ವಿಶ್ವ ಲೂಪಸ್ (ಚರ್ಮ ಕ್ಷಯ) ದಿನ ಮೇ 10

ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ ಎಂಬ ಹೆಸರಿನಿಂದ ಕರೆಯಲ್ಪಡುವ ‘ಲೂಪಸ್ ರೋಗ’ ಒಂದು ರೀತಿಯಲ್ಲಿ ವಿಶಿಷ್ಟ ರೋಗವಾಗಿದ್ದು ಹಲವಾರು ಅಂಗಾಂಗಗಳನ್ನು ಸದ್ದಿಲ್ಲದೆ ಕಾಡುತ್ತದೆ. ಇದೊಂದು ಸಾಂಕ್ರಾಮಿಕವಲ್ಲದ, ದೀರ್ಘಕಾಲಿಕ ಕಾಯಿಲೆಯಾಗಿದ್ದು, ಚರ್ಮ, ಕೀಲುಗಳು, ಮೂತ್ರಪಿಂಡಗಳು, ಹೃದಯ, ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಮೆದುಳು ಸೇರಿದಂತೆ ದೇಹದ ಹಲವಾರು ಭಾಗಗಳ ಮೇಲೆ ದಾಳಿ ಮಾಡುತ್ತದೆ. ಇದೊಂದು ಅಟೋ ಇಮ್ಯೂನ್ ಅಂದರೆ ಸ್ವಯಂ ನಿರೋಧಕ ಕಾಯಿಲೆಯಾಗಿರುತ್ತದೆ. ಈ ರೋಗಿಗಳಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ನಮ್ಮ ದೇಹದ ರಕ್ಷಣ ವ್ಯವಸ್ಥೆ ಅತ್ಯಂತ ಉಗ್ರವಾಗಿ ಕೆರಳಿಕೊಂಡ ದೇಹದ ಜೀವಕೋಶಗಳ ಮೇಲೆ ದಾಳಿ ಮಾಡಿ ಹಾನಿ ಉಂಟು ಮಾಡುತ್ತದೆ. ಈ ಲೂಪಸ್ ರೋಗದಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಅತಿಯಾಗಿ ಕ್ರಿಯಾಶೀಲವಾಗಿರುತ್ತದೆ ಮತ್ತು ಎಬ್ ಇಲಿ ರೋಗಗಳಲ್ಲಿ ದೇಹದ ರಕ್ಷಣಾ ವ್ಯವಸ್ಥೆಯ ಮೇಲೆ ವೈರಾಣು ದಾಳಿ ಮಾಡಿ ಅದರ ಕ್ರಿಯಾಶೀಲತೆಯನ್ನು ಕುಂದಿಸುತ್ತದೆ. ಆದರೆ ಇಲ್ಲಿ ನಮ್ಮ ದೇಹದ (ಆಂಟಿಬಾಡಿಗಳು) ಪ್ರತಿಕಾಯಗಳು ದೇಹದ ಜೀವಕೋಶಗಳ ಮೇಲೆಯೇ ದಾಳಿ ಮಾಡಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಕೆರಳಿಸಿ, ಹಾಳುಗೆಡವುತ್ತದೆ. ಸಾಮಾನ್ಯವಾಗಿ ನಮ್ಮ ದೇಹಕ್ಕೆ ವೈರಾಣುಗಳು ಅಥವಾ ಬ್ಯಾಕ್ಟೀರಿಯಗಳು ದಾಳಿ ಮಾಡಿದರೂ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಅವುಗಳ ವಿರುದ್ಧ ಹೋರಾಡಲು ಆಂಟಿ ಬಾಡಿಗಳನ್ನು ತಯಾರು ಮಾಡಿ ದೇಹವನ್ನು ರಕ್ಷಿಸುತ್ತದೆ. ಆದರೆ ಇಲ್ಲಿ ದೇಹದ ಅಂಗಾಂಶಗಳ ವಿರುದ್ಧವೇ ಆಂಟಿ ಬಾಡಿಗಳು ತಯಾರಾಗಿ ದೇಹದ ಅಂಗಾಂಶಗಳನ್ನು ಹಾಳು ಮಾಡಿ, ರೋಗದ ಲಕ್ಷಣಗಳನ್ನು ಪ್ರಕಟಪಡಿಸುತ್ತದೆ.

ಪ್ರತಿ ವರ್ಷ ಮೇ ತಿಂಗಳ 10 ರಂದು ವಿಶ್ವ ಲೂಪಸ್ ದಿನ ಎಂದು ಆಚರಿಸಿ, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಮತ್ತು ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲಾಗುತ್ತದೆ. ಇದು ಖಂಡಿತವಾಗಿಯೂ ಸಾಂಕ್ರಾಮಿಕ ರೋಗ ಅಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಇಂತಹ ರೋಗಿಗಳನ್ನು ಅಸ್ಪಶ್ಯರಂತೆ ಕಾಣುತ್ತಿರುವುದು ಬಹಳ ಛೇದನೀಯ ವಿಚಾರ. ನಮ್ಮ ಭಾರತ ದೇಶದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ಸರಿ ಸುಮಾರು 5 ಮಂದಿ ಈ ಲೂಪಸ್ ರೋಗದಿಂದ ಬಳಲುತ್ತಿದ್ದರು. ಈ ಲೂಪಸ್ ರೋಗವನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಬಹಳ ಸಂಕೀರ್ಣವಾದ ಸಮಸ್ಯೆ ಆಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ರೋಗವನ್ನು ಮುಂದುವರಿದ ಹಂತದಲ್ಲಿ ರೋಗ ನಿರ್ಣಯ ಮಾಡಲಾಗುತ್ತದೆ ಮತ್ತು ರೋಗದ ಚಿಕಿತ್ಸೆ ಬಹಳ ನಿಧಾನ ಮತ್ತು ಶ್ರಮದಾಯಕವಾಗಿರುತ್ತದೆ. ಈ ಲೂಪಸ್ ರೋಗ ಪುರುಷರಿಗಿಂತ ಮಹಿಳೆಯರಲ್ಲಿ ಐದು ಪಟ್ಟು ಹೆಚ್ಚು ಸಾಮಾನ್ಯವಾಗಿರುತ್ತದೆ. ಸ್ಯಾಮಾನ್ಯವಾಗಿ 15 ರಿಂದ 45 ವರ್ಷದ ಮಹಿಳೆಯರನ್ನು ಈ ರೋಗ ಹೆಚ್ಚು ಕಾಡುತ್ತದೆ. ಕಪ್ಪು ವರ್ಣಿಯರು ಹೆಚ್ಚಾಗಿ ಈ ರೋಗಕ್ಕೆ ತುತ್ತಾಗುತ್ತಾರೆ. ಲೂಪಸ್ ರೋಗ ಕುಟುಂಬದ ಇತಿಹಾಸ ಹೊಂದಿದ್ದು ತಂದೆಯಿಂದ ಮಕ್ಕಳಿಗೆ ಬಳುವಳಿಯಾಗಿ ಬರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಕೆಲವೊಂದು ಔಷಧಿಗಳ ಅಡ್ಡ ಪರಿಣಾಮವಾಗಿ ಲೂಪಸ್ ರೋಗ ಬರುತ್ತದೆ. ಕೆಲವೊಂದು ನಿರ್ದಿಷ್ಟ ಔಷಧಿಗಳು ವ್ಯಕ್ತಿಯ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ ಲೂಪಸ್ ರೋಗ ಬರುವಂತೆ ಮಾಡುವ ಸಾಧ್ಯತೆ ಇರುತ್ತದೆ
.
ಲೂಪಸ್ ರೋಗಕ್ಕೆ ಕಾರಣಗಳು ಏನು?

 1. ಜೆನೆಟಿಕ್ಸ್: ಲೂಪಸ್ ರೋಗಕ್ಕೆ ಕುಟುಂಬ ಚರಿತ್ರೆ ಇತಿಹಾಸವನ್ನು ಹೊಂದಿದ್ದು, ಹೆತ್ತವರಿಂದ ಮಕ್ಕಳಿಗೆ ಬರುವ ಸಾಧ್ಯತೆ ಇರುತ್ತದೆ. ಕಪ್ಪು ವರ್ಣೀಯರಲ್ಲಿ ಹೆಚ್ಚು ಕಂಡುಬರುತ್ತದೆ.
 2. ಸೋಂಕುಗಳು: ಕೆಲವೊಂದು ಬ್ಯಾಕ್ಟೀರಿಯ ಅಥವಾ ವೈರಾಣು ಸೋಂಕುಗಳ ರಕ್ಷಣಾ ವ್ಯವಸ್ಥೆಯನ್ನು ಕೆರಳಿಸಿ ಹಾಳುಗೆಡವಿ ಲೂಪಸ್ ರೋಗಕ್ಕೆ ಕಾರಣವಾಗಬಹುದು.
 3. ಸೂರ್ಯನ ಬೆಳಕು: ಅತಿಯಾಗಿ ಸೂರ್ಯನ ಪ್ರಖರವಾದ ಬೆಳಕಿಗೆ ಒಡ್ಡಿಕೊಂಡು ಚರ್ಮದಲ್ಲಿ ಪ್ರತಿ ರಕ್ಷಣಾ ವ್ಯವಸ್ಥೆ ಕೆರಳಿ ಲೂಪಸ್ ಉಂಟಾಗುವ ಸಾಧ್ಯತೆ ಇರುತ್ತದೆ.
 4. ರಸದೂತಗಳ ಪ್ರಭಾವ: ಈಸ್ಟೋಜಿನ್ ಎಂಬ ರಸದೂತ ಲೂಪಸ್ ರೋಗಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಈ ರಸದೂತ ಇರುತ್ತದೆ. ಆದರೆ ಮಹಿಳೆಯರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಆದರೆ ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಮುಟ್ಟಿನ ಸಮಯದಲ್ಲಿ ಈ ರಸದೂತ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತದೆ ಮತ್ತು ಮಹಿಳೆಯರಲ್ಲಿ ಲೂಪಸ್ ಲಕ್ಷಣಗಳು ಕಾಣಿಸಬಹುದು.
 5. ಔಷಧಿಗಳು: ಕೆಲವೊಂದು ಅಪಸ್ಮಾರ ನಿಯಂತ್ರಕ ಔಷಧಿಗಳು ಮತ್ತು ಆಂಟಿ ಬಯೋಟಿಕ್ ಔಷಧಿಗಳು ಲೂಪಸ್ ಯೋಗಕ್ಕೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ. ಈ ಔಷಧಿಗಳನ್ನು ಬದಲಿಸಿದ ಬಳಿಕ ಅಥವಾ ನಿಲ್ಲಿಸಿದ ಬಳಿಕ ರೋಗದ ಲಕ್ಷಣಗಳು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ.

ರೋಗದ ಲಕ್ಷಣಗಳು ಏನು?

 1. ಕೀಲು ನೋವು, ಬಿಗಿತ, ಉರಿಯೂತ, ನೋವು ಮತ್ತು ಅಸಹನೆ
 2. ಅತಿಯಾದ ಸುಸ್ತು ಆಯಾಸ ಮತ್ತು ಜ್ವರ ಬಂದಂತೆ ಅನಿಸುತ್ತದೆ.
 3. ಮುಖದ ಮೇಲೆ ಚಿಟ್ಟೆಯ ಆಕಾರದ ಮಚ್ಚೆಗಳು ಕಂಡು ಬರುತ್ತದೆ. ಚರ್ಮದ ಕಾಂತಿ ಕಳೆದು ಹೋಗಿ ವಿಕಾರವಾಗುತ್ತದೆ.
 4. ಸನ್ ಬರ್ನ್ ಅಂದರೆ ಸೂರ್ಯನ ಶಾಖಕ್ಕೆ ಚರ್ಮ ಕೆಂಪಾಗಾಗಿ ಊದಿಕೊಳ್ಳುತ್ತದೆ.
 5. ತಲೆ ನೋವು, ಗೊಂದಲ, ಮರೆವು, ಒಣ ಕಣ್ಣುಗಳು, ಎದೆನೋವು ಉಸಿರಾಟದ ತೊಂದರೆ ಕಾಡಬಹುದು.
 6. ಶೀತಕ್ಕೆ ಒಡ್ಡ್ಟಿಕೊಂಡು ಮತ್ತು ಒತ್ತಡದ ಸನ್ನಿವೇಶಗಳು, ಬೆರಳುಗಳು, ಕಾಲ್ಬೆರಳುಗಳು ಬಿಳಿಚಿಕೊಳ್ಳಬಹುದು ಮತ್ತು ನೀಲಬಣ್ಣಕ್ಕೆ ತಿರುಗುತ್ತದೆ.

ಪತ್ತೆ ಹಚ್ಚುವುದು ಹೇಗೆ?

ಈ ರೋಗ ಪತ್ತೆ ಹಚ್ಚುವುದು ಬಹಳ ಸಂಕೀರ್ಣವಾಗಿದೆ. ಸಾಮಾನ್ಯವಾಗಿ ರಕ್ತ ಪರೀಕ್ಷೆ, ಮೂತ್ರ ಪಿಂಡದ ಮೌಲ್ಯಮಾಪನ ಪರೀಕ್ಷೆ, ಯಕೃತ್ ಕಾರ್ಯಕ್ಷಮತೆ ಪರೀಕ್ಷೆ, ಮೂತ್ರದ ಪರೀಕ್ಷೆ, ಎದೆಗೂಡಿನ ಕ್ಷ-ಕಿರಣ ಪರೀಕ್ಷೆ, ಹೃದಯದ ಇಸಿಜಿ ಮತ್ತು ಯಕೋ ಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಲಾಗುತ್ತದೆ. ಅಗತ್ಯವಿದ್ದ ಚರ್ಮದ ಬಯಾಪ್ಸಿ ಪರೀಕ್ಷೆ ಮಾಡಲಾಗುತ್ತದೆ. ಇದರ ಜೊತೆಗೆ ಆಂಟಿನೂಕ್ಲಿಯರ್ ಆಂಟಿಬಾಡಿ ಎಂಬ ಪರೀಕ್ಷೆ ಕೂಡಾ ಮಾಡಲಾಗುತ್ತದೆ. ಕೊನೆಗೆ ರೋಗಿಯ ವಯಸ್ಸು, ಲಿಂಗ, ರೋಗದ ಲಕ್ಷಣಗಳು, ಕುಟುಂಬ ಚರಿತ್ರೆ, ರೋಗದ ತೀವ್ರತೆ ಎಲ್ಲವನ್ನು ಈ ಪರೀಕ್ಷೆಗಳ ಫಲಿತಾಂಶಗಳ ಜೊತೆಗೆ ತಾಳೆ ಹಾಕಿ ರೋಗದ ನಿರ್ಣಯ ಮಾಡಲಾಗುತ್ತದೆ. ಈ ರೋಗ ನಿರ್ಣಯ ಮಾಡಲು ಫಿಸಿಷಿಯನ್, ಮೂತ್ರಪಿಂಡ ತಜ್ಞರು, ನೇಪ್ರಾಲಾಜಿಸ್ಟ್, ನರರೋಗತಜ್ಞರು, ಹೃದ್ರೋಗ ತಜ್ಞರು, ಚರ್ಮರೋಗ ತಜ್ಞರು, ಅನ್ನನಾಳ ತಜ್ಞರು ಎಲ್ಲರೂ ಒಟ್ಟು ಸೇರಿ ವಿಚಾರ ವಿನಿಮಯ ಮಾಡಿ ರೋಗದ ಲಕ್ಷಣ ಮತ್ತು ಚರಿತ್ರೆಗಳನ್ನು ಕೂಲಂಕೂಷವಾಗಿ ಅಧ್ಯಯನ ಮಾಡಿ ಅತಿಯಾದ ರೋಗದ ನಿರ್ಣಯವನ್ನು ಮಾಡುತ್ತಾರೆ. ಒಮ್ಮೆ ರೋಗದ ನಿರ್ಣಯ ಮಾಡಿ ರೋಗದ ಮೂಲವನ್ನು ಪತ್ತೆ ಮಾಡಿದ ಬಳಿಕ ರೋಗದ ಚಿಕಿತ್ಸೆ ಸುಲಭವಾಗುತ್ತದೆ.

ಚಿಕಿತ್ಸೆ ಪಡೆಯದಿದ್ದಲ್ಲಿ ಉಂಟಾಗುವ ತೊಂದರೆಗಳೇನು:

 1. ರಕ್ತಹೀನತೆ, ಆಂತರಿಕ ರಕ್ತಸ್ರಾವ, ಆಂತರಿಕ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಇರುತ್ತದೆ.
 2. ರಕ್ತನಾಳಗಳ ಉರಿಯೂತ ಉಂಟಾಗಬಹುದು
 3. ಮೂತ್ರಪಿಂಡದ ಶಾಶ್ವತ ವೈಫಲ್ಯ ಮತ್ತು ಹಾನಿ ಉಂಟಾಗಬಹುದು
 4. ಹೃದಯ ರಕ್ತನಾಳದ ಕಾಯಿಲೆಗಳು ಬರುತ್ತದೆ. ಹೃದಯದ ಸ್ನಾಯುಗಳ ಉರಿಯೂತ ಉಂಟಾಗಿ ಹೃದಯಾಘಾತದ ಅಪಾಯ ವೃದ್ಧಿಸುತ್ತದೆ.
 5. ತಲೆನೋವು, ತಲೆಸುತ್ತುವಿಕೆ ಮತ್ತು ಪಾಶ್ರ್ವವಾಯು ಕೂಡಾ ಉಂಟಾಗಬಹುದು.
  ಈ ಎಲ್ಲಾ ಕಾರಣಗಳಿಂದ ಸಕಾಲದಲ್ಲಿ ಎಚ್ಚೆತ್ತು ಸೂಕ್ತ ತಜ್ಞ ವೈದ್ಯರ ಬಳಿ ಸಕಲಿಕವಾಗಿ ಪರಿಪೂರ್ಣ ಚಿಕಿತ್ಸೆ ಪಡೆಯತಕ್ಕದು.

ಚಿಕಿತ್ಸೆ ಹೇಗೆ?

ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ರೋಗದ ಲಕ್ಷಣಗಳು ಮತ್ತು ಅವುಗಳ ತೀವ್ರತೆಯನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೆರಳಿದ ದೇಹದ ರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸಲು ಬೇಕಾದ ಔಷಧಿ ನೀಡಲಾಗುತ್ತದೆ. ಈ ಚಿಕಿತ್ಸೆ ಬಗ್ಗೆ ಇನ್ನು ಗೊಂದಲ ಇದೆ. ಲೂಪಸ್ ಕಾರಣದಿಂದ ಉಂಟಾದ ನೋವು, ಉರಿಯೂತ, ಜ್ವರಗಳನ್ನು ನಿಯಂತ್ರಿಸಲು ಬೇಕಾದ ಔಷಧಿ ನೀಡಲಾಗುತ್ತದೆ. ಯಾವ ಕಾರಣಕ್ಕೆ ಲೂಪಸ್ ಉಂಟಾಗುತ್ತದೆ ಎಂದು ಪತ್ತೆ ಹಚ್ಚಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡಲಾಗುತ್ತದೆ. ನಿರಂತರ ವ್ಯಾಯಾಮ, ಯೋಗ, ವೃತ್ತಿ ಈಜುವಿಕೆ, ಸೈಕ್ಲಿಂಗ್ ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ಚಿಕಿತ್ಸೆಯಲ್ಲಿ ನೀಡುತ್ತಾರೆ. ಈ ರೀತಿ ಮಾಡಿ ಸ್ನಾಯುಗಳ ಆರೋಗ್ಯ ಕಾಪಾಡಲಾಗುತ್ತದೆ. ಸ್ಟಿರಾಯ್ಡು, ಹೈಡ್ರಾಕ್ಸಿ ಕೊಲೋಕ್ವಿನ್, ಸೈಕ್ಲೊಸ್ಟೋರಿನ್, ಅಜಾಥಿಯೋಪ್ರಿನ್ ಮುಂತಾದ ದೇಹದ ರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸುವ ಔಷಧಿಯನ್ನು ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಬಳಸುತ್ತಾರೆ.

ಕೊನೆಮಾತು:
ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ ದೇಹದ ಹೆಚ್ಚಿನ ಎಲ್ಲಾ ಅಂಗಾಂಗಗಳನ್ನು ಆವರಿಸುವ ಕಾರಣದಿಂದ ಈ ರೋಗಕ್ಕೆ ಸಿಸ್ಟೆಮಿಕ್ ಲೂಪಸ್ ಎರಿಥೆ ಮಾಟೋಸಿಸ್ ಎಂಬ ಹೆಸರು ಬಂದಿದೆ. ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಅತ್ಯಂತ ಸಂಕೀರ್ಣ ವ್ಯವಸ್ಥೆಯಾಗಿದ್ದು, ನಮ್ಮ ದೇಹದೊಳಗೆ ಸೇರುವ ಯಾವುದೇ ಆಂಟಿಜೆನ್ (ಬ್ಯಾಕ್ಟಿರಿಯಾ, ವೈರಸ್ ಮತ್ತು ಫಂಗಸ್) ಮೂಲಗಳಿಂದ ಅಥವಾ ಪ್ರತಿಜನಕಗಳ ವಿರುದ್ಧ ಹೋರಾಡುತ್ತದೆ. ಈ ಸಂದರ್ಭಗಳಲ್ಲಿ ರಕ್ಷಣೆ ಪಡೆಯಲು ಈ ಪ್ರತಿಜನಕಗಳ ವಿರುದ್ಧ ಪ್ರತಿಕಾಯ ಅಥವಾ ಆಚಿಟಿಬಾಡಿಗಳನ್ನು ಉತ್ಪಾದಿಸಿ ದೇಹದಲ್ಲಿ ದೇಹದಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ಮುಂದೆ ಅದೇ ಪ್ರತೀ ದೇಹಕ್ಕೆ ಸೋರಿದಾಗ ಅವುಗಳ ವಿರುದ್ಧ ಉಗ್ರವಾಗಿ ಕಾದಾಡಿ ಅವುಗಳನ್ನು ಹಿಮ್ಮೆಟ್ಟಿಸಿ ದೇಹವನ್ನು ರಕ್ಷಿಸುತ್ತದೆ. ಆದರೆ ಕೆಲವೊಮ್ಮೆ ದೇಹದ ರಕ್ಷಣಾ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೂ ಪ್ರತಿಜನಕಗಳು(ಆಂಟಿಜೆನ್) ಮತ್ತು ತಮ್ಮದೇ ದೇಹದ ಆರೋಗ್ಯವಂತ ಅಂಗಾಂಗಳ ನಡುವಿನ ವ್ಯತ್ಯಾಸವನ್ನು ಕಂಡು ಹಿಡಿಯಲು ಸಾಧ್ಯವಾಗದೇ ಹೋಗುತ್ತದೆ. ಈ ಸಂದರ್ಭಗಳಲ್ಲಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ನಮ್ಮದೇ ದೇಹದ ಆರೋಗ್ಯಕರ ಅಂಗಾಂಗಳ ವಿರುದ್ಧವೇ ಆಂಟಿಬಾಡಿ ಅಥವಾ ಪ್ರತಿಕಾಯಗಳನ್ನು ಉತ್ಪಾದಿಸುವಂತೆ ನಿರ್ದೇಶಿಸುತ್ತದೆ. ಈ ಕಾರಣದಿಂದ ನಮ್ಮದೇ ದೇಹದ ಅಂಗಾಂಶಗಳ ಮೇಲೆ ಈ ಪ್ರತಿಕಾಯಗಳು ದಾಳಿ ಮಾಡಿ ನೋವು ಉರಿಯೂತ ವೇದನೆ ಉಂಟುಮಾಡಿ ಅಂಗಾಂಗಳನ್ನು ಹಾಳು ಮಾಡುತ್ತದೆ. ಇದು ದೇಹದ ಎಲ್ಲಾ ಅಂಗಾಂಗಳಿಗೆ ವ್ಯಾಪಿಸಿದಾಗ ಅದನ್ನು ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಿನ್ ಎಂದು ಕರೆಯುತ್ತಾರೆ. ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ರೋಗದ ತೀವ್ರತೆ ಮತ್ತು ಲಕ್ಷಣಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಸಂಪೂರ್ಣವಾಗಿ ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ಜನರು ಅರಿತು ವೈದ್ಯರ ಜೊತೆ ಸಹಕರಿಸಿದಲ್ಲಿ ಚಿಕಿತ್ಸೆ ನೀಡಲು ಹೆಚ್ಚು ಸುಲಭವಾಗಬಹುದು.

ಡಾ|| ಮುರಲೀ ಮೋಹನ್‍ಚೂಂತಾರ
MDS,DNB,MOSRCSEd(U.K), FPFA, M.B.A
ಮೊ : 9845135787
[email protected]

Related Posts

Leave a Reply

Your email address will not be published.