ಮಹಾಮಾರಿ ಏಡ್ಸ್

ಏನಿದು ಏಡ್ಸ್ ?
ಏಡ್ಸ್ ಎನ್ನುವುದು ಎಚ್.ಐ.ವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಚವಾಗಿರುತ್ತದೆ. ಎಚ್.ಐ.ವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‍ಸ್ಸಿ ವೈರಸ್ ಆಗಿರುತ್ತದೆ. ಈ ಎಚ್.ಐ.ವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೇಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್.ಐ.ವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ತಮ್ಮ ದೇಹದ ರೋಗ ನೀರೋಧಕ ಶಕ್ತಿಗೆ ಸಂಬಂಧಪಟ್ಟ ಖಾಯಿಲೆಯಾಗಿರುತ್ತದೆ. ಎಚ್.ಐ.ವಿ ವೈರಾಣು ದೇಹಕ್ಕೆ ಸೇರಿದ ಬಳಿಕ ನಮ್ಮ ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ಹೀಗಾದಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ, ರೋಗಿಯು ಬ್ಯಾಕ್ಟೀರಿಯಾ, ಫಂಗಸ್, ವೈರಾಣು ಅಥವಾ ಇನ್ನಾವುದೇ ರೋಗಗಳ ಸೋಂಕಿಗೆ ಬೇಗನೆ ತುತ್ತಾಗುತ್ತಾನೆ. ಒಟ್ಟಿನಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟು ಹೋಗಿ ರೋಗಿಗಳಲ್ಲಿ ಕಂಡುಬರುವ ರೋಗಗಳ ಸಮೂಹಕ್ಕೆ ಒಟ್ಟಾಗಿ ‘ಏಡ್ಸ್’ ರೋಗ ಎಂದು ಸಂಭೋಧಿಸಲಾಗುತ್ತದೆ. ಪದೇ ಪದೇ ಕಾಡುವ ಜ್ವರ, ತಲೆ ನೋವು, ನಿರಂತರ ಬೇಧಿ, ವಿಪರೀತ ಸುಸ್ತು, ಅಪೌಷ್ಟಿಕತೆ, ಗಂಟಲು ಉರಿ, ಗಂಟಲು ನೋವು, ಕೆಮ್ಮು ದಮ್ಮು, ದೇಹದ ತೂಕ ಕಡಿಮೆಯಾಗುವುದು, ಕುತ್ತಿಗೆಯ ಸುತ್ತ ಗಡ್ಡೆ ಬೆಳೆಯುವುದು ಹೀಗೆ ಹತ್ತು ಹಲವು ತೊಂದರೆಗಳು ಒಟ್ಟಾಗಿ ಕಾಡಿ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡಿ ಆತನನ್ನು ರೋಗಗಳ ಹಂದರವನ್ನಾಗಿ ಮಾಡಿ, ರಸ ಹೀರಿದ ಕಬ್ಬಿನ ಜಲ್ಲೆಯಂತೆ ವ್ಯಕ್ತಿಯನ್ನು ಹೈರಾಣಾಗಿಸಿಬಿಡುತ್ತದೆ.

ಬಾಯಿಯಲ್ಲಿ ಕಂಡು ಬರುವ ಎಚ್‍ಐವಿ ಸೋಂಕಿನ ಚಿಹ್ನೆಗಳು :

ಬಾಯಿಯನ್ನು ಸಾಮಾನ್ಯವಾಗಿ ವೈದ್ಯರ ಮುಖ ಕನ್ನಡಿ ಎಂದು ಸಂಭೋಧಿಸುತ್ತಾರೆ. ಯಾಕೆಂದರೆ ನೂರಾರು ರೋಗಗಳ ಚಿಹ್ನೆಗಳು ಆರಂಭಿಕ ಹಂತದಲ್ಲಿಯೇ ಬಾಯಿಯೊಳಗೆ ಕಾಣಿಸುತ್ತದೆ. ಎಚ್.ಐ.ವಿ ಸೋಂಕು ತಗುಲಿದ ಬಳಿಕ ದೇಹದ ರಕ್ಷಣ ವ್ಯವಸ್ಥೆ ಕುಸಿದು ಹೋಗಿ ಬಾಯಿಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತದೆ. ಇವುಗಳಲ್ಲಿ ಈ ಕೆಳಗಿನವು ಪ್ರಮುಖವಾಗಿದೆ.

  1. ಓರಲ್ ವಾರ್ಟ್‍ಗಳು : ಇದನ್ನು ಅಚ್ಚ ಕನ್ನಡದಲ್ಲಿ ನಾರೋಲಿ ಅಥವಾ ಅಣಿ ಅಂತಲೂ ಸಂಬೋಧಿಸಲಾಗುತ್ತದೆ. ಸಣ್ಣ ಸಣ್ಣ ನೋವು ರಹಿತ ಗಡ್ಡೆಗಳು ಅಥವಾ ಗಂಟುಗಳು ಬಾಯಿಯೊಳಗೆ ಕಂಡು ಬರುತ್ತದೆ. ಇವುಗಳ ಸಂಖ್ಯೆ ನಾಲ್ಕಾರರಿಂದ ಹತ್ತಿಪ್ಪತ್ತರವರೆಗೆ ಇರುತ್ತದೆ. ಹ್ಯೂಮನ್ ಪಾಪಿಲೋಮಾ ಎಂಬ ವೈರಾಣುವಿನಿಂದ ಈ ವಾರ್ಟ್‍ಗಳು ಉಂಟಾಗುತ್ತದೆ. ಲೇಸರ್ ಮುಖಾಂತರ ಈ ವಾರ್ಟ್‍ಗಳನ್ನು ಕಿತ್ತುಹಾಕಲಾಗುತ್ತದೆ. ಆದರೆ ಪದೇ ಪದೇ ಅವುಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
  2. ಕೂದಲುಗಳುಳ್ಳ ಲ್ಯೂಕೋಪ್ಲೇಕಿಯಾ : ಇದೊಂದು ಬೆಳ್ಳಗಿನ ದಪ್ಪನಾದ ಪದರವಾಗಿದ್ದು ನಾಲಗೆ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ನಡುವೆ ಸಣ್ಣ ಕೂದಲುಗಳಂತಹಾ ರಚನೆ ಕಂಡು ಬರುತ್ತದೆ. ಇವುಗಳನ್ನು ಟೂತ್‍ಬ್ರಶ್‍ನಿಂದ ತೆಗೆಯಲು ಸಾಧ್ಯವಾಗದು ಮತ್ತು ನೋವು ಇರುವ ಸಾಧ್ಯತೆ ಇರುತ್ತದೆ. ನಾಲಿಗೆಯಲ್ಲಿ ರುಚಿಯನ್ನು ಕಂಡು ಹಿಡಿಯುವ ಸಾಮಥ್ರ್ಯ ಕ್ಷೀಣಿಸುತ್ತದೆ. ಏಬ್‍ಸ್ಟೈನ್ ಬಾರ್ ವೈರಾಣುವಿನಿಂದ ಈ ಸ್ಥಿತಿ ಬರುತ್ತದೆ. ನೂರರಲ್ಲಿ 90 ಶೇಕಡಾ ಏಡ್ಸ್ ರೋಗಿಗಳಲ್ಲಿ ಇದು ಕಾಣಿಸುತ್ತದೆ.
  3. ಓರಲ್ ಥ್ರಷ್ : ಇದೊಂದು ಶಿಲೀಂದ್ರ ಅಥವಾ ಫಂಗಸ್ ಸೋಂಕಿನಿಂದ ಬರುವ ರೋಗವಾಗಿರುತ್ತದೆ. ಬಾಯಿಯೊಳಗಿನ ಕೆನ್ನೆಯ ಒಳಭಾಗ ಮತ್ತು ನಾಲಗೆಯ ಮೇಲೆ ಬಿಳಿಯದಾದ ದಪ್ಪ ಪದರ ಉಂಟಾಗುತ್ತದೆ. ಇದನ್ನು ಸುಲಭವಾಗಿ ತೆಗೆಯಬಹುದು. ಆದರೆ ಬಹಳ ನೋವು ಇರುತ್ತದೆ ಮತ್ತು ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ. ಕ್ಯಾಂಡಿಡಾ ಎಂಬ ಫಂಗಸ್‍ನಿಂದ ಈ ಥ್ರಷ್ ಬರುತ್ತದೆ. ಇದನ್ನು ಕ್ಯಾಂಡಿಡಿಯೋಸಿಸ್ ಎಂತಲೂ ಕರೆಯುತ್ತಾರೆ. ಈ ಕ್ಯಾಂಡಿಡಾ ಎಂಬ ಫಂಗಸ್ ಎಲ್ಲ ಆರೋಗ್ಯವಂತ ವ್ಯಕ್ತಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಆದರೆ ದೇಹದ ರಕ್ಷಣ ವ್ಯವಸ್ಥೆ ಕುಸಿದಾಗ ಏಡ್ಸ್ ಮುಂತಾದ ಖಾಯಿಲೆಗಳಲ್ಲಿ ಹೆಚ್‍ಐವಿ ಸೋಂಕು ತಗುಲಿದವರಲ್ಲಿ, ಮಧುಮೇಹ ರೋಗಿಗಳಲ್ಲಿ, ಅತಿಯಾದ ಸ್ಥಿರಾಯ್ಡ್ ಬಳಸಿದಾಗ ಅಥವಾ ಅತಿ ಹೆಚ್ಚು ದಿನಗಳ ಕಾಲ ಆಂಟಿಬಯೋಟಿಕ್ ಬಳಸಿದಾಗ ಈ ರೀತಿಯ ಓರಲ್ ಥ್ರಷ್ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಆಂಟಿ ಫಂಗಲ್ ಔಷಧಿ ಮತ್ತು ಲೋಷನ್ ಬಳಸಿ ಈ ರೋಗವನ್ನು ನಿಯಂತ್ರಿಸಲಾಗುತ್ತದೆ.
  4. ಪದೇ ಪದೇ ಕಾಡುವ ಬಾಯಿ ಹುಣ್ಣು : ಎಚ್.ಐ.ವಿ. ಸೋಂಕು ಇರುವವರಲ್ಲಿ ಬಾಯಿಯಲ್ಲಿ ಪದೇ ಪದೇ ಹುಣ್ಣು ಉಂಟಾಗುತ್ತದೆ. ಕೆನ್ನೆಯ ಒಳಭಾಗ, ತುಟಿಯ ಒಳಭಾಗ, ನಾಲಗೆ, ವಸಡುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹರ್ಪಿಸ್ ಸಿಂಪ್ಲೆಕ್ಸ್ ಎಂಬ ವೈರಾಣುವಿನ ಸೋಂಕಿವಿನಿಂದ ಈ ಬಾಯಿಹುಣ್ಣು ಬರುತ್ತದೆ. ಓವಲ್ ಆಕೃತಿಯಲ್ಲಿ ಅಥವಾ ದುಂಡಗಿನ ಆಕಾರದಲ್ಲಿ ಇರುವ ಈ ಹುಣ್ಣುಗಳ ಮಧ್ಯೆ ಬೆಳ್ಳಗಿರುತ್ತದೆ ಮತ್ತು ಸುತ್ತಲೂ ಕೆಂಪು ಪದರವಿರುತ್ತದೆ. ಬಿಸಿಯಾದ, ಖಾರದ ಆಹಾರ ತೆಗೆದುಕಕೊಂಡಾಗ ವಿಪರೀತ ನೋವು, ಯಾತನೆ, ಉರಿತ, ಅಸಹತೆ ಉಂಟಾಗುತ್ತದೆ. ಸ್ಟಿರಾಯ್ಡ ಔಷಧಿ ಬಳಸಿ ಇದನ್ನು ಗುಣಪಡಿಸಲಾಗುತ್ತದೆ.
  5. ವಸಡಿನ ತೊಂದರೆಗಳು : ಎಚ್.ಐ.ವಿ. ಸೋಂಕು ಇರುವವರಲ್ಲಿ ವಸಡಿನ ಉರಿಯೂತ, ವಸಡಿನಲ್ಲಿ ಕೀವು, ವಸಡಿನಲ್ಲಿ ರಕ್ತಸ್ರಾವ, ಹಲ್ಲು ಅಲುಗಾಡುವುದು, ಬಾಯಿ ವಾಸನೆ ಹೆಚ್ಚು ಕಂಡು ಬರುತ್ತದೆ. ನಿರಂತರವಾಗಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿರುತ್ತದೆ.
  6. ಮೇಲೆ ತಿಳಿಸಿದ ಲಕ್ಷಣಗಳ ಜೊತೆಗೆ ಬಾಯಿ ಒಣಗುವುದು, ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು, ಜೋಲ್ಲುರಸ ಗ್ರಂಥಿಗಳು ಊದಿಕೊಳ್ಳುವುದು, ಹರ್ಪಿಸ್ ಜೋಸ್ಟರ್ ಎಂಬ ವೈರಾಣು ಸೋಂಕು, ಕಪೋಸೀಸ್ ಸಾರ್ಕೊಮಾ ಎಂಬ ರೋಗವೂ ಕಂಡು ಬರುತ್ತದೆ. ಜೊಲ್ಲುರಸದ ಉತ್ಪಾದನೆ ಕಡಿಮೆಯಾಗುವುದರಿಂದ ದಂತಕ್ಷಯಾ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
    ಹೇಗೆ ಹರಡುತ್ತದೆ ?
  7. ಎಚ್.ಐ.ವಿ. ಸೋಂಕು ಇರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ.
  8. ಎಚ್.ಐ.ವಿ. ಸೊಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆರಿಗೆಯ ಸಮಯದಲ್ಲಿ ಮತ್ತು ಎದೆಹಾಲಿನ ಮುಖಾಂತರ ಹರಡುತ್ತದೆ.
  9. ಅಸ್ವಾಭಾವಿಕ ಲೈಂಗಿನ ಕ್ರಿಯೆಗಳಾದ ಬಾಯಿಯಿಂದ ಮತ್ತು ಗುದದ್ವಾರದ ಸೆಕ್ಸ್‍ಗಳಿಂದಲೂ ಹರಡುತ್ತದೆ.
  10. ಎಚ್.ಐ.ವಿ. ಸೋಂಕು ಇರುವ ವ್ಯಕ್ತಿ ಬಳಸಿದ ಸೂಜಿ ಅದೇ ಸಿರಿಂಜ್‍ಗಳನ್ನು ಬೇರೆಯವರಿಗೆ ಬಳಸುವುದರಿಂದ ಹರಡುತ್ತದೆ.
  11. ಮಾದಕ ದ್ರವ್ಯ ವ್ಯಾಸನಿಗಳು ಬಳಸಿದ ಎಚ್.ಐ.ವಿ ಸೊಂಕಿತ ಸಿರಿಂಜ್‍ನ್ನು ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ.
  12. ದೇಹದಲ್ಲಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್.ಐ.ವಿ ಸೋಂಕು ಇರುವವರಿಗೆ ಬಳಸಿದ ಸೂಜಿಗಳನ್ನು ಮಗದೊಮ್ಮೆ ಬಳಸುವುದರಿಂದ ಹರಡುತ್ತದೆ.

ಹೇಗೆ ಹರಡುವುದಿಲ್ಲ ?

  1. ಬೆವರು, ಎಂಜಲು, ಸಿಂಬಳ, ಕಣ್ಣೀರು, ಮಲ, ಮೂತ್ರ ಮುಂತಾದವುಗಳನ್ನು ಮುಟ್ಟುವುದರಿಂದ ಹರಡುವುದಿಲ್ಲ.
  2. ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ ಹರಡುವುದಿಲ್ಲ.
  3. ಸೊಳ್ಳೆಗಳ ಕಡಿತದಿಂದ ಎಚ್.ಐ.ವಿ ಹರುಡುವುದಿಲ್ಲ
  4. ಕೈ ಕುಲುಕುವುದು, ಸೀನುವುದು, ಕೆಮ್ಮುವುದು ಇತ್ಯಾದಿಗಳಿಂದಲೂ ಹರಡುವುದಿಲ್ಲ.

ಏಡ್ಸ್ ರೋಗಕ್ಕೆ ಚಿಕಿತ್ಸೆ ಇಲ್ಲ, ಯಾವುದೇ ಹಳ್ಳಿ ಮದ್ದು, ಆಯುರ್ವೇದ ಮದ್ದು, ಮಂತ್ರ ತಂತ್ರಗಳಿಂದ ಚಿಕಿತ್ಸೆ ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ARTಅಂದರೆ ಆಂಟಿ ರಿಟ್ರೋವೈರಲ್‍ಥೆರಪಿ ನೀಡಿ ವೈರಾಣುವಿನ ಆರ್ಭಟವನ್ನು ತಗ್ಗಿಸಲಾಗುತ್ತದೆ. ಆ ಮೂಲಕ CD-4 ಎಂಬ ಬಿಳಿರಕ್ತಕಣಗಳ ಸಂಖ್ಯೆ ವೃದ್ಧಿಸುವಂತೆ ಮಾಡಲಾಗುತ್ತದೆ. ಉತ್ತಮ ಪೋಷಕಾಂಶಯುಕ್ತ ಆಹಾರ, ನಿರಂತರವಾದ ಔಷಧಿ ಮತ್ತು ನುರಿತ ವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿ ರೋಗಿಗೆ ಸಂಪೂರ್ಣ ಸಹಕಾರ, ಧೈರ್ಯ ಮತ್ತು ಸಾಂತ್ವನ ನೀಡತಕ್ಕದ್ದು ಹಾಗೆ ಮಾಡಿದಲ್ಲಿ ಮಾತ್ರ ವಿಶ್ವ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬರಬಹುದು.

ಕೊನೆ ಮಾತು

ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಏಡ್ಸ್ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳೂ ಹೋಗಲಾಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಎಂದು ಆಚರಿಸಲಾಗುತ್ತಿದೆ. 1988ರಿಂದ ಈ ಆಚರಣೆ ಜಾರಿಗೆ ಬಂದಿತು. ಬೀದಿ ನಾಟಕಗಳು, ಜಾಗೃತಿ ಕಾಥಾಗಳು, ವಿಚಾರ ಸಂಕೀಕರಣಗಳು, ಸಂವಾದಗಳು, ಏಡ್ಸ್ ತಿಳುವಳಿಕಾ ಶಿಬಿರಗಳು ಮುಂತಾದ ಕಾರ್ಯಕ್ರಮ ನಡೆಸಿ ಜನರಲ್ಲಿ ಏಡ್ಸ್ ಬಗ್ಗೆ ಇರುವ ಅಪನಂಬಿಕೆಗಳನ್ನು ತೊಡೆದು ಹಾಕಿ, ಎಚ್.ಐ.ವಿ. ವೈರಾಣುವಿನಿಂದ ಸೋಂಕಿತರಾದವರೂ ಇತರರಂತೆ ಸಾಮಾನ್ಯ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿ ಹೇಳುವ ಕೆಲಸವನ್ನು ಈ ದಿನ ಹೆಚ್ಚು ಮುತುವರ್ಜಿಯಿಂದ ನಡೆಸಲಾಗುತ್ತದೆ. ಅದೇ ರೀತಿ ಏಡ್ಸ್ ರೋಗಕ್ಕೂ ಎಚ್.ಐ.ವಿ ಸೋಂಕಿನಿಂದ ಬಳಲಿರುವವರಿಗೆ ಇರುವ ವ್ಯತ್ಯಾಸವನ್ನು ಜನರಿಗೆ ತಿಳಿ ಹೇಳುವ ಕಾರ್ಯವನ್ನು ಸದ್ದಿಲ್ಲದೇ ಮಾಡಲಾಗುತ್ತದೆ. ಮಾರಾಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಒಳಗೆ ಬರುವ ಏಡ್ಸ್ ರೋಗ ಮನುಕುಲವನ್ನು ಮಾಹಾ ಮಾರಿಯಂತೆ ಕಾಡುತ್ತದೆ. 2015ರ ಅಂಕಿ ಅಂಶಗಳ ಪ್ರಕಾರ 36 ಮಿಲಿಯನ್ ಮಂದಿ ಎಚ್.ಐ.ವಿ. ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು 36 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಚಿಕಿತ್ಸೆ ಎಲ್ಲದ ರೋಗವಾಗಿದ್ದರೂ ಸಾಕಷ್ಟು ಮುಂಜಾಗರೂಕತೆ ವಹಿಸಿ ರೋಗವನ್ನು ನಿಯಂತ್ರಿಸಬಹುದು ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಕಟ್ಟು ನಿಟ್ಟಿನ ಆಹಾರ ಪದ್ಧತಿ, ನಿರಂತರ ಆಪ್ತಸಮಾಲೋಚನೆ, ಜೀವನ ಶೈಲಿ ಮಾರ್ಪಾಡು ಮತ್ತು ನಿರಂತರ ಔಷಧಿಗಳಿಂದ ಎಚ್.ಐ.ವಿ. ಸೋಂಕಿತರೂ ಸಹಜ ಜೀವನ ನಡೆಸಬಹುದು ಎಂದು ಸಮಾಜಕ್ಕೆ ತಿಳಿ ಹೇಳಬೇಕಾದ ಅನಿವಾರ್ಯತೆ ಇದೆ. ಸಮಾಜ ಇಂತಹ ರೋಗಿಗಳನ್ನು ನೋಡುವ ದೃಷ್ಟಿ ಬದಲಾಗಬೇಕು ಹಾಗಾದಲ್ಲಿ ಮಾತ್ರ ಏಡ್ಸ್ ದಿನಾಚರಣೆ ಹೆಚ್ಚಿನ ಮೌಲ್ಯ ಬಂದಿತು.

ಡಾ| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral And Maxillofacial Surgeon
Mangalore
9845135787
[email protected]
[email protected]

Related Posts

Leave a Reply

Your email address will not be published.