ಉಳ್ಳಾಲ|| ಸಮುದಾಯ ಆರೋಗ್ಯ ಕೇಂದ್ರ ಸುಸ್ಥಿತಿಯಲ್ಲಿದೆ, ಸಣ್ಣಪುಟ್ಟ ಸಮಸ್ಯೆಯಿಟ್ಟು ಪ್ರತಿಭಟನೆ ನಡೆಸುವುದು ಸರಿಯಲ್ಲ: ಸದಾಶಿವ ಉಳ್ಳಾಲ್

ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಲಿಸಿದರೆ ಸುಸಜ್ಜಿತವಾದ ಎಲ್ಲಾ ವೈದ್ಯಕೀಯ ಪದ್ಧತಿಯ ಚಿಕಿತ್ಸೆ ಸಿಗುವ ಏಕೈಕ ಆರೋಗ್ಯ ಕೇಂದ್ರ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವಾಗಿದ್ದು, ಈ ಆರೋಗ್ಯ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸುವಲ್ಲಿ ಕ್ಷೇತ್ರದ ಶಾಸಕರೂ ಮತ್ತು ಪ್ರಸ್ತುತ ಯು.ಟಿ.ಖಾದರ್ ಅವರು, ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರುಗಳು ಮತ್ತು ಸಿಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದರು.
ತೊಕ್ಕೊಟ್ಟುವಿನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ಉಳ್ಳಾಲದಲ್ಲಿ ಅಲೋಪತಿ., ಆಯುರ್ವೇದ, ಯುನಾನಿ, ಹೋಮಿಯೋಪಥಿ ಸೇರಿದಂತೆ ಆಯುಷ್ ವಿಭಾಗದಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಂಗಳು ದೊರಕುತ್ತಿದೆ. ಆರೋಗ್ಯ ಕೇಂದ್ರದ ಸಿಬಂದಿಗಳಲ್ಲದೆ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಇಲ್ಲಿ ಚಿಕಿತ್ಸೆ ನೀಡುತ್ತಿದ್ದು, ಪ್ರತೀ ದಿನ 200ಕ್ಕೂ ಹೆಚ್ಚು ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಸರತ್ಕಲ್‍ನಲ್ಲಿ ಕೈಗಾರಿಕೆಗಳು ಇದ್ದರೂ ಈ ರೀತಿಯ ಸೌಲಭ್ಯ ಇಲ್ಲ ಎಂದ ಅವರು ಇಲ್ಲಿನ ರೋಗಿಗಳಗೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಇದೆ ಎಂದರು.
ಹಿಂದಿನ ಸರಕಾರದ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಈಗ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರು ಇಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ .ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯ ಅಭಿವೃದ್ಧಿಗೆ ಯು.ಟಿ. ಖಾದರ್ ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ರಾಜ್ಯ ಸಮಿತಿ ಸದಸ್ಯೆ ಸುರೇಖಾ ಚಂದ್ರಹಾಸ್, ಹಿಂದುಳಿದ ವರ್ಗಗಳ ಅಧ್ಯಕ್ಷ ದಿಪಕ್ ಪಿಲಾರ್, ಕಿಸಾನ್ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿ ಸೋಜ, ಯುವ ಇಂಟಕ್ ಅಧ್ಯಕ್ಷ ವಿಶಾಲ ಕೊಲ್ಯ, ಜಿಯಾದ್ ಮತ್ತಿತರರು ಉಪಸ್ಥಿತರಿದ್ದರು.
