಳು ಇರುವುದರಿಂದ ಅವುಗಳನ್ನು ಅಳವಡಿಸದೇ ಸುರತ್ಕಲ್‌ ಸ್ಮಶಾನದಲ್ಲಿ ಮುಚ್ಚಿಡಲಾಗಿದೆ. ಇದು ಬಿಜೆಪಿಯ ಇಂದಿನ ಸ್ಥಿತಿಯನ್ನು ತೋರಿಸುತ್ತಿದೆ. ಕೇವಲ ಪ್ರಚಾರ ಮಾತ್ರ ಬಯಸುವ ಬಿಜಿಪಿಯ ಶಾಸಕರು, ಸಂಸದರು ಜನಪರವಾಗಿ ಕೆಲಸ ಮಾಡಿದ್ದರೆ, ಕಳೆದ 7 ವರ್ಷಗಳಿಂದ ಟೋಲ್‌ಗೇಟ್‌ ಇಲ್ಲಿ ಅಕ್ರಮವಾಗಿ ಸುಲಿಗೆ ಮಾಡುತ್ತಿರಲಿಲ್ಲ. ಇದು ಬಿಜೆಪಿಯ ದೌರ್ಬಲ್ಯವನ್ನು ಸೂಚಿಸುತ್ತಿದೆ” ಎಂದು ಹೇಳಿದ್ದಾರೆ.

Related Posts

Leave a Reply

Your email address will not be published.