ಗದ್ದೆಗಿಳಿದು ನಾಟಿ ಮಾಡಿದ ಮಾಜಿ ಶಾಸಕ ರಘುಪತಿ ಭಟ್
ಉಡುಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ .ರಘುಪತಿ ಭಟ್ ರವರ ಪರಿಕಲ್ಪನೆಯ ಹಡಿಲು ಭೂಮಿಯ ಕೃಷಿಯ ಯೋಜನೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೈಜೋಡಿಸಿದೆ. ಆರೂರು ರಂಜೆಬೈಲ್‍ನ ಕುಮಾರ ಶೆಟ್ಟಿಯವರ ಗದ್ದೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣರು ನಾಟಿಗೆ ಅಗೆಯನ್ನು ನೀಡುವ ಮೂಲಕ ಚಾಲನೆ ನೀಡಿದರು.
ಹಡಿಲು ಭೂಮಿಯ ಕೃಷಿಯ ಕನಸುಗಾರ ಉಡುಪಿ ಮಾಜಿ ಶಾಸಕ ಕೆ ರಘುಪತಿ ಭಟ್ ಸ್ವತಹ: ಗದ್ದೆಗಿಳಿದು ನಾಟಿ ಮಾಡುವುದನ್ನು ಕಂಡ ಬ್ರಹ್ಮಾವರ ತಾಲೂಕಿನ ಸಂಜೀವಿನಿ ಒಕ್ಕೂಟದ ನೂರಾರು ಮಹಿಳೆಯರು ಇನ್ನಿತರ ಸಂಘ ಸಂಸ್ಥೆಯವರು ಗದ್ದೆಗಿಳಿದು ನಾಟಿ ಮಾಡಿದರು. ಕೃಷಿ ಸಲಕರಣೆಗಳಾದ ಭತ್ತಳೆಯುವ ಕಳಸಿಗೆ, ನೊಗ, ಒನಕೆ, ಸಿದ್ದೆ, ಸೇರು, ಗೊರಬು, ನೇಗಿಲು ಸೇರಿದಂತೆ ಅನೇಕ ಪರಿಕರಗಳನ್ನು ಇರಿಸಲಾಗಿತ್ತು.
ಬಂಜರಾಗಿದ್ದ ಒಂದುವರೆ ಸಾವಿರ ಎಕ್ರೆ ಹಡಿಲು ಭೂಮಿಯನ್ನು ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಡಲಾಗಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕೃಷಿ ಸಚಿವರು, ಸ್ವಾಮೀಜಿಯವರು, ನಾನಾ ಧರ್ಮದ ಗುರುಗಳು , ಚಿತ್ರ ನಟರು, ಪತ್ರಕರ್ತರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವುದನ್ನು ಮಾಡಿ ರಾಷ್ಟ್ರಕ್ಕೆ ಮಾದರಿಯಾಗಿದೆ.
ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ , ಸೀತಾರವರು ನಾಟಿ ಮಾಡುತ್ತಿರುವ ಮಹಿಳಾ ಮಣಿಗಳಿಗೆ ಸ್ಫೂರ್ಥಿ ತುಂಬಿದರು. ಆರೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಮತಾ ಶೆಟ್ಟಿ. ಎಚ್. ವಿ. ಇಂಬ್ರಾಹಿಂ ಪುರ, ಸುರೇಶ್ ಬಂಗೇರಾ, ಉದಯಕುಮಾರ್ ಶೆಟ್ಟಿ ,ಸಂಜೀವಿನಿ ಒಕ್ಕೂಟದ ಕಲಾವತಿ, ಪ್ರಮಿತಾ, ಆಶಾ, ಗಣೇಶ್ , ಗುರುರಾಜ ರಾವ್ ಇನ್ನಿತರು ಉಪಸ್ಥಿತರಿದ್ದರು.