ಕತ್ತು ಕೊಯ್ದು ಫೈನಾನ್ಶಿಯರ್ ಕಗ್ಗೊಲೆ: ಆರೋಪಿ ಗೋವಾದಲ್ಲಿ ಸೆರೆ
ಕುಂದಾಪುರ: ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ (33) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಜೇಂದ್ರ ಶೆಟ್ಟಿಯವರ ಫೈನಾನ್ಸ್ ಸಂಸ್ಥೆಯ ಪಾಲುದಾರ ಅನೂಪ್ ಶೆಟ್ಟಿ ಹಾಗೂ ಆತ ಪರಾರಿಯಾಗಲು ಬಳಸಿದ್ದ ಕಾರನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಗೋವಾದಲ್ಲಿ ವಶಕ್ಕೆ ಪಡೆದಿದ್ದಾರೆ. ಇದೀಗ ಆರೋಪಿಯನ್ನು ವಾಪಾಸ್ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.ಶುಕ್ರವಾರ ತಡರಾತ್ರಿ ಅಜೇಂದ್ರ ಶೆಟ್ಟಿಯವರ ಮೃತದೇಹ ಅವರ ಫೈನಾನ್ಸ್ ಕಚೇರಿಯಲ್ಲೇ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಅಜೇಂದ್ರ ಸಹೋದರ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕಿಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ಆರಂಭದಿಂದಲೂ ಫೈನಾನ್ಸ್ ಪಾಲುದಾರ ಅನೂಪ್ ಶೆಟ್ಟಿಯ ನಡೆಯ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ಹತ್ಯೆಯಾದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಲ್ಲದೇ ಪರಾರಿಯಾಗಲು ಅಜೇಂದ್ರ ಅವರ ಹೊಸ ಕಾರನ್ನೇ ಬಳಸಿಕೊಂಡಿದ್ದನು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಟೋಲ್ಗೇಟ್ ಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯು ಉತ್ತರಕನ್ನಡ ಜಿಲ್ಲೆಯತ್ತ ಹೋಗಿರುವುದು ಖಚಿತಪಡಿಸಿಕೊಂಡಿದ್ದಾರೆ. ಕುಂದಾಪುರ ಉಪವಿಭಾಗ ವ್ಯಾಪ್ತಿಯ ಪೊಲೀಸರು ಎರಡು ತಂಡಗಳಾಗಿ ಆರೋಪಿಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಗೂ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಗೋವಾದಲ್ಲಿ ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಹಣಕಾಸಿನ ವ್ಯವಹಾರ ಹಾಗೂ ಹೊಸ ಕಾರು ಖರೀದಿಯ ಬಗ್ಗೆ ವೈಷಮ್ಯದಿಂದಾಗಿ ಕೊಲೆ ನಡೆಸಲಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.