ವಿಟ್ಲ: ಯುವ ಪೀಳಿಗೆಯಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯವಾಗಬೇಕು- ಅವಧೂತ ಶ್ರೀವಿನಯ ಗುರೂಜಿ

ವಿಟ್ಲ: ಸಂಸ್ಕಾರ, ಸಂಸ್ಕೃತಿ ಹಳ್ಳಿಯಲ್ಲಿ ದೃಢವಾಗಿದ್ದು, ಗ್ರಾಮೀಣ ಭಾಗದಲ್ಲಿ ಇದು ವ್ಯತ್ಯಾಸವಾಗದಂತೆ ತಡೆಯುವ ಕಾರ್ಯವಾಗಬೇಕು. ಹಳ್ಳಿಯಲ್ಲಿ ಸಂಸ್ಕಾರದಲ್ಲಿ ವ್ಯತ್ಯಾಸವಾದ ಭಾರತ ಹಾಳಾಗುತ್ತದೆ. ಭಾವನೆಯಿಂದ ಕೂಡಿದ ರಥ ಭಾರತವಾಗಿದ್ದು, ಸನಾತನ ಧರ್ಮದ ರಕ್ಷಣೆಯ ಭಾವವನ್ನು ಎಲ್ಲರೂ ಹೊಂದಿದ್ದಾರೆ. ಹಬ್ಬಗಳ ಆಚರಣೆಯಿಂದ ಸಂಘಟನೆ ಬಲವಾಗುತ್ತದೆ ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾವುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳ್ಳಿಹಬ್ಬ ಮಹೋತ್ಸವದ ವರಮಹಾಲಕ್ಷ್ಮೀ ವ್ರತಾಚರಣೆ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಆಹಾರದಲ್ಲಿ ಸತ್ವ ಕಡಿಮೆಯಾಗಿ ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯುವ ಪೀಳಿಗೆಯಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯ ಧಾರ್ಮಿಕ ಕೇಂದ್ರಗಳ ಮೂಲಕ ನಡೆಯಬೇಕು ಎಂದು ಹೇಳಿದರು.
ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಅಶಕ್ತರಿಗೆ ನೀಡಿದ ಕೊಡುಗೆ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಸಮಾಜಕ್ಕೆ ಪ್ರೀತಿಯನ್ನು ನೀಡಿದ್ದಾರೆ. ಸಂಪತ್ತಿಗಿಂತ ಪ್ರೀತಿಯನ್ನು ಸಮಾಜಕ್ಕೆ ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಕೆ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ವಹಿಸಿದ್ದರು. ಚಿಕ್ಕಮಗಳೂರು ಕಳಸ ಶ್ರೀ ಸತ್ಯ ಶನೀಶ್ವರ ಕ್ಷೇತ್ರದ ಶ್ರೀ ಚಿದಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಣಿಲವಾಯ್ತು ವೈಕುಂಠ ಕನ್ನಡ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ ನಡೆಯಿತು.
ಉದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಉದ್ಯಮಿ ಕೆ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದ ಡಾ. ಎಂ. ಬಿ. ಪುರಾಣಿಕ್, ಧಾರ್ಮಿಕ ಕ್ಷೇತ್ರದ ಮೋನಪ್ಪ ಭಂಡಾರಿ, ಉದ್ಯಮ ಕ್ಷೇತ್ರದ ಸುನೀಲ್ ಆರ್. ಸಾಲ್ಯಾನ್, ಉದ್ಯಮ ಕ್ಷೇತ್ರದ ಭಾಸ್ಕರ್ ಶೆಟ್ಟಿ ಪುಣೆ, ವೈದ್ಯಕೀಯ ಕ್ಷೇತ್ರದ ಡಾ. ನರಸಿಂಹ ಶಾಸ್ತ್ರಿ, ಸಾಮಾಜಿಕ ಕ್ಷೇತ್ರದ ಟಿ. ತಾರಾನಾಥ ಕೊಟ್ಟಾರಿ, ಉದ್ಯಮ ಕ್ಷೇತ್ರದ ದಿವಾಕರ್ ಮೂಲ್ಯ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಲೋಟಸ್ ಪ್ರಾಪರ್ಟೀಸ್ ಆಡಳಿತ ಪಾಲುದಾರ ಜಿತೇಂದ್ರ ಎಸ್. ಕೊಟ್ಟಾರಿ, ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಪಾದೆಬೆಟ್ಟು, ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಉಮೇಶ್ ಪೂಂಜ, ವಿಠಲ ತಣ್ಣೀರು ತೋಟ, ಪುರುಷೋತ್ತಮ ಚೇಂಡ್ಲ, ಜಗದೀಶ್ ಶೇಣವ, ಪ್ರಸಾದ್ ಪಾಂಗಣ್ಣಾಯ, ರೇವತಿ ಪೆರ್ನೆ, ವನಿತಾ ವಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ತಾರಾನಾಥ ಟಿ. ಸ್ವಾಗತಿಸಿದರು. ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್. ಕೆ. ನಯನಾಡು, ವಾರುಣಿ ನಾಗರಾಜ ಆಚಾರ್ಯ ಮಂಗಳದೇವಿ ಕಾರ್ಯಕ್ರಮ ನಿರೂಪಿಸಿದರು.
ಪ್ರಾತಃಕಾಲ ತ್ರಿಕಾಲ ಪೂಜೆ ಪ್ರಾರಂಭ, ಆದಿತ್ಯಾ ಹೃದಯ ಹೋಮ, ಕನಕಧಾರ ಯಾಗ, ಚಕ್ರಾಬ್ಧಿ ಪೂಜೆ, ಸಹಸ್ರನಾಮ ತುಳಸಿ ಅರ್ಚನೆ, ಸಾಯಂಕಾಲ ಪಂಚದುರ್ಗಾ ಹೋಮ, ಪಂಚದುರ್ಗಾ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು. ಕಡೇಶಿವಾಲಯ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ ವೈಭವ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕೃಪಾಪೆÇೀಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ಬಪ್ಪನಾಡು ಕ್ಷೇತ್ರಮಹಾತ್ಮೆ ಬಯಲಾಟ ನಡೆಯಿತು.
