ಸಿನಿ ರಾಜಕೀಯ ಈಜಿದವರು, ಮುಳುಗಿದವರು

ತಮಿಳು ನಟ ವಿಜಯ್ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಹೆಸರಿನ ಅರ್ಥ ತಮಿಳುನಾಡು ವಿಜಯ ಸಂಘಟನೆ. ವಿಜಯ್ ಎಂದರೆ ಗೆಲುವು, ವೆಟ್ರಿ ಎಂದೇ ಅರ್ಥ. ನಟಿಸುತ್ತಿರುವ ಎರಡು ಸಿನಿಮಾ ಮುಗಿಸಿ ಚಿತ್ರ ರಂಗಕ್ಕೆ ವಿದಾಯ ಹೇಳುವುದಾಗಿ ಸಹ ವಿಜಯ್ ಹೇಳಿದ್ದಾರೆ. ಕ್ರಿಶ್ಚಿಯನ್ ತಂದೆ ಎಸ್. ಎ. ಚಂದ್ರಶೇಖರ್, ಹಿಂದೂ ತಾಯಿ ಶೋಭಾ ಪುತ್ರ ವಿಜಯ್‍ರ ಮಡದಿ ಶ್ರೀಲಂಕಾ ತಮಿಳದಿ. ಹುಟ್ಟು ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ವಿಜಯ್ ರಾಜಕೀಯ ಪಕ್ಷ ಹೊಸತು ಅವರ ರಾಜಕೀಯ ಪ್ರಯೋಗ ಹಳತು.

2009ರಲ್ಲಿ ಅವರು ವಿಜಯ್ ಮಕ್ಕಳ್ ಇಯಕ್ಕಂ ಎಂದು ತನ್ನ ಅಭಿಮಾನಿ ಸಂಘ ತೆರೆದಿದ್ದರು. ಮಕ್ಕಳ್ ಎಂಬ ತಮಿಳು ಶಬ್ದದ ಅರ್ಥ ಜನರು. 2011ರ ಚುನಾವಣೆಯಲ್ಲಿ ಆ ಸಂಘಟನೆಯು ಎಐಡಿಎಂಕೆ ಪಕ್ಷವನ್ನು ಬೆಂಬಲಿಸಿತ್ತು. 2011ರ ಅಕ್ಟೋಬರ್‍ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿಜಯ್ ಮಕ್ಕಳ್ ಇಯಕ್ಕಂ ಅಭಿಮಾನಿ ಸಂಘದವರು 169 ಕಡೆ ಸ್ಪರ್ಧಿಸಿ 115 ಕಡೆ ಗೆದ್ದಿದ್ದರು. ಅನಂತರ ರಾಜಕೀಯ ತಯಾರಿ ನಡೆಸಿದ ಮೇಲೆ ಪೂರ್ಣ ಪೂರ್ವ ಸಿದ್ಧತೆಯೊಡನೆ ಅವರು ಈಗ ತಮಿಳಗ ವೆಟ್ರಿ ಕಳಗಂ ಘೋಷಣೆ ಮಾಡಿದ್ದಾರೆ.

ಈ ತಮಿಳಗ ಮತ್ತು ಕಳಗಂನಲ್ಲಿ ಇರುವ ಳ ಈ ಳ ಅಲ್ಲ. ಹಳೆಯ ಕನ್ನಡದಲ್ಲಿ ಏಳು? ಬರೆಯುತ್ತಿದ್ದ ಳ. ಅದನ್ನು ಈಗಿನ ಕನ್ನಡದಲ್ಲಿ ಬಳಸುತ್ತಿಲ್ಲ. ದ್ರಾವಿಡ ವಿಶೇಷವಾದ ಈ ಅಕ್ಷರ ಈಗಲೂ ತಮಿಳು, ಮಲಯಾಳಂಗಳಲ್ಲಿ ಬಳಕೆಯಲ್ಲಿದೆ. ಈ ಳು?ಕ್ಕೆ ಜೆಡ್‍ಎಚ್‍ಎ ರೂಢಿ ಮಾಡಿದವರು ತಮಿಳರು. ಆದರೆ ಕನ್ನಡ ಮತ್ತು ಇತರ ಕಡೆ ಇಂಗ್ಲಿಷ್ ಅಕ್ಷರ ನೋಡಿ ಜ, ಯ ಇತ್ಯಾದಿಯಾಗಿ ಇದನ್ನು ಗುರುತಿಸುತ್ತಾರೆ. ಕೆಲವೆಡೆ ಇಂಗ್ಲಿಷ್ ದಾರಿಯಾಗಿ ತಮಿಳಗ ವೆಟ್ರಿ ಕಳಗಂ ಹೆಸರು ತಮಿಜಗ ವೆಟ್ರಿ ಕಯಗಂ ಆಗಿದೆ. ಅದು ತಪ್ಪು; ಆದರೆ ಇದನ್ನು ತದ್ಭವ ಎಂದು ಬೇಕಾದರೆ ಸಮರ್ಥಿಸಿಕೊಳ್ಳಬಹುದು. ಭಾಷೆಗಳಲ್ಲಿ ವೈವಿಧ್ಯತೆ, ಉಚ್ಚಾರ ಭೇದ, ತದ್ಭವ ಬಳಕೆ ಲೋಕದ ಪ್ರಮುಖ ಭಾಷಾ ಸಂಗತಿಯಾಗಿದೆ.

ಭಾರತದಲ್ಲಿ ಮೊದಲು ಲೋಕ ಸಭೆಗೆ ಗೆದ್ದು ಬಂದ ನಟ ಎಂಬ ದಾಖಲೆ ತೆಲುಗು ನಟ ಜಗ್ಗಯ್ಯ ಇಲ್ಲವೇ ಕೊಂಗಾರ ಜಗ್ಗಯ್ಯ ಅವರದಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಇವರು ಸಮಾಜವಾದಿ ಒಲವಿನವರು. 1967ರಲ್ಲಿ ಇವರು ಓಂಗೋಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಭಾರತದ ಮೊದಲ ಚುನಾಯಿತ ಚಿತ್ರ ನಟ ಎನಿಸಿಕೊಂಡರು. ಮುಂದೆ ಇವರು ಚಿತ್ರ ರಂಗದಲ್ಲಿ ಚುರುಕಾದರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಚುನಾವಣೆಗೆ ನಿಲ್ಲಲಿಲ್ಲ. ಜಾಗತಿಕವಾಗಿ ಚಿತ್ರ ನಟನಾಗಿ ಅತ್ಯುನ್ನತ ಸ್ಥಾನಕ್ಕೆ ಏರಿದ ದಾಖಲೆ ರೊನಾಲ್ಡ್ ರೇಗನ್ ಅವರದಾಗಿದೆ.

ರೊನಾಲ್ಡ್ ರೇಗನ್ 1981ರಿಂದ 1989ರವರೆಗೆ ಎರಡು ಅವಧಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. ಕಾಲೇಜು ದಿನಗಳಿಂದಲೇ ಕ್ರೀಡಾ ಉದ್ಘೋಷಕ ಆಗಿ ಮೆರೆದ ರೊನಾಲ್ಡ್ ರೇಗನ್ 1937ರಲ್ಲಿ ಕ್ಯಾಲಿಫೆÇೀರ್ನಿಯಾ ಸೇರಿ ಯಶಸ್ವಿ ನಾಯಕ ನಟರಾದರು. 1947ರಲ್ಲಿ ಸ್ಕ್ರೀನ್ ಯಾಕ್ಟರ್ಸ್ ಗಿಲ್ಡ್‍ನ ಅಧ್ಯಕ್ಷರಾಗುವುದರೊಂದಿಗೆ ಅವರ ಸ್ಪರ್ಧಾ ರಾಜಕೀಯ ಆರಂಭವಾಯಿತು. ರಿಪಬ್ಲಿಕನ್ ಪಕ್ಷದಿಂದ 1966ರಲ್ಲಿ ಕ್ಯಾಲಿಫೆÇೀರ್ನಿಯಾ ಪ್ರಾಂತ್ಯದ ಗವರ್ನರ್ ಆಗಿ ಗೆದ್ದರು. ಮುಂದೆ ಹಿಂತಿರುಗಿ ನೋಡದೆ ಮುನ್ನುಗ್ಗಿ ಯುಎಸ್‍ಎ ಅಧ್ಯಕ್ಷರಾಗಿ ಎರಡು ಬಾರಿ ಚುನಾಯಿತರಾದರು. ಇವರ ಮಡದಿ ನ್ಯಾನ್ಸಿ ರೇಗನ್ ಕೂಡ ಒಂದು ಕಾಲದ ಪ್ರಮುಖ ನಟಿ ಆಗಿದ್ದವರು.

ರೊನಾಲ್ಡ್ ರೇಗನ್ ಅವರ ಎರಡನೆಯ ಅವಧಿಯ ಕೊನೆಯಲ್ಲಿ ಇಬ್ಬರು ಭಾರತೀಯ ಚಿತ್ರ ನಟರು ಸ್ಪೂರ್ತಿ ಪಡೆದು ನೇರ ರಾಜಕೀಯಕ್ಕೆ ಧುಮುಕಿದಂತೆ ಕಾಣುತ್ತದೆ. ಒಬ್ಬರು ಸುನಿಲ್ ದತ್ ಇನ್ನೊಬ್ಬರು ಎಂ. ಜಿ. ರಾಮಚಂದ್ರನ್. ಇಬ್ಬರೂ ಮೊದಲು ರಾಜಕೀಯ ಸಂಪರ್ಕದಲ್ಲಿ ಮಾತ್ರ ಇದ್ದರು. ಭಾರತದ ರಾಜಕೀಯದಲ್ಲಿ ರಾಜಕೀಯವನ್ನು ಗಟ್ಟಿ ನಿಲುವಿನಿಂದ ಮಾಡಿದವರು ಸುನಿಲ್ ದತ್ ಎಂದು ಕೂಡ ಹೇಳಬಹುದು. ಅವರು ಮುಂಬಯಿ ಉತ್ತರ ಲೋಕ ಸಭಾ ಕ್ಷೇತ್ರದಿಂದ ಐದು ಬಾರಿ ಕಾಂಗ್ರೆಸ್ಸಿನಿಂದ ಲೋಕ ಸಭೆಗೆ ಗೆದ್ದು ಹೋದವರು. ಹೀಗೆ ಸತತ ಗೆದ್ದು ಸಂಸದರಾದ ಚಿತ್ರ ನಟರು ಯಾರೂ ಇಲ್ಲ. ಒಮ್ಮೆ ಯುವಜನ ಕ್ರೀಡಾ ಸಚಿವರೂ ಆಗಿದ್ದರು. ಅವರ ಬಳಿಕ ಅವರ ಮಗಳು ಪ್ರಿಯಾ ದತ್ ಕೂಡ ಒಮ್ಮೆ ಈ ಕ್ಷೇತ್ರದಿಂದ ಲೋಕ ಸಭೆಗೆ ಗೆದ್ದರು. ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡ ಭಾರತೀಯ ನಟರಲ್ಲಿ ಇವರು ಮುಖ್ಯರು.

ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಅಣ್ಣಾ ದೂರ, ಕರುಣಾನಿಧಿಯವರು ನಾಟಕ ಬರೆದು ನಟಿಸಿದವರು. ಮುಂದೆ ಚಿತ್ರ ಸಾಹಿತ್ಯ, ನಿರ್ಮಾಣ ಎಂದು ಚಿತ್ರರಂಗದ ಸಂಪರ್ಕದಲ್ಲಿ ಇದ್ದವರು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಎಂಜಿಆರ್ ಅವರನ್ನು ಪ್ರಮುಖ ನಾಯಕ ನಟನಾಗಿಸಿದವರು ಇವರೇ. ಹಾಗಾಗಿ ಎಂಜಿಆರ್‍ಗೆ ಅವರೆ ರಾಜಕೀಯ ಗುರುಗಳು. ಮೇಲ್ಮನೆ ಶಾಸಕರೂ ಅದರು. 1979ರ ಸುತ್ತಿನಲ್ಲಿ ಡಿಎಂಕೆ ಒಡೆದು ಎಡಿಎಂಕೆ ಮಾಡಿದರು. ಯಶಸ್ಸು ಕಂಡು ಎರಡು ಅವಧಿ ಮುಖ್ಯಮಂತ್ರಿ ಆದರು. ಅವರು ಸಾಯುತ್ತಲೇ ಮುಖ್ಯಮಂತ್ರಿ ಆದವರು ಅವರ ಹೆಂಡತಿ ಜಾನಕಿ. ಈಕೆಯೂ ಹಿಂದಿನ ಖ್ಯಾತ ನಟಿ. ಬೇರೆಯವರ ಹೆಂಡತಿ ಆಗಿದ್ದವರು ಎಂಜಿಆರ್‍ಗೆ ಒಲಿದವರು. ಆದರೆ ಕೂಟ ಕಟ್ಟಿದ ಮೇಲುಕೋಟೆ ಮೂಲದ, ಬೆಂಗಳೂರು ಗಾಂಧಿಬಜಾರ್, ಚೆನ್ನೈ ಬೆಳಸಿನ ಜಯಲಲಿತ ಸಾಯುವವರೆಗೆ ಎಐಡಿಎಂಕೆ ತನ್ನ ಕರವಶ ಮಾಡಿಕೊಂಡರು; ಮುಖ್ಯಮಂತ್ರಿಯಾಗಿ ಮೆರೆದರು.

ಎಂಜಿಆರ್ ಸ್ಪೂರ್ತಿಯಿಂದ ತೆಲುಗು ನಾಯಕ ನಟ ತಾರಕ ರಾಮರಾವ್ ತೆಲುಗು ದೇಶಂ ಪಕ್ಷ ಕಟ್ಟಿ ಆಂಧ್ರದಲ್ಲಿ ಮುಖ್ಯಮಂತ್ರಿ ಆದರು. ಮುಂದೆ ಅದು ಅವರ ಮಗಳ ಗಂಡ ಚಂದ್ರಬಾಬು ನಾಯ್ಡುರಿಗೆ ಗುತ್ತಿಗೆಯಾಯಿತು. ಕಾಂಗ್ರೆಸ್ ಶಾಸಕ ಮಂತ್ರಿ ಆಗಿದ್ದ ಚಂದ್ರಬಾಬು ನಾಯ್ಡು ಮುಂದೆ ತೆಲುಗು ದೇಶಂ ಮೂಲಕ ಆಂಧ್ರದ ಮುಖ್ಯಮಂತ್ರಿ ಆದರು. ಆಂಧ್ರದ ಖ್ಯಾತ ನಟ ಚಿರಂಜೀವಿಯವರು ಪ್ರಜಾ ರಾಜ್ಯಂ ಪಕ್ಷ ರಚಿಸಿದರು. ತಮಿಳು ನಟ ಕಮಲಹಾಸನ್ ಮಕ್ಕಳ್ ಮಯ್ಯಂ ಕಳಗಂ ಕಟ್ಟಿದರು. ಯಶಸ್ಸು ಕಾಣಲಿಲ್ಲ. ತಮಿಳು ನಟ ರಜನಿಕಾಂತ್, ಕನ್ನಡದ ಉಪೇಂದ್ರ ಪಕ್ಷದ ಕಚೇರಿ ತೆಗೆದಷ್ಟೆ ವೇಗವಾಗಿ ಬೀಗ ಹಾಕಿದರು. ಇತ್ತೀಚೆಗೆ ನಿಧನರಾದ ತಮಿಳು ನಟ ವಿಜಯಕಾಂತ್ ರಾಜಕೀಯವಾಗಿ ಯಶಸ್ಸು ಕಂಡರೂ ಅಧಿಕಾರಕ್ಕೆ ಏರಲು ಆಗಲಿಲ್ಲ.

ಕರ್ನಾಟಕದಲ್ಲಿ ನಟಿಯರಲ್ಲಿ ಉಮಾಶ್ರೀ ಮತ್ತು ಮುಖ್ಯಮಂತ್ರಿ ಚಂದ್ರು ಅವರದು ಗಟ್ಟಿ ಹೆಜ್ಜೆಯ ರಾಜಕೀಯ. ಅಂಬರೀಷ್ ಅವರಿಗೆ ಅದು ಜಾಲಿ ಟ್ರಿಪ್ ಆಗಿತ್ತು. ಜಯಮಾಲ, ಸುಮಲತಾ, ಜಗ್ಗೇಶ್ ಮೊದಲಾದವರದು ರಾಜಕೀಯ ವೃತ್ತಿ. ಈಗ ನಿಖಿಲ್ ಕುಮಾರಸ್ವಾಮಿ ಕಚ್ಚೆ ಕಟ್ಟಿದ್ದಾರೆ. ತೆಲುಗು ನಟಿ ವಿಜಯಶಾಂತಿ ಗಂಭೀರವಾಗಿ ಪ್ರಯತ್ನಿಸಿದರೂ ಯಶಸ್ಸು ಕಾಣಲಾಗಲಿಲ್ಲ. ಜಯಪ್ರದ ಒಂದಷ್ಟು ರಾಜಕೀಯ ಆಡಿದರು. ಅಮಿತಾಬ್, ಜಯಾ ಬಾದುಡಿ, ಹೇಮಾಮಾಲಿನಿ ಮತ್ತು ಹಲವು ನಟನಟಿಯರು ರಾಜಕೀಯದಲ್ಲಿ ಇದ್ದಾರೆ, ಲೆಕ್ಕಕ್ಕೆ. ಜಗತ್ತಿನ ಎಲ್ಲ ಕಡೆ ರಾಜಕೀಯ ನಂಟಿನ ಚಲನಚಿತ್ರ ಲೋಕ, ಚಿತ್ರ ರಂಗದ ನಂಟಿನ ರಾಜಕೀಯ ಜಗತ್ತು ಇದ್ದೇ ಇದೆ.

ದುಂಬಾಲು ಬಿದ್ದರೂ ರಾಜಕೀಯದಿಂದ ಅಂತರ ಕಾಯ್ದುಕೊಂಡವರು ವರನಟ ರಾಜಕುಮಾರ್‍ರವರು

ರಾಜಕೀಯ ವೃತ್ತಿಯಲ್ಲ, ಜನರ ಸೇವೆಗೆ ಅದು ಒಂದು ಪ್ರಮುಖ ಮಾರ್ಗ ಎಂಬುದು ನಟ ರಾಜಕಾರಣಿ ವಿಜಯ್ ಮಾತು. ಇದು ಗಟ್ಟಿ ಮಾತು ನಿಜ. ಆದರೆ ರಾಜಕಾರಣಿ ಆದ ಚಿತ್ರರಂಗದ 90% ಜನರಲ್ಲಿ ಈ ಕಸುವು ನಿಲುವುಗಳೆಲ್ಲ ಇಲ್ಲ. ಕಸುಬು ಮಾಡಿಕೊಳ್ಳಲು ಬಂದವರು ಬಹಳ. 500 ಕೋಟಿ ಸಂಪತ್ತಿನ ವಿಜಯ್, ಯಶಸ್ಸಿನ ನಡುವೆಯೇ ರಾಜಕೀಯಕ್ಕೆ ನಡೆದು ಸಾಧಿಸಿದರೆ ಸಬಳ ನುಂಗಬಹುದು ಎಂದು ತೋರಿಸಬೇಕಾಗಿದೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.