ಉಳ್ಳಾಲ: ಅಸೈಗೋಳಿಯಲ್ಲಿ ಬಸ್ ನಿಲ್ದಾಣ ಲೋಕಾರ್ಪಣೆ
ಉಳ್ಳಾಲ: ಗ್ರಾಮೀಣ ಭಾಗದಲ್ಲಿ ವಿಶೇಷ ಸಾಮಾಜಿಕ ಕಳಕಳಿಯೊಂದಿಗೆ ಬಾಳಿ ಇತರರಿಗೆ ಮಾದರಿಯಾದವರು. ಅವರ ಹೆಸರಿನಲ್ಲಿ ಮಕ್ಕಳು ಸಮಾಜಕ್ಕೆ ಬಸ್ಸು ನಿಲ್ದಾಣವನ್ನು ಕೊಟ್ಟಿರುವುದು ಹೆತ್ತವರಿಗೆ ಕೊಡುವ ಬಹುದೊಡ್ಡ ಗೌರವವಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಮಂಜನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೈಗೋಳಿಯಲ್ಲಿ ದಿ| ಪಟ್ಟೋರಿ ಮೊಯ್ದೀನ್ ಕುಂಞಿ ಸ್ಮಾರಕ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಅಗಲಿದ ಪಟ್ಟೋರಿ ಮೊಯ್ದೀನ್ ಕುಂಞಿ ಅವರು ಕೃಷಿ ಮತ್ತು ವ್ಯಾಪಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದವರು. ರಾಜಕೀಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಅವರು ಗ್ರಾಮೀಣ ಮಟ್ಟದಲ್ಲಿ ಬಿಳಿ ಉಡುಗೆ ಯೊಂದಿಗೆ ಎಲ್ಲರನ್ನು ಆಕರ್ಷಿಸು ತ್ತಿದ್ದಂತಹ ವ್ಯಕ್ತಿತ್ವ. ಅಗಲಿದ ನಂತರವೂ ಮಕ್ಕಳು ಅವರ ಸ್ಮರಣಾರ್ಥ ಸಾಮಾಜಿಕ ವ್ಯವಸ್ಥೆಯನ್ನು ಕಲ್ಪಿಸು ತ್ತಿರುವುದು ಹೆತ್ತವರಿಗೆ ಕೊಡುವ ಬಹು ದೊಡ್ಡ ಆಸ್ತಿಯಾಗಿದೆ ಎಂದರು.
ಮಂಜನಾಡಿ ಗ್ರಾ.ಪಂ ಅಧ್ಯಕ್ಷೆ ನಳಿನಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕಾಂಗ್ರೆಸ್ ಮುಖಂಡ ಎನ್.ಎಸ್ ಕರೀಂ, ಮಂಜನಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಅಸೈ, ಉದ್ಯಮಿ ಅಬ್ದುಲ್ ಖಾದರ್,ತಾ.ಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್,ಮುಸ್ತಾಫ ಹರೇಕಳ, ನಿವೃತ್ತ ಶಿಕ್ಷಕ ವೆಂಕಪ್ಪ ಮಾಸ್ಟರ್, ಗ್ರಾ.ಪಂ ಉಪಾಧ್ಯಕ್ಷ ಅತ್ತಾವುಲ್ಲಾ ಪರ್ತಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.