ಉಳ್ಳಾಲ : ಶೇಂದಿ ತೆಗೆಯುವ ಸಂದರ್ಭ ತೆಂಗಿನಮರದಿಂದ ಬಿದ್ದು ಸಾವು
ಉಳ್ಳಾಲ : ಕೊಣಾಜೆ ಮುಯರ್ತೆದಾರರ ಸಂಘದ ಮಾಜಿ ನಿರ್ದೇಶಕರೋರ್ವರು ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿನ ಮನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿ ಸದ್ಯ ಸಂತೋಷ ನಗರ ಕುಟುಂಬ ಸಮೇತರಾಗಿ ನೆಲೆಸಿರುವ ವಿಶ್ವಾಂಬರನ್ (58) ಮೃತಪಟ್ಟವರು. ಎಂದಿನಂತೆ ಇಂದು ಬೆಳಿಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ ತೆಂಗಿನಮರಕ್ಕೆ ಹತ್ತಿದ್ದವರು ಕಾಲುಜಾರಿ ಕೆಳಗೆಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕೊಣಾಜೆ ಮೂರ್ತೆದಾರರ ಸಂಘದ ನಿರ್ದೇಶಕರಾಗಿದ್ದ ಇವರು, ಮೂರು ತಿಂಗಳ ಹಿಂದಷ್ಟೇ ರಾಜೀನಾಮೆ ನೀಡಿ ಸದಸ್ಯರಾಗಿ ಮುಂದುವರಿದಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಅಂತಿಮ ಸಂಸ್ಕಾರ ಬೆಳಗ್ಗೆ 9 ಕ್ಕೆ ಸಂತೋಷ್ ನಗರದ ಸ್ವಗೃಹದಲ್ಲಿ ಬಳಿಕ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತಿಮಕ್ರಿಯೆ ನಡೆಯಲಿದೆ.