ನಾವೆಲ್ಲ ಒಂದಾಗಿ ಪಕ್ಷ, ಸಂಘಟನೆ, ದೇಶವನ್ನು ಕಟ್ಟೋಣ : ಯತ್ನಾಳ್

ಪುತ್ತೂರು: ನಡೆದಿರುವ ಘಟನೆಯನ್ನು ಮರೆತು ಮತ್ತೊಮ್ಮೆ ನಾವೆಲ್ಲ ಒಂದಾಗಿ ಪಕ್ಷ, ಸಂಘಟನೆ, ದೇಶವನ್ನು ಕಟ್ಟೋಣ ಎಂದು ವಿಜಯಪುರ ನಗರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಣೆಗಾಗಿ ಪುತ್ತೂರಿಗೆ ಆಗಮಿಸಿದ್ದ ಯತ್ನಾಳ್ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜಕೀಯ ವ್ಯವಸ್ಥೆಯಲ್ಲಿ ನನಗೂ ಇಂತಹ ಅನುಭವ ಆಗಿದೆ. ಈಗ ಎನು ಘಟನೆ ಆಗಿದೆಯೋ ಅದನ್ನು ಮತ್ತೆ ಮತ್ತೆ ಕೆದಕುವ ಬದಲು ನಾವು ಒಂದಾಗಬೇಕು. ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ನಾನು ಹೇಗೆ ಎಲ್ಲವನ್ನು ನಿಯಂತ್ರಣ ಮಾಡಿ ಗೆದ್ದು ಬಂದಿದ್ದೇನೋ ಅದೇ ರೀತಿ ಇಲ್ಲೂ ಸಹ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ, ಸಂಘಪರಿವಾರಕ್ಕೆ ಕೆಟ್ಟ ಹೆಸರು ಬಾರದ ರೀತಿಯಲ್ಲಿ ನಾವೆಲ್ಲ ಸೇರಿ ಒಂದಾಗೋಣ ಎಂದು ಯತ್ನಾಳ್ ಕಾರ್ಯಕರ್ತರಲ್ಲಿ ವಿನಂತಿ ಮಾಡಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
