ಉಳ್ಳಾಲ: ಬೈಕ್ ಢಿಕ್ಕಿ- ಪಾದಚಾರಿ ಬೇಕರಿ ಮಾಲೀಕ ಸಾವು
ಉಳ್ಳಾಲ: ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ.
ತಲಪಾಡಿ ಹಳೆಯ ಬಸ್ಸು ತಂಗುದಾಣ ಬಳಿಯ ನಿವಾಸಿ ರಾಜೇಶ್ ಶೆಟ್ಟಿ(49)ಮೃತರು. ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ಸು ತಂಗುದಾಣದ ಬಳಿ ಬೇಕರಿ ಇದ್ದು, ಎದುರಿನ ಹೆದ್ದಾರಿ ಬದಿಯಲ್ಲೇ ಮನೆಯಿದೆ. ಭಾನುವಾರದಂದು ತಲಪಾಡಿ ದೇವಿಪುರದ ರಥೋತ್ಸವ ಇದ್ದ ಹಿನ್ನಲೆ ರಾಜೇಶ್ ಅವರು ಮನೆಗೆ ಬಂದಿದ್ದ ನೆಂಟರನ್ನು ಉಪಚರಿಸಿ ಮದ್ಯಾಹ್ನ ವೇಳೆ ಬೇಕರಿಗೆ ತೆರಳಲು ಹೆದ್ದಾರಿ ದಾಟಲು ನಿಂತಿದ್ದ ವೇಳೆ ರಸ್ತೆಯ ವಿರುದ್ಧ ಧಿಕ್ಕಿನಲ್ಲಿ ಧಾವಿಸಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಾಜೇಶ್ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಮೃತ ರಾಜೇಶ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.ಹಿರಿಯ ಮಗಳು ಪದವಿ ಶಿಕ್ಷಣ ಪಡೆಯುತ್ತಿದ್ದು, ಕಿರಿಯ ಮಗಳು ಎಸ್ಸೆಸೆಲ್ಸಿ ಓದುತ್ತಿದ್ದು ಇದೇ ಮಾ.25 ರಂದು ನಡೆಯಲಿರುವ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ರಾಜೇಶ್ ಅವರ ಅಕಾಲಿಕ ಸಾವಿಂದ ಪತ್ನಿ, ಮಕ್ಕಳು ಆಘಾತಕ್ಕೊಳಗಾಗಿದ್ದಾರೆ.
ಮೃತ ರಾಜೇಶ್ ತಲಪಾಡಿ ವೀರಾಂಜನೇಯ ವ್ಯಾಯಾಮ ಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನೆಗೆ ಕಾರಣನಾದ ಬೈಕ್ ಸವಾರ ಮಹಮ್ಮದ್ ಸೊಹೈಲ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.