ಶ್ರೀ ಕೃಷ್ಣ ಮಠದಲ್ಲಿ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ
ಉಡುಪಿಯಲ್ಲಿ ರಾಮ ಪ್ರತಿಷ್ಠಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಐದು ರಥಗಳ ಮಹೋತ್ಸವ ನಡೆಯಿತು.
ಬ್ರಹ್ಮರಥ, ಚಿನ್ನದ ರಥ ಮಹಾಪೂಜಾ ರಥ, ಬೆಳ್ಳಿರಥ ಹಾಗೂ ನವರತ್ನ ರಥವನ್ನು ರಥ ಬೀದಿಗೆ ಪ್ರದಕ್ಷಿಣೆ ತರಲಾಯಿತು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ರಾತ್ರಿ ನಡೆದ ಉತ್ಸವದಲ್ಲಿ ರಾಮಾಯಣ ಸಹಿತ ಕೃಷ್ಣದೇವರ ಉತ್ಸವ ನಡೆಸಲಾಯಿತು.
ಮಹೋತ್ಸವಕ್ಕೂ ಮುನ್ನ ಮಧ್ವ ಸರೋವರದಲ್ಲಿ ತೆಪೋತ್ಸವ ನಡೆಯಿತು. ಈ ವೇಳೆ ಸರೋವರದ ಸುತ್ತಲೂ ದೀಪಗಳನ್ನು ಬೆಳಗಿ ದೀಪೋತ್ಸವ ನಡೆಸಲಾಯಿತು. ಬಳಿಕ ಅಷ್ಟಮಠದ ರಥ ಬೀದಿಯಲ್ಲಿ ಇದೇ ಮೊದಲ ಬಾರಿಗೆ ಪಂಚರಥೋತ್ಸವ ಭಕ್ತರನ್ನು ರೋಮಾಂಚನ ಗೊಳಿಸಿತು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರ ನೇತೃತ್ವದಲ್ಲಿ ನಡೆದ ಈ ಮಹೋತ್ಸವದಲ್ಲಿ, ರಾಮನವಮಿಯ ದಿನ ಪೂಜಿಸಲಾಗುವ ರಾಮದೇವರು, ರಾಮಾಯಣ, ಕೃಷ್ಣ ಮುಖ್ಯಪ್ರಾಣ ದೇವರ ಸಹಿತ ಚಂದ್ರೇಶ್ವರ ಅನಂತೇಶ್ವರ ದೇವರುಗಳ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಉಭಯಶ್ರೀಪಾದರು ಈ ವೇಳೆ ಉಪಸ್ಥಿತರಿದ್ದರು. ರಥೋತ್ಸವದ ವೇಳೆ ಆಕರ್ಷಕ ಸುಡು ಮದ್ದು ಪ್ರದರ್ಶನ ನಡೆಯಿತು. ಸಾವಿರಾರು ಭಕ್ತರು ಈ ರಾಮುತ್ಸವದಲ್ಲಿ ಭಾಗಿಯಾದರು.