ಉಳ್ಳಾಲ: ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ: ಸ್ಪೀಕರ್ ಖಾದರ್
ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಣಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ 150 ಕೋಟಿ ರೂ, ಉಳ್ಳಾಲ ತಾಲೂಕು ಗ್ರಾಮೀಣ ಭಾಗದ ಕುಡಿಯುವ ನೀರಿಗೆ ಎರಡನೇ ಹಂತದ ಯೋಜನೆ 210 ಕೋಟಿ ರೂ ಸಲ್ಲಿಕೆಯಾಗಿದ್ದು, ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಸಚಿವ ಸಂಪುಟದ ಸಭೆಯಲ್ಲಿ ಅಂಗೀಕಾರವಾಗಲಿದ್ದು, ಮುಂದಿನ ಎರಡು ವರ್ಷದೊಳಗಡೆ ಮಂಗಳೂರು ವಿಧಾನಸಭಾ ಕ್ಷೇತ್ರದ್ಯಾಂತ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಅವರು ಉಳ್ಳಾಲ ಮುಕ್ಕಚ್ಚೇರಿಯ ರಾಯಲ್ ಗಾರ್ಡನ್‍ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಉಳ್ಳಾಲ ನಗರಸಭೆಯ ಅಧಿಕಾರಿಗಳೊಂದಿಗೆ ಉಳ್ಳಾಲ ನಗರಸಭೆ ಸೇರಿದಂತೆ, ಮಂಗಳೂರು ವಿಧಾನಸಭಾ ವ್ಯಾಪ್ತಿಯ ಎಲ್ಲಾ ನಗರ ಮತ್ತು ಗ್ರಾಮದ ಅಬಿವೃದ್ಧಿಯ ಕುರಿತಾದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಉಳ್ಳಾಲ ನಗರದ ಅಭಿವೃದ್ದಿಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಿ ಸರಕಾರಕ್ಕೆ ನೀಡಲಾಗಿದೆ ಅಧಿಕಾರಿಗಳು ಯೋಜನೆಗಳಿಗೆ ಪೂರಕವಾದ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಬೇಕು ಎಂದರು.
ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಜೋಡಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಎರಡನೇ ಹಂತದ 150 ಕೋಟಿ ಬಿಡುಗಡೆಗೆ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಬೇಕಾದ 210 ಕೋಟಿ ರೂ ಯೋಜನೆ ಹಣಕಾಸು ಇಲಾಕೆಯಲ್ಲಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆ ಪರಿಗಣಿಸಿ ಮುಂದಿನ ಎರಡು ವರುಷದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಂಡು ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರು ದೊರಕಲಿದೆ ಎಂದರು.
ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗಿನ ರಸ್ತೆ ಅಭಿವೃದ್ಧಿ ಮತ್ತು ಅಸೈಗೋಳಿಯಿಂದ ಕಂಬಳಪದವುವರೆಗಿನ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ ಅನುದಾನ ಬಿಡುಗಡೆಗೆ ಸರಕಾರಕ್ಕೆ ಯೋಜನೆಯ ನೀಲನಕ್ಷೆ ಸಲ್ಲಿಸಿದ್ದು, ಸಂಬಂಧಪಟ್ಟ ಇಲಾಖೆಯ ಸಚಿವರು ಮೌಖಿಕವಾಗಿ ಅನುಮತಿ ನೀಡಿದ್ದು, ಶೀಗ್ರದಲ್ಲೇ ಹಣ ಬಿಡುಗಡೆಯಾಗಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಉಳ್ಳಾಲ ನಗರಸಬಾ ಕಮಿಷನರ್ ವಾಣಿ ವಿ. ಆಳ್ವ ನಗರಸಭೆಯ ಅಭಿವೃದ್ಧಿಯ ಮಾಹಿತಿ ನೀಡಿದರು.