“ ಮಾತು ನಿಲ್ಲಿಸಿದ ತುಳುವಿನ ವಿ. ಜಿ. ಪಾಲ್ ”

ತುಳುವಿನ ಹಿರಿಯ ರಂಗಕರ್ಮಿ ವಿ. ಜಿ. ಪಾಲ್ ನಿಧನ ರಾದರು. ಅವರ ಮೂಲ ಹೆಸರು ವೇಣುಗೋಪಾಲ ಟಿ. ಕೋಟ್ಯಾನ್ ಎಂದರೆ ಯಾರಿಗೂ ಈಗ ಗೊತ್ತಾಗಲಿಕ್ಕಿಲ್ಲ. ಸಾವಿರಾರು ತುಳು ರಂಗ ಲೋಕದವರಲ್ಲಿ ಪಾಲ್ ಹೆಸರು ಕೂಡ ಮುಖ್ಯವೇ ಆಗಿದೆ. ತೊಂಬತ್ತು ವರುಷಗಳ ತುಳು ರಂಗಭೂಮಿ ಚರಿತ್ರೆಯಲ್ಲಿ ಅರ್ಧ ಶತಮಾನ ವಿ. ಜಿ. ಪಾಲ್ ಅವರದೂ ಆಗಿತ್ತು.

ನಾಟಕ ಎಂದ ಕೂಡಲೆ ಗ್ರೀಸ್ ದೇಶ ನೆನಪಾಗುತ್ತದೆ. ಅಧಿಕೃತವಾಗಿ ನಾಟಕ ಬರೆದು ಆಡಿ ತೋರಿಸಿದವರು ಅವರು. ತೆರೆದ ರಂಗ ಮಂದಿರ, ಮುಚ್ಚಿದ ರಂಗ ಮಂದಿರ ಎರಡಕ್ಕೂ ಅವರೇ ಆದಿ. ಕ್ರಿಸ್ತ ಪೂರ್ವ 525ರಿಂದ 484ರವರೆಗಿನ ಅಸೈಲಸ್ ಅವರನ್ನು ಆಧುನಿಕ ನಾಟಕಗಳ ಆದಿ ವ್ಯಕ್ತಿ ಎನ್ನಲಾಗುತ್ತದೆ. ಮಾನವನ ಇತಿಹಾಸದಲ್ಲಿ ಅಧಿಕೃತವಲ್ಲದ ನಾಟಕಗಳು ಅದರ ನಡುವೆ ಆಗಿ ಹೋಗಿರುತ್ತವೆ. ಅನಂತರ ರೋಮನ್ ನಾಟಕಗಳು. ಈಜಿಪ್ತಿನಲ್ಲಿ ಇದೇ ಅವಧಿಯಲ್ಲಿ ನಾಟಕಗಳು ಅರಳಿವೆ ಎನ್ನುವುದನ್ನು ಅಲ್ಲಿನ ಚಿತ್ರಕಲೆ ಮತ್ತು ಲಭ್ಯ ಪ್ರಸಾದನಾ ವಸ್ತುಗಳು ಸಾಕ್ಷ್ಯ ನುಡಿಯುತ್ತವೆ.

ಕ್ರಿಸ್ತ ಪೂರ್ವ ಒಂದನೆಯ ಶತಮಾನದ ಹೊತ್ತಿಗೆ ಅಯೋಧ್ಯೆಯಲ್ಲಿ ಗ್ರೀಕರ ನಾಟಕಗಳ ಪ್ರಭಾವದಿಂದಾಗಿ ಭಾರತದ ಪಾಳಿ, ಪ್ರಾಕೃತ, ಸಂಸ್ಕೃತ ನಾಟಕಗಳು ರಂಗ ಏರಿದವು. ಬುದ್ಧಾನುಯಾಯಿಯಾದ ಅಶ್ವಘೋಷನು ಅಧಿಕೃತವಾಗಿ ಭಾರತದ ನಾಟಕಗಳಿಗೆ ಅಧಿಕೃತತೆ ನೀಡಿದವನು ಎಂದು ತಿಳಿದು ಬರುತ್ತದೆ. ಅದಕ್ಕೆ ಮೊದಲು ಜನಪದವಾಗಿ ನಾಟಕಗಳು ಅನಧಿಕೃತ ರೂಪದಲ್ಲಿ ಇದ್ದಿರುತ್ತದೆ.

ಕನ್ನಡ ನಾಟಕಗಳ ಚರಿತ್ರೆ 150 ವರುಷಗಳಷ್ಟು ವಿಸ್ತಾರದ್ದಾಗಿದೆ. ತುಳು ನಾಟಕಗಳ ಚರಿತ್ರೆ ಅಧಿಕೃತವಾಗಿ 90 ವರುಷಗಳದ್ದು. 1933ರಲ್ಲಿ ಮಾಧವ ತಿಂಗಳಾಯರು ಬರೆದ ಜನ ಮರ್ಲ್ ಎನ್ನುವುದೇ ತುಳುವಿನ ತಿಳಿದಿರುವ ಮೊದಲ ನಾಟಕವಾಗಿದೆ. 1936ರಲ್ಲಿ ಶಿವಣ್ಣ ಹೆಗ್ಡೆಯವರ ವಿದ್ಯೆದ ತಾದಿ ನಾಟಕ ಬಂದಿದೆ. 1945ರ ಹೊತ್ತಿಗೆ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ತಿರುಗಾಟ ಆರಂಭಿಸಿದರು. 1946ರ ಮುತ್ತುನ ಮದ್ಮೆ ಭಾರೀ ಜನಪ್ರಿಯ ನಾಟಕ ಎನಿಸಿದೆ. ಮುಂದೆ ಸ್ಟಾರ್ ನಾಟಕಕಾರರಾಗಿ ಬೆಳಗಿದವರು ಕೆ. ಎನ್. ಟೇಲರ್. ಆಧುನಿಕವಾಗಿ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್‍ಬೈಲ್ ನಾಟಕಕಾರರಾಗಿ ಖ್ಯಾತರು. ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ನಟರಾಗಿ ಜಗದ್ವಿಖ್ಯಾತರು.

ಇವರೆಲ್ಲರ ನಡುವೆ ಅದೆಷ್ಟೋ ರಂಗ ಕರ್ಮಿಗಳ, ನಾಟಕ ನಟರ ಹೆಸರು ಇವೆ. ಅವನ್ನೆಲ್ಲ ಪಟ್ಟಿ ಮಾಡಲು ಪ್ರಯತ್ನಿಸಬಹುದು ಹೊರತು ಎಲ್ಲರ ಹೆಸರು ಮೂಡಿಸುವುದು ಕಡು ಕಷ್ಟ. ಅಂತಾ ನಡು ನೆಲೆಯವರಲ್ಲಿ ವಿ. ಜಿ. ಪಾಲ್ ಪ್ರಮುಖರು. ತುಳು ನಾಟಕಗಳಿಂದಲೇ ತುಳು ಚಿತ್ರರಂಗ ಬಲಿತುದು. ಹಾಗೆ ಹೇಳುವಾಗ ಮುಖ್ಯವಾಗಿ ನೆನಪಾಗುವ ಹೆಸರು ವಿಶುಕುಮಾರ್ ಅವರದು. ಅವರು ಬರೆದು ಆಡಿದ ನಾಟಕ ಕೋಟಿ ಚೆನ್ನಯ. ಅದನ್ನು ಅವರು ತುಳು ಸಿನಿಮಾ ಆದಾಗ ನಿರ್ದೇಶನ ಮಾಡಿದರು. ಮೊದಲು ನೂರು ದಿನ ಓಡಿದ ತುಳು ಚಿತ್ರ ಈ ಕೋಟಿ ಚೆನ್ನಯ. ಸಂಜೀವ ದಂಡಕೇರಿ, ಕೆ. ಎನ್. ಟೇಲರ್ ಕೂಡ ನಾಟಕ ತುಳು ಸಿನಿಮಾ ಮಾಡಿ ಗೆದ್ದವರು. ಇತ್ತೀಚಿನ ವರುಷಗಳಲ್ಲಿ ನಾಟಕ ಸಿನಿಮಾ ಮಾಡಿ ಗೆದ್ದವರಲ್ಲಿ ವಿಜಯಕುಮಾರ್ ಕೊಡಿಯಾಲ್‍ಬೈಲ್ ಮತ್ತು ದೇವದಾಸ್ ಕಾಪಿಕಾಡ್ ಪ್ರಮುಖರು.

ತುಳುನಾಡಿನ ಮಂಗಳೂರು ಬೋಳೂರು ಗ್ರಾಮದ ಹಿರಿಯ ರಂಗಕರ್ಮಿ, ನಾಟಕ ನಟ, ನಿರ್ದೇಶಕ ವೇಣುಗೋಪಾಲ ಟಿ. ಕೋಟ್ಯಾನ್ ಅವರು ನೆನಪುಳಿಸಿ ಹೋಗಿದ್ದಾರೆ. ವಿ. ಜಿ. ಪಾಲ್ ಎಂದೇ ಖ್ಯಾತರಾಗಿರುವ ಅವರು ಬೋಳೂರಿನ ತನಿಯಪ್ಪ ಕೋಟ್ಯಾನ್ ಮತ್ತು ಸೀತಮ್ಮರ ಮಗ. 1961ರಲ್ಲಿ ಕಲ್ಜಿಗದ ಕುರುಕ್ಷೇತ್ರ ತುಳು ನಾಟಕದ ಮೂಲಕ ನಟನಾಗಿ ಮೂಡಿದ ಅವರು ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಇತರ ಪಾತ್ರಗಳಿಗೂ ಜೀವ ತುಂಬಿದ್ದರು.

ತುಳು ಕನ್ನಡ ಚಲನಚಿತ್ರಗಳಲ್ಲೂ ನಟಿಸಿರುವ ಅವರು ಸಾಕಷ್ಟು ಧ್ವನಿಸುರುಳಿಗಳಿಗೆ ಮಾತು ನೀಡಿದ್ದಾರೆ. ಅವರ 75ರ ಪ್ರಾಯದ ಕಾಲದಲ್ಲಿ ‘ಪಾಲ್ ಕಡಲ್’ ಎಂಬ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ವೃದ್ಧಾಪ್ಯದಲ್ಲೂ ಅವರು ಚಟುವಟಿಕೆಯಿಂದಲೇ ಇದ್ದರು. ತುಳು ಅಕಾಡೆಮಿ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಯಿಂದ ಹಿಡಿದು ಹತ್ತು ಹದಿನಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿತ್ತು. ಎಲ್ಲರೊಂದಿಗೆ ಸ್ನೇಹ ಪರ ಸಂಬಂಧ ಅವರ ವಿಶೇಷ ಗುಣವಾಗಿತ್ತು.
ನಾಟಕ ಎನ್ನುವುದು ಜನರನ್ನು ನೇರವಾಗಿ ಮುಟ್ಟುವ ಕಲೆ. ಜನರು ಸ್ಥಳದಲ್ಲೇ ಪ್ರತಿಕ್ರಿಯಿಸುವ ಕಲೆಯೂ ಆಗಿದೆ. ನಾಟಕ ಎಂದ ಕೂಡಲೆ ನಮಗೆ ಕಾಣುವುದು ನಟ ನಟಿಯರು. ಆದರೆ ನಾಟಕ ರಚನೆ, ನಿರ್ದೇಶನ, ರಂಗ ಸಜ್ಜಿಕೆ, ಪ್ರಸಾದನ ಕಲೆ, ಧ್ವನಿ ಬೆಳಕಿನ ವ್ಯವಸ್ಥೆ, ಪ್ರಚಾರ ಎಂದು ಇತ್ಯಾದಿ ವ್ಯವಸ್ಥೆಗಳು ಬರುತ್ತವೆ. ಆ ಎಲ್ಲ ಕ್ಷೇತ್ರಗಳವರಿಗೂ ಕೆಲಸ ಇರುತ್ತದೆ. ಅವರ ಶ್ರಮ ಶಕ್ತಿಯ ಮೊತ್ತವೇ ನಾವು ನೋಡುವ ನಾಟಕ. ಅವೆಲ್ಲದರ ಮೊತ್ತವೇ ಒಂದು ನಾಟಕದ ಯಶಸ್ಸನ್ನು ನಿರ್ಧಾರ ಮಾಡುತ್ತದೆ.

ವಿ. ಜಿ. ಪಾಲ್ ಅವರು ಬರೇ ರಂಗದ ಮೇಲೆ ಮಾತ್ರ ಮಿಂಚಿದವರಲ್ಲ. ನಾಟಕ ರಂಗದ ಎಲ್ಲ ಕೆಲಸಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದವರು. ಕನ್ನಡ ನಾಟಕ ರಂಗ ಎಂದ ಕೂಡಲೆ ಮೊದಲು ನೆನಪಾಗುವ ಹೆಸರುಗಳು ಗುಬ್ಬಿ ವೀರಣ್ಣ ಮತ್ತು ಸುಬ್ಬಯ್ಯ ನಾಯ್ಡು ಅವರುಗಳದ್ದು. ಕನ್ನಡ ಸಿನಿಮಾ ಕ್ಷೇತ್ರ ಕೂಡ ಆರಂಭದಲ್ಲಿ ನಾಟಕ ಕ್ಷೇತ್ರದಿಂದಲೆ ತೆರೆಯ ಮೇಲೆ ತೆರೆದುಕೊಂಡುದಾಗಿದೆ. ಕನ್ನಡ ಚಿತ್ರರಂಗವೆಂದರೆ ಮೊದಲು ನಿಲ್ಲುವ ಹೆಸರು ರಾಜಕುಮಾರ್ ಅವರದು. ಅವರು ಕೂಡ ರಂಗಭೂಮಿಯಿಂದಲೇ ಬಂದವರು.

ವೃತ್ತಿ ನಾಟಕ ಕಂಪೆನಿಗಳು ನೂರಾರು ಹುಟ್ಟಿವೆ, ಸತ್ತಿವೆ. ಕನ್ನಡದ ವೃತ್ತಿ ರಂಗಭೂಮಿಯ ವಿಷಯ ಬಂದಾಗ ಮೊದಲು ಕಾಣುವುದು ಉತ್ತರ ಕರ್ನಾಟಕ. ಚಲನಚಿತ್ರರಂಗವು ಮೇಲೆದ್ದ ಬಳಿಕವೂ ಉತ್ತರ ಕರ್ನಾಟಕದಲ್ಲಿ ವೃತ್ತಿ ರಂಗಭೂಮಿಯು ತೀವ್ರವಾಗಿ ಜನ ಮಾನಸವನ್ನು ಸೆಳೆದಿತ್ತು. ಈಗಲೂ ಒಂದೆರಡು ಕಂಪೆನಿಗಳು ಉತ್ತರ ಕರ್ನಾಟಕದಲ್ಲಿ ಉಳಿದುಕೊಂಡಿವೆ.

ತುಳು ನಾಟಕ ಕ್ಷೇತ್ರದಲ್ಲಿ ಕಂಪೆನಿ ಎಂಬುದು ಒಂದೆರಡು ಪ್ರಯೋಗವಾಗಿದ್ದು ಅಷ್ಟೆ. ಇಲ್ಲಿದ್ದುದು ನಾಟಕ ತಂಡಗಳು. ಈಗಲೂ ನಾಟಕ ತಂಡಗಳು ಎನ್ನುತ್ತಲೇ ಅವು ಮುಂದುವರಿದಿವೆ. ಈ ತಂಡಗಳಿಗೆ ಜೀವವಾಯು ತುಂಬುವ ನೆಲೆಗಳು ಎಂದರೆ ಮುಂಬಯಿ ಮತ್ತು ಕೊಲ್ಲಿ ದೇಶಗಳು. ಕೊಲ್ಲಿ ದೇಶದಲ್ಲಿ ತುಳು ನಾಟಕಗಳಿಗೆ ಮೊದಲು ನೆಲೆ ಕಲ್ಪಿಸಿದವರಲ್ಲಿ ವಿ. ಜಿ. ಪಾಲ್ ಪ್ರಮುಖರು ಎನ್ನಲಾಗಿದೆ. ಬೋಳೂರಿನವರೇ ಆದ ಬೊಕ್ಕಪಟ್ಣ ಭವಾನಿಶಂಕರ್ ಕುಂದರ್ ಮೊದಲಾದವರೊಂದಿಗೆ ಕೂಡ ವಿ. ಜಿ. ಪಾಲ್ ಹೆಚ್ಚು ಪಳಗಿದವರು.

ಬೋಳೂರು ಮತ್ತು ಬೋಳಾರದ ನಡುವೆ ರಂಗ ತರಂಗಗಳು ಹಬ್ಬಿ ಇಂದು ಮಂಗಳೂರಿನ ಬೇರೆ ಬೇರೆ ಪ್ರದೇಶಗಳಿಗೆ ವ್ಯಾಪಿಸಿಕೊಂಡಿವೆ. ಕೊಲ್ಲಿಯ ಕೊಂಡಿ ಇಂದು ತುಳು ನಾಟಕ ಮತ್ತು ಸಿನಿಮಾಗಳಿಗೂ ಜೀವದ್ರವ್ಯವಾಗಿದೆ. ಮಂಗಳೂರಿಲ್ಲಿ ಕೊಂಕಣಿ ನಾಟಕ ಬಲಿತಿವೆ, ಬ್ಯಾರಿ ನಾಟಕಗಳು ಹುಟ್ಟುವ ಪ್ರಯತ್ನ ಮಾಡಿ ಒಂದು ಮಟ್ಟಿನ ಪ್ರಗತಿ ಕಂಡಿವೆ. ಬೋಳೂರು ವಿಶುಕುಮಾರ್‍ರಿಂದ ವಿ. ಜಿ. ಪಾಲ್‍ವರೆಗೆ ನಾನಾ ರಂಗ ಮುಕುಟಗಳನ್ನು ಕಂಡಿದೆ. ಹೀಗೆ ಗ್ರೀಸ್‍ನ ಮೆಡಿಟರೇನಿಯನ್‍ನಿಂದ ಬೋಳೂರು ಗ್ರಾಮದ ಪಾಲ್ ಕಡಲ್ ತಡಿಯವರೆಗೆ ನಾಟಕದ ರಂಗು ಚಿಮ್ಮಿ ಹರಿದಿದೆ.

ಬರಹ: ಪೇರೂರು ಜಾರು
ಹಿರಿಯ ಸಂಪಾದಕರು

Related Posts

Leave a Reply

Your email address will not be published.