“ನಮ್ಮ ಸರ್ಕಾರದಲ್ಲಿ ಸ್ಕ್ಯಾಮ್ ಇಲ್ಲ, ಸ್ಕೀಮ್ ಮಾತ್ರ” : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಜೂನ್ 22 ರಂದು ಉಡುಪಿಯ ಕಿದಿಯೂರು ಹೋಟೆಲ್ ನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಭವಿಷ್ಯದಲ್ಲಿ ಬಿಫೋರ್ ಮೋದಿ ಆಫ್ಟರ್ ಮೋದಿ ಎಂಬ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಹಿಂದೆ ಆಕಾಶ ಭೂಮಿ ಪಾತಾಳದಲ್ಲಿ ಹಗರಣ ಮಾಡಿತ್ತು. ಈ ಒಂಬತ್ತು ವರ್ಷ ನಮ್ಮ ಸರ್ಕಾರದಲ್ಲಿ ಸ್ಕ್ಯಾಮ್ ಇಲ್ಲ, ಸ್ಕೀಮ್ ಮಾತ್ರ. ಮೋದಿ ಜಾತಿ ನೋಡಿ ಸವಲತ್ತು ಕೊಡಲಿಲ್ಲ. ಆದರೆ ಸಿದ್ದರಾಮಯ್ಯ ಜಾತಿ ನೋಡದೆ ಸವಲತ್ತು ಕೊಡೋದೇ ಇಲ್ಲ. ದೇಶಕ್ಕೆ ಒಂದೇ ತೆರಿಗೆ, ಎನ್ ಇಪಿ, ಸೈನಿಕ ಪೆನ್ಶನ್ ಅಷ್ಟೇ. ಮೋದಿ ಕಾಲದಲ್ಲಿ ಸಾಲಗಾರರು ದೇಶ ಬಿಟ್ಟಿಲ್ಲ. ಪ್ರಧಾನಿ ಮೋದಿ ಕಾಲದಲ್ಲಿ ಬರೀ ಸುಧಾರಣೆಯಾಗಿದೆ, ಸಾಂಸ್ಕೃತಿಕ ಪುನರುತ್ಥಾನ ಈ 9 ವರ್ಷದಲ್ಲಿ ನಡೆದಿದೆ. 390 ಹೊಸ ವಿವಿ, 225 ಮೆಡಿಕಲ್ ಕಾಲೇಜು, 23 ಏಮ್ಸ್, 7 ಐಐಟಿ, 7 ಐಐಎಂ, ಡಿಫೆನ್ಸ್ ಕಾರಿಡಾರ್ ಯೋಜನೆಗಳ ಅನುಷ್ಠಾನದೊಂದಿಗೆ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದೇಶ ಪ್ರಗತಿಯ ಕಡೆ ವೇಗವಾಗಿ ಸಾಗುತ್ತಿದೆ. ಕೋವಿಡ್ ಕಾಲದಲ್ಲಿ ಪ್ರಧಾನಿಯವರು ಜೀವಕ್ಕೆ ಗ್ಯಾರೆಂಟಿ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಬೆಲೆಯೇರಿಕೆ ಬರೆಯನ್ನು ಜನರ ಮೇಲೆ ಹಾಕುತ್ತಿದೆ. ಅಕ್ಕಿ ವಿಚಾರದಲ್ಲಿ ಮೋದಿ ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡುತ್ತಿದ್ದಾರೆ. ಭಾರತ ಆರ್ಥಿಕವಾಗಿ 5 ನೇ ಸ್ಥಾನದಲ್ಲಿದೆ. ನೀತಿ- ನೇತಾ ಮತ್ತು ನಿಯತ್ತಿನಿಂದ ದೇಶ ಸಧೃಡವಾಗಿದೆ. ಮೇಕ್ ಇನ್ ಇಂಡಿಯಾ ಮೇಡ್ ಇನ್ ಇಂಡಿಯಾ ಕೇಂದ್ರದ ಸಾಧನೆಯಾಗಿದೆ. ಮೋದಿ ರಿಫಾರ್ಮರ್ ಮತ್ತು ಪರ್ಫಾರ್ಮರ್
ಕೇಂದ್ರದಿಂದ 32 ಲಕ್ಷ ಕೋಟಿ ಜನರ ಮನೆಬಾಗಿಲಿಗೆ ಬರುತ್ತಿದೆ. ಆದರೆ ನಿಯತ್ತಿಲ್ಲದ ಜನ ದೇಶದ ಹೊರಗೆ ಮಾತನಾಡುತ್ತಾರೆ. ಬಿಜೆಪಿಯಲ್ಲಿ ಡಿಎನ್ ಎ ಮೂಲಕ ನಾಯಕತ್ವ ಹಸ್ತಾಂತರ ಆಗಲ್ಲ.
ದೇಶದಲ್ಲಿ ಬಿಜೆಪಿ ಬರದಿದ್ದರೆ ದೇಶವನ್ನೇ ಕಳೆದುಕೊಳ್ಳುತ್ತೇವೆ. ತುಕ್ಡೇ ಗ್ಯಾಂಗ್ ಗಳು ಮೋದಿಯನ್ನು ಸೋಲಿಸಲು ಹವಣಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಪಾಲಿಟಿಕ್ಸ್ ರಾಜಕಾರಣ ಮಾಡುತ್ತಿದೆ. ಸ್ವಾಭಿಮಾನಿ ಸ್ವಾವಲಂಬಿ ಭಾರತ ಮಾಡುವುದು ನಮ್ಮ ಗುರಿ. ಆದರೆ ಕಾಂಗ್ರೆಸ್ ಔರಂಗಜೇಬನ ಮಾನಸಿಕ ಸ್ಥಿತಿ ಹೊಂದಿದೆ. ಲಕ್ಷಾಂತರ ಜನರನ್ನು ಬಲಾತ್ಕಾರದ ಮತಾಂತರ ಮಾಡಿದ ಔರಂಗಜೇಬನಿಗೂ ಕಾಂಗ್ರೆಸ್ ನವರಿಗು ವ್ಯತ್ಯಾಸವಿಲ್ಲ. ಔರಂಗಜೇಬ ಬದುಕಿಲ್ಲ, ಆತನ ವಿಚಾರ ಜೀವಂತವಾಗಿಟ್ಟಿದೆ. ಕಾಮನ್ ಸಿವಿಲ್ ಕೋಡ್ ಆಗಬೇಕೋ ಬೇಡವೋ? ಹಿಂದೂ ಕ್ರೈಸ್ತ ಮುಸಲ್ಮಾನ ಒಂದೇ ಅಲ್ವಾ. ಆದರೂ ಪ್ರತ್ಯೇಕ ಬೇಕು ಎನ್ನುವರಿಗೆ ದೇಶ ಕೊಟ್ಟಿದ್ದೇವೆ. ಇನ್ನು ಪ್ರತ್ಯೇಕ ಕಾನೂನು ಬೇಕು ಅನ್ನೋರು ಪಾಕಿಸ್ತಾನಕ್ಕೆ ಹೋಗಬಹುದು. ಜಿನ್ನಾ ಮಾನಸಿಕತೆ ಹೊಂದಿರೋರು ಸಮಾನ ನಾಗರೀಕ ಸಂಹಿತೆ ವಿರೋಧಿಸುತ್ತಾರೆ. ಲೋಕಸಭಾ ಚುನಾವಣೆ ಕುರುಕ್ಷೇತ್ರ ಇದ್ದಂತೆ. ಇಂದ್ರಪ್ರಸ್ಥಕ್ಕಾಗಿ ಅಂದು ಯುದ್ಧ ನಡೆದಿತ್ತು. ಇಂದು ಆಧುನಿಕ ಕೌರವರಿಗೆ ನೂತನ ಸಂಸತ್ತು, ವೈಭವ ನೋಡಿಯೇ ಸಂಕಟ ಶುರುವಾಗಿದೆ ಎಂದು ಹೇಳಿದರು.