ತರಲೆ ತರಳೆ ಪೂನಮಳ ಅರ್ಬುದ ಲೋಕ
ಫೆಬ್ರವರಿ 4 ಅಂತರರಾಷ್ಟ್ರೀಯ ಕ್ಯಾನ್ಸರ್ ದಿನ. ಕ್ಯಾನ್ಸರ್ ಬರಲಿ ಎನ್ನುವ ದಿನ ಅಲ್ಲ, ಕ್ಯಾನ್ಸರ್ ತಡೆಯೋಣ ಎನ್ನುವ ದಿನ ಅದಕ್ಕೆ ಎರಡು ದಿನ ಮೊದಲು ತರಲೆ ತರಳೆ ಪೂಪಾಂಡೆಯ ಸಾವು ಸುದ್ದಿ, ಮರುದಿನವೇ ಸಾವು ಗೆದ್ದ ಪೂನಂ ಪಾಂಡೆ ಸುದ್ದಿ. ಪೆÇೀಲೀಸರು ಆತ್ಮಹತ್ಯೆ ಪ್ರಯತ್ನ ಮೊಕದ್ದಮೆ ಹೂಡಬಹುದು. ಆದರೆ ಕ್ಯಾನ್ಸರ್ ಪ್ರಜ್ಞೆ ಬಲಿಸಲು ಪ್ರಜ್ಞಾಪೂರ್ವಕವಾಗಿ ಸಾವು ಸುದ್ದಿ ಹರಡಿದ್ದಾಗಿ ಪೂನಂ ಉವಾಚ. ಕ್ಯಾನ್ಸರ್ ದಿನದ ಹೊತ್ತಿನಲ್ಲಿ ತರಲೆ ತರಳೆಯನ್ನು ಕ್ಷಮಿಸಿ ಬಿಡಬಹುದು. ಆದರೆ ಕ್ಯಾನ್ಸರ್ ದಾರಿ ತಪ್ಪಿದ ಯಾರನ್ನು ಕೂಡ ಕ್ಷಮಿಸುವುದಿಲ್ಲ. ನಾವು ಕೂಡ ಅದನ್ನು ಕ್ಷಮಿಸದೆ ಅದರ ಸರ್ವ ನಾಶಕ್ಕೆ ಕ್ಷಮಿಸಬೇಕಾಗಿದೆ. ವಿಶ್ವ ಕ್ಯಾನ್ಸರ್ ದಿನದಂದೇ ನಮಿಬೀಯಾ ಅಧ್ಯಕ್ಷ ಹಾಗ್ ಜಂಗೋಬ್ ಕ್ಯಾನ್ಸರ್‍ಗೆ ಬಲಿಂ iÀiÁಗಿದ್ದಾರೆ.
ಅರುವತ್ತು ಎಪ್ಪತ್ತರ ದಶಕದಲ್ಲಿ ಕ್ಯಾನ್ಸರ್ ಬಂದರೆ ಚಿಕಿತ್ಸೆ ಇಲ್ಲ, ಸಾವೇ ನಿಮಗೆ ಉಡುಗೊರೆ ಎನ್ನುತ್ತಿದ್ದರು. ಎಲ್ಲ ಭಾಷೆಗಳ ಚಲನಚಿತ್ರಗಳಲ್ಲಿಯೂ ಕ್ಯಾನ್ಸರ್‍ನಿಂದ ಸಾಯುವ ಕತೆಯ ಸಿನಿಮಾಗಳು ಬಂದಿವೆ. ಈಗ ಸ್ಥಿತಿ ಹಾಗಿಲ್ಲ. ಕ್ಯಾನ್ಸರ್ ಬಂದ ಮೊದಲ ಹಂತದಲ್ಲಿಯೇ ಕಂಡುಕೊಂಡರೆ ಅದನ್ನು ಗುಣ ಪಡಿಸಬಹುದು. ಹಾಗಾಗಿ ಈಗೆಲ್ಲ ಕ್ಯಾನ್ಸರ್‍ನಿಂದ ಸಾಯುವ ಕತೆಯ ಚಿತ್ರ ಬರುತ್ತಿಲ್ಲ ಎನ್ನಬಹುದು. ಹಾಗಾಗಿ ತರಲೆ ತರಳೆಯ ಪ್ರಚಾರ ತಂತ್ರದ ಅಯ್ಯೋ ಸತ್ತೆ, ಸತ್ತೇ ಇಲ್ಲ ಪೂಪಾಂಡೆ ನಾಟಕವು ಹೊಸ ಚಿತ್ರ ಕತೆ ಆದೀತು. ಕಾಮಿಡಿ ಕಿಲಾಡಿಗಳು ಕೂಡ ಇದನ್ನು ಹೆಕ್ಕಿಕೊಂಡು ವಿನೋದದ ಅಂಗಿ ಹೊಲಿಸಿಕೊಳ್ಳಬಹುದು. ಸಾವು ನಿಶ್ಚಿತ, ಮರಣ ಕಾರಣ ಮಾತ್ರ ವಿಭಿನ್ನ, ಸಾಯುವ ರೀತಿಯೂ ವೈವಿಧ್ಯಮಯ. ನಿರ್ದೇಶಕರಿಗೆ ನಟ ನಟಿಯರನ್ನು ಬೇರೆ ಬೇರೆ ರೀತಿಯಲ್ಲಿ ಸಾಯಿಸುವ ಹಕ್ಕು ಇದೆ.
ಅವರು ನಿಜವಾಗಿ ಸತ್ತಿರುವುದಿಲ್ಲ. ಆದರೆ ಕ್ಯಾನ್ಸರ್ ಕಾಯಿಲೆಯಿಂದ ಸತ್ತರೆ ಅವರು ನಿಜವಾಗಿಯೂ ಬದುಕಿರುವುದಿಲ್ಲ. ಏಡಿಗಂತಿ, ಗಂತಿ, ಅರ್ಬುದ ಇತ್ಯಾದಿ ಹೆಸರಿನ ಕ್ಯಾನ್ಸರ್ ಎಂದರೆ ಏನು? ನಮ್ಮ ಶರೀರವು ಕಣ ಕಣ ಬೆರೆತು ಬೆಸೆದುದಾಗಿದೆ. ಅದಕ್ಕೆಲ್ಲ ಬೆಳೆಯಲು ಸಾಯಲು ಕ್ರಮ ನಿಯಮಗಳು ಇವೆ. ಈ ಜೀವ ಕಣ ಎನ್ನುವ ದೇಹ ರಚನೆಯ ಇಟ್ಟಿಗೆ ಇಲ್ಲವೆ ಮಕ್ಕಳು ದಾರಿ ತಪ್ಪಿ ಅಡ್ಡಾದಿಡ್ಡಿ ಬೆಳೆದರೆ ಅದು ಗಂತಿ ರೋಗ. ಅನಿಯಂತ್ರಿತ ರೀತಿಯಲ್ಲಿ ಬೆಳೆಯುವ ಜೀವಕಣಗಳು ಆ ಪ್ರದೇಶದ ಎಲ್ಲ ಆರೋಗ್ಯವಂತ ಕಣಗಳಿಗೆ ಯಮ ಸ್ವರೂಪಿ ಆಗಿರುತ್ತದೆ. ಅಲ್ಲದೆ ಈ ದುರ್ಮಾಂಸ ಬೆಳೆಯುತ್ತಿರುವ ಭಾಗದ ಇತರ ಅಂಗಗಳು ಕೆಲಸ ಮಾಡದಂತೆ ತಡೆಯುತ್ತದೆ. ಅದು ಕ್ಯಾನ್ಸರ್ ಪೀಡಿತರನ್ನು ಸಾವಿನ ಮನೆಯತ್ತ ಕೈಹಿಡಿದು ನಡೆಸುತ್ತವೆ.
ಸಿಹಿಮೂತ್ರ ರೋಗ ಮತ್ತು ಅರ್ಬುದದ ಪ್ರಪಂಚ ರಾಜಧಾನಿ ಭಾರತ ಎಂದೂ ಹೇಳಲಾಗಿದೆ. ಶ್ವಾಸಕೋಶ, ಪ್ರಾಸ್ಟೇಟ್, ಕರುಳು, ಬಾಯಿ ಕ್ಯಾನ್ಸರ್‍ಗಳು ಗಂಡಸರಲ್ಲಿ ಬರುತ್ತವೆ. ಪ್ರಾಸ್ಟೇಟ್ ಹೊರತು ಉಳಿದವು ಹೆಂಗಸರಿಗೂ ಬರುತ್ತವೆ. ಅಲ್ಲದೆ ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಗರ್ಭಕಂಠ, ಅಂಡಾಶಯ ಕ್ಯಾನ್ಸರ್‍ಗಳೂ ಬರುತ್ತವೆ. ಸ್ತನ ಕ್ಯಾನ್ಸರ್ ಅಪರೂಪವಾಗಿ ಗಂಡಸರಲ್ಲೂ ಬರಬಹುದು. ಈ ಕ್ಯಾನ್ಸರ್‍ಗಳು ಅನುವಂಶೀಯ ಆದಾಗ ಮಕ್ಕಳ ಅರ್ಬುದವಾಗಿ ಕಾಡುತ್ತದೆ. ಅತಿ ಮಸಾಲೆ, ಅತಿ ಉಪ್ಪು, ಅತಿ ಕೊಬ್ಬು, ಸಂಸ್ಕರಿಸಿದ ಪ್ಯಾಕೆಟ್ ಆಹಾರ ಏಡಿಗಂತಿಗೆ ದಾರಿ ಎನ್ನುತ್ತಾರೆ. ಯಾವುದೇ ಆಹಾರ ಮಿತಿ ಒಳಗೆ ಇದ್ದಾಗ ದೇಹಕ್ಕೆ ಹಾನಿ ಉಂಟು ಮಾಡವು ಎನಿಸುತ್ತದೆ.
ದೊಡ್ಡ ಕರುಳಿನ ಆರಂಭದಲ್ಲಿ ಯಾವುದೇ ರೀತಿಯಲ್ಲಿ ದೇಹಕ್ಕೆ ಕೆಲಸಕ್ಕೆ ಬಾರದ ಅಪೆಂಡಿಕ್ಸ್ ಇದೆ. ಇದು ಅಪೆಂಡಿಸೈಟಿಸ್ ಅಲ್ಲದೆ ಕರುಳು ಕ್ಯಾನ್ಸರ್ ಕಾರಕವೂ ಆಗಬಹುದು. ಕ್ಯಾನ್ಸರ್ 60% ತಂಬಾಕು ಸೇವನೆಯಿಂದಲೂ, 20% ಕೆಟ್ಟ ಆಹಾರ ಸೇವನೆಯ ಮೂಲಕ, 20% ಅನುವಂಶಿಕವಾಗಿ ಬರುತ್ತದೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಇರುವ ಗಂತಿ ರೋಗವನ್ನು ಇಂದು ಗುಣ ಪಡಿಸಬಹುದು. ಮೂರು ನಾಲ್ಕನೆಯ ಹಂತದಲ್ಲಿ ಗುಣ ಸಾಧ್ಯವಿಲ್ಲ ಎಂದೇ ಹೇಳಬಹುದು. ರೇಡಿಯೇಶನ್ ತೆರಪಿ, ಕೀಮೋತೆರಪಿ ಮೂಲಕ ಆರಂಭದಲ್ಲಿ ಚಿಕಿತ್ಸೆ ಫಲಕಾರಿ. ರೋಗ ಬಲಿತ ಮೇಲೆ ಶಸ್ತ್ರಚಿಕಿತ್ಸೆ ಆಗಬೇಕು. ಶಸ್ತ್ರಚಿಕಿತ್ಸೆ ಮೂಲಕ ದುರ್ಮಾಂಸದಂತೆ ಬೆಳೆದ ಭಾಗವನ್ನು ಕತ್ತರಿಸಿ ತೆಗೆದರೂ ಅತಿ ಕಣ ವಿಭಜನೆ ನಿಲ್ಲದೆ ಕ್ಯಾನ್ಸರ್ ಸಾಯು ಮಗನೆ ಎಂಬ ತನ್ನ ಕೂಗನ್ನು ಮುಂದುವರಿಸಿರುತ್ತದೆ.
ಮೊದಲ ಹಂತದಲ್ಲಾದರೆ 95% ಗುಣ ಸಾಧ್ಯ, ಮೂರನೆಯ ಹಂತದ ಬಳಿಕ ಯಮ ದೂತರು ಯಾವ ತಜ್ಞ ವೈದ್ಯರ ಮಾತನ್ನೂ ಕೇಳುವಂತೆ ಕಾಣುವುದಿಲ್ಲ. ಜಗತ್ತಿನಲ್ಲಿ ಆಗುತ್ತಿರುವ ಒಟ್ಟು ರೋಗ ಸಾವುಗಳಲ್ಲಿ 13%ದಷ್ಟು ಗಂತಿ ರೋಗದಿಂದ ಆಗುವುದಾಗಿದೆ. ಮಹಿಳೆಯರ ಕ್ಯಾನ್ಸರ್‍ಗಳಿಗೆ ಈಗ ತಡೆ ಲಸಿಕೆಗಳು ಬಂದಿವೆ. ಒಂಬತ್ತರಿಂದ ಹದಿನಾಲ್ಕು ವರುಷದ ನಡುವಣ ಹುಡುಗಿಯರಿಗೆ ಈ ಲಸಿಕೆ ನೀಡುವುದರಿಂದ ಬಸಿರುಚೀಲ ಬಾಯಿ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಬರುವುದಿಲ್ಲ ಎನ್ನಲಾಗಿದೆ. ಈ ಲಸಿಕೆಯು ಮುಂದಿನ ದಿನಗಳಲ್ಲಿ ವ್ಯಾಪಕ ಯಶಸ್ಸು ಕಂಡು ಹೆಣ್ಣು ಮಕ್ಕಳ ಕ್ಯಾನ್ಸರ್ ಹೊರೆಯನ್ನು 50% ಇಳಿಸುತ್ತವೆ ಎಂದು ನಂಬಲಾಗಿದೆ. ಲಸಿಕೆ ಕಾರಣದಿಂದ ದೊಡ್ಡಮ್ಮ ಸಿಡುಬು, ಅಂಗವೈಕಲ್ಯಕಾರಕ ಸಾಂಕ್ರಾಮಿಕ ರೋಗಗಳು ಇಂದು ಇಲ್ಲವಾಗಿವೆ.
ಭಾರತದಲ್ಲಿ ಪ್ರತಿ ವರುಷ 13.92 ಲಕ್ಷ ಜನರು ಕ್ಯಾನ್ಸರಿಗೆ ತುತ್ತಾಗಿ ಅವರಲ್ಲಿ 8.5 ಲಕ್ಷ ಜನರು ಸಂಬಂಧಿಕರ ಸಂಬಂಧ ಕಡಿದುಕೊಂಡು ಹೋಗುತ್ತಾರೆ. ಕರ್ನಾಟಕದಲ್ಲಿ ಪ್ರತಿ ವರುಷ 87,500 ಜನರು ಕ್ಯಾನ್ಸರ್ ಬಾಧೆಗೀಡಾಗಿ ಅವರಲ್ಲಿ 25,700 ಜನರು ಇಲ್ಲಿನ ಮನೆ ಬಿಟ್ಟು ಮೇಲೆಲ್ಲೋ ಇದೆ ಎನ್ನಲಾದ ಮನೆಗೆ ಹೊರಟು ಹೋಗುತ್ತಾರೆ. ಮಂದಿ ಪ್ರತಿ ವರುಷ ಅರ್ಬುದ ಬಂದು ಅವರಲ್ಲಿ 3,600 ಜನರು ಆಯುಷ್ಯ ವಂಚಿತರು ಆಗುತ್ತಿದ್ದಾರೆ. ನಮ್ಮ ಜೀವಕೋಶಗಳ ಉತ್ಪಾದನಾ ಪ್ರಯೋಗಶಾಲೆ ಬೆನ್ನು ಮೂಳೆಯಲ್ಲಿ ಇದೆ. ತೀವ್ರ ಕ್ಯಾನ್ಸರ್‍ನಲ್ಲಿ ಅಸ್ತಿಮಜ್ಜೆಯನ್ನು ಬದಲಿಸುತ್ತಾರೆ. ಆಧುನಿಕ ಮದ್ಪದ್ಧತಿ ಬೆಳವಣಿಗೆಯಲ್ಲಿ ಎಲ್ಲವೂ ಸಾಧ್ಯ.
ಮೂತ್ರ ಪಿಂಡ ಎರಡು ಇವೆ, ಪಿತ್ತಕೋಶ ವಿಶಾಲವಾಗಿದೆ, ಶ್ವಾಸಕೋಶ ಹರಡಿಕೊಂಡಿದೆ. ಇವುಗಳು ಕ್ಯಾನ್ಸರ್ ಬಾಧೆಗೆ ಒಳಗಾದರೆ ಒಂದು ಭಾಗವನ್ನು ತೆಗೆದರೂ ಮನುಷ್ಯ ಬದುಕಿಕೊಳ್ಳುತ್ತಾನೆ. ಸೆರ್ವಿಕ್ ಎನ್ನುವುದು ಯೋನಿ ನಾಳವು ಬಸಿರು ಚೀಲಕ್ಕೆ ಸಂಪರ್ಕ ಪಡೆಯುವ ಭಾಗ. ಬಸಿರು ಚೀಲದ ಬಾಯಿಯ ಆರೋಗ್ಯ ಕೆಟ್ಟಲ್ಲಿ ಕ್ಯಾನ್ಸರ್ ಕಣಗಳು ಆಯುಷ್ಯಕ್ಕೇ ದಿಡ್ಡಿ ಬಾಗಿಲು ಹಾಕಿಬಿಡುತ್ತವೆ. ಸಂತಾನ ಭಾಗ್ಯ ಬಾಧಿಸಲ್ಪಡುತ್ತದೆ. ಆಹಾರ ಭಾಗ್ಯ ಸಹ ಈಗ ಸರಕಾರದಿಂದ ಲಭ್ಯವಿದೆ. ಕೆಲವು ಲಘು ವ್ಯಾಯಾಮಗಳು ಕೂಡ ದೇಹದ ಆರೋಗ್ಯ ಕಾಪಾಡಲು ಸಹಾಯಕ ಆಗಿರುತ್ತವೆ. ದೇಹದ ಮೇಲೆ ನಿಯಂತ್ರಣ ಇದ್ದರೆ ಅನಿಯಂತ್ರಿತ ಕಣಗಳ ಬೆಳವಣಿಗೆ ತಡೆಯಬಹುದು. ಆ ಮೂಲಕ ಮುಂದೊಂದು ದಿನ ಕ್ಯಾನ್ಸರನ್ನೇ ಮಸಣದಲ್ಲಿ ಗೋರಿ ಮಾಡಬಹುದು.