ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ : ನೀರಿನ ಬಿಲ್ ಗೊಂದಲ, ಅಸಂವಿಧಾನಿಕ ಪದ ಬಳಕೆ
ಬಂಟ್ವಾಳ: ನೀರಿನ ಬಿಲ್ ಗೊಂದಲ, ಕ್ರಿಯಾಯೋಜನೆ ತಯಾರಿಕೆಯಲ್ಲಿ ತಾರತಮ್ಯ, ಪೌರಕಾರ್ಮಿಕ ದಿನಾಚರಣೆ ಊಟದ ವಿಚಾರ, ಅಸಂವಿಧಾನಿಕ ಪದ ಬಳಕೆ..
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜಟಾಪಟಿಗೆ ಕಾರಣವಾದ ಮುಖ್ಯಾಂಶಗಳು..
ಆದ್ಯತೆಯ ಕಾಮಗಾರಿ ಎಂದು ಹೇಳಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹಣ ಮಾಡಿದ್ದು ಬಿಟ್ಟರೆ ಅಭಿವೃದ್ದಿ ಕಾರ್ಯ ಏನು ಮಾಡಿಲ್ಲ ಎಂದು ವಿಪಕ್ಷ ಸದಸ್ಯ ಹರಿಪ್ರಸಾದ್ ಹೇಳಿಕೆ ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತು. ಈ ಸಂದರ್ಭ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆದು ಸಭೆ ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಯಿತು. ಆದ್ಯತೆಯ ಕಾಮಗಾರಿ ಎಂದರೇನು? ಎನ್ನುವ ಪ್ರಶ್ನೆಗೆ ಉತ್ತರ ನೀಡಿ ಎಂದು ಹರಿಪ್ರಸಾದ್ ಪಟ್ಟು ಹಿಡಿದರು. ಸದಸ್ಯರ ಗಮನಕ್ಕೆ ತಾರದೆ ನಿಮಗೆ ಬೇಕಾದಾಗೆ ಪಟ್ಟಿ ತಯಾರಿಸಲಾಗಿದೆ ಎಂದು ವಿಕ್ಷ ಸದಸ್ಯ ಗೋವಿಂದ ಪ್ರಭು ಆರೋಪಿಸಿದರು. ವೈಯಕ್ತಿಕ ಆರೋಪಕ್ಕೆ ಸದನದ ಸಮಯ ವ್ಯರ್ಥ ಮಾಡುವುದು ಬೇಡ ಎಂದು ಆಡಳಿತ ಪಕ್ಷದ ಸದಸ್ಯ ಗಂಗಾಧರ ಪೂಜಾರಿ ಸಲಹೆ ನೀಡಿದರು. ನಾವು ಮಾಡುವ ಅಭಿವೃದ್ಧಿ ಕೆಲಸಕ್ಕೆ ನೀವು ಸಹಕಾರ ನೀಡಿದರೆ ಮಾತ್ರ ಪುರಸಭೆಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಅಧ್ಯಕ್ಷ ಮಹ್ಮಮದ್ ಶರೀಫ್ ವಿಪಕ್ಷ ಸದಸ್ಯರಿಗೆ ಕಿವಿಮಾತು ಹೇಳಿ ಚರ್ಚೆಗೆ ತೆರೆ ಎಳೆದರು.
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಕೋವಿಡ್ ಸಂಕಷ್ಟದಲ್ಲಿ ಜನರು ಪರಿತಪಿಸುತ್ತಿದ್ದು ಇಂತಹ ಸಂದರ್ಬದಲ್ಲೂ ತಿಂಗಳಿಗೆ ಎರಡು ಮೂರು ಸಾವಿರ ನೀರಿನ ಬಿಲ್ ಪಾವತಿ ಮಾಡುತ್ತಿದ್ದಾರೆ. ನೀರು ಕುಡಿಯದೆ ನಾವು ಬಿಲ್ ಪಾವತಿಸ ಬೇಕಾ? ಎಂದು ಆಡಳಿತ ಪಕ್ಷದ ಸದಸ್ಯ ಜನಾರ್ದನ ಚೆಂಡ್ತಿಮಾರ್ ಪ್ರಶ್ನಿಸಿದರು. ಪುರಸಭೆ ವ್ಯಾಪ್ತಿಯಲ್ಲಿರುವ ಅನಧಿಕೃತ ಪೈಪ್ ಲೈನ್ಗಳ ಸಂಪರ್ಕ ಕಡಿತಗೊಳಿಸಲಾಗಿದೆಯೇ ಎಂದು ವಾಸು ಪೂಜಾರಿ ಪ್ರಶ್ನಿಸಿದರು. ಅಧ್ಯಕ್ಷನಾದವನಿಗೆ ಪುರಸಭೆಯಲ್ಲಿ ಗೌರವ ಇಲ್ಲ, ಅನಧಿಕೃತ ಪೈಪ್ಲೈನ್ ಕಟ್ ಮಾಡಲು ನನಗೆ ಆಗುವುದಿಲ್ಲ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅಧ್ಯಕ್ಷ ಮಹಮ್ಮದ್ ಶರೀಫ್ ಅಳಲು ತೋಡಿಕೊಂಡರೆ, ಈ ಬಾರಿ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗಿರುವುದು ಬೇಸರದ ತಂದಿದೆ, ಸದಸ್ಯರಿಗೆ ಬೆಲೆ ಇಲ್ಲದಿದ್ದರೆ ನಮ್ಮ ಗತಿ ಏನು ಎಂದು ವಾಸುಪೂಜಾರಿ ಧ್ವನಿಗೂಡಿಸಿದರು.
ಬೀದಿ ದೀಪಗಳಿಗೆ ಬಲ್ಬ್ ಹಾಕಿ ಕೇವಲ ಒಂದು ತಿಂಗಳಿನಲ್ಲಿ ಕೆಟ್ಟು ಹೋಗಿದೆ. ದುರಸ್ತಿ ಮಾಡುವವರಿಗೆ ಪೆÇೀನ್ ಮಾಡಿದರೆ ಪೆÇೀನ್ ರಿಸಿವ್ ಮಾಡುದಿಲ್ಲ ಎಂದು ಸದಸ್ಯರು ಆರೋಪಿಸಿದರು. ಚರ್ಚೆಯ ವೇಳೆಗೆ ಅಧಿಕಾರಿಯೊಬ್ಬರನ್ನು ಉದ್ದೇಶಿಸಿ ಸದಸ್ಯರೊಬ್ಬರು ಅಸಂವಿಧಾನಿಕ ಪದ ಪ್ರಯೋಗ ಮಾಡಿದ್ದು ಸದಸ್ಯರಲ್ಲಿ ಇರಿಸು ಮುರಿಸು ಉಂಟು ಮಾಡಿತು. ಸದಸ್ಯನ ಈ ವರ್ತನೆಗೆ ಅಧ್ಯಕ್ಷ ಹಾಗೂ ಇತರ ಸದಸ್ಯರು ಟೀಕೆ ವ್ಯಕ್ತಪಡಿಸಿದ್ದು ಇಂತಹ ಶಬ್ದವನ್ನು ಸಭೆಯಲ್ಲಿ ಬಳಸದಂತೆ ತಾಕೀತು ಮಾಡಿದರು. ಇದೇ ವೇಳೆ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಆ ಸದಸ್ಯ ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಅಬ್ಬರಿಸಿದ್ದು ಇತರ ಸದಸ್ಯರಿಗೆ ಮುಜುಗರ ಉಂಟು ಮಾಡಿತು. ಪೌರಕಾರ್ಮಿಕ ದಿನಾಚರಣೆಯಂದು ಊಟದ ವಿಚಾರವಾಗಿ ಉಂಟಾದ ವಿವಾದ ಸಭೆಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿತು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಸದಸ್ಯರಾದ ರಾಮಕೃಷ್ಣ ಆಳ್ವ, ಹರಿಪ್ರಸಾದ್, ಸಿದ್ದೀಕ್ ಗುಡ್ಡೆಯಂಗಡಿ, ಗಂಗಾಧರ ಪೂಜಾರಿ, ಮೊನಿಷ್ ಅಲಿ, ವಿದ್ಯಾವತಿ, ದೇವಕಿ, ಶಶಿಕಲಾ, ಹಸೈನಾರ್, ಮಹಮ್ಮದ್ ನಂದರಬೆಟ್ಟು, ಇದ್ರಿಸ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಅಧಿಕಾರಿಗಳಾದ ಡೊಮೆನಿಕ್ ಡಿಮೆಲ್ಲೋ, ಉಮಾವತಿ, ಮೀನಾಕ್ಷಿ ಪೂರಕ ಮಾಹಿತಿ ನೀಡಿದರು.