ಅಗ್ನಿಪಥದಲ್ಲಿ ನಿರುದ್ಯೋಗ ನಿವಾರಣೆ ಸಾಧ್ಯವಿಲ್ಲ

ನಿರುದ್ಯೋಗ ನಿವಾರಿಸದ, ಸೈನಿಕರನ್ನು ತಯಾರಿಸದ ಅಗ್ನಿಪಥ ಯೋಜನೆಯನ್ನು ಇಂಡಿಯಾ ಮೈತ್ರಿಕೂಟ ಗೆದ್ದು ರದ್ದು ಮಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಅವರು ಸೇನಾಧ್ಯಕ್ಷರೂ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆದಿದ್ದಾರೆ. ಅಗ್ನಿಪಥ ಯೋಜನೆಯ ನಿಸ್ಸಾರವನ್ನು, ಅನನುಕೂಲವನ್ನು ಅವರು ಅದರಲ್ಲಿ ವಿವರಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಮತ್ತು ಅಗ್ನಿಪಥ ಎಂಬ ಕೆಲಸಗೇಡಿ ಯೋಜನೆಯನ್ನು ರದ್ದು ಪಡಿಸಲಿದೆ ಎಂದಿದ್ದಾರೆ.

ಏನೀ ಅಗ್ನಿಪಥ್ ಇಲ್ಲವೇ ಅಗ್ನಿಪಥ ಯೋಜನೆ? ಇದು ನಾಲ್ಕು ವರುಷದ ಮಟ್ಟಿಗೆ ಮಾತ್ರ ಅಗ್ನಿವೀರ ಇಲ್ಲವೇ ಅಗ್ನಿವೀರ್ ಎಂದು ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಯೋಜನೆಯಾಗಿದೆ. 2022ರಲ್ಲಿ ಒಕ್ಕೂಟ ಸರಕಾರವು ಇದನ್ನು ಘೋಷಿಸಿದಾಗ ಇದರ ವಿರುದ್ಧ ದೇಶದ ಎಲ್ಲ ಕಡೆ ಪ್ರತಿಭಟನೆಗಳು ಆದವು, ಮುಖ್ಯವಾಗಿ ಬಿಹಾರ ಮತ್ತು ಉತ್ತರ ಭಾರತದ ಕೆಲವು ಕಡೆ ಹಿಂಸಾತ್ಮಕ ಪ್ರತಿಭಟನೆಗಳೂ ನಡೆದವು. ಭಾರತ ಮಾತ್ರವಲ್ಲ, ನೇಪಾಳ ಕೂಡ ಇದರ ವಿರುದ್ಧ ಧ್ವನಿ ಎತ್ತಿತ್ತು.


ಭಾರತದ ಭೂಸೇನೆ, ನೌಕಾ ಪಡೆ ಮತ್ತು ವಾಯು ಪಡೆ ಮೂರಕ್ಕೂ ಅಗ್ನಿವೀರ್ ನೇಮಕಾತಿ ಈಗಾಗಲೇ ಸ್ವಲ್ಪ ನಡೆದಿದೆ. ಇದು ನಾಲ್ಕು ವರುಷದ ಗುತ್ತಿಗೆ ನೌಕರಿ ಇದ್ದಂತೆ. ಇಲ್ಲಿ ಸೇನೆಯ ಆಯಾ ನೆಲ, ಜಲ, ವಾಯು ವಿಭಾಗದ ಪರಿಚಯ ಆಗುತ್ತದೆ. ಸ್ವಲ್ಪ ಮಟ್ಟಿಗೆ ತರಬೇತಿಯೂ ದೊರೆಯುತ್ತದೆ. ಆದರೆ ಅವರು ಸೈನಿಕರಾಗಿ ಇರುವುದಿಲ್ಲ. ನಾಲ್ಕು ವರುಷದ ಬಳಿಕ ಅವರು ಮತ್ತೆ ನಿರುದ್ಯೋಗಿ ಮತ್ತು ಅತ್ತ ಸೈನಿಕರೂ ಅಲ್ಲ, ಮಾಜೀ ಸೈನಿಕರೂ ಅಲ್ಲ. ಒಂದಷ್ಟು ಹಣ ಸಿಗುವುದರ ಹೊರತಾಗಿ ಅವರಿಗೆ ಮಾಜೀ ಸೈನಿಕರು ಎಂಬ ಯಾವುದೇ ಸವಲತ್ತು ಕೂಡ ಸಿಗುವುದಿಲ್ಲ.


ಹಾಗಾದರೆ ಈ ಅಗ್ನಿವೀರರು ನಾಲ್ಕು ವರುಷದ ಬಳಿಕ ಏನಾಗುತ್ತಾರೆ. ಕಾಯಂ ನೇಮಕಾತಿ ಇಲ್ಲದ್ದರಿಂದ ಸೈನಿಕರಲ್ಲ. 10 ಶೇಕಡಾದವರೆಗೆ ಉಳಿಸಿಕೊಳ್ಳಬಹುದು ಎಂದೂ ಹೇಳಲಾಗಿದೆ. ಅದು ವಶೀಲಿಬಾಜಿ, ಜಾತೀಯ ಮತ್ತು ಭ್ರಷ್ಟಾಚಾರದ ನೇಮಕ ಆಗುತ್ತದೆಯೇ ಹೊರತು ಖಚಿತ ಸೇನಾ ನೇಮಕಾತಿ ಆಗಿರುವುದಿಲ್ಲ. ಒಂದು ರೀತಿಯಲ್ಲಿ ಅಗ್ನಿವೀರರನ್ನು ಮುಂದಿನ ಕಾವಲುಗಾರ ತರಬೇತಿ ಪಡೆಯುವವರು ಎನ್ನಬಹುದು. ಬಹುತೇಕ ಅಗ್ನಿವೀರರು ನಾಲ್ಕು ವರುಷ ಕಳೆದ ಮೇಲೆ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯಬೇಕಾದ ಅನಿವಾರ್ಯತೆ ಇರುತ್ತದೆ. ಏಕೆಂದರೆ ಎಸ್‍ಎಸ್‍ಎಲ್‍ಸಿಯಲ್ಲಿ ಇಲ್ಲವೇ ಪಿಯುಸಿ ಮುಗಿಸಿ ಅವರು ಅಗ್ನಿಪಥ ಯೋಜನೆಯಲ್ಲಿ ಅಗ್ನಿವೀರ ಆಗುವುದರಿಂದ ಅವರ ಕಲಿಕೆಯೂ ಅರ್ಧದಲ್ಲೇ ನಿಂತು ಹೋಗಿರುತ್ತದೆ. ಅದನ್ನು ಮತ್ತೆ ಮುಂದುವರಿಸುವ ವೀರರೂ ಹೆಚ್ಚು ಜನರು ಇರಲಾರರು.


ಅಗ್ನಿವೀರರಾಗಿ ಸೇರಲು 10ನೇ ತರಗತಿ ಪಾಸಾದರೆ ಆಯಿತು; ಸೇನೆಯ ತಾಂತ್ರಿಕ ವಿಭಾಗದಲ್ಲಿ ಅಗ್ನಿವೀರರಾಗಿ ಸೇರಲು 12ನೇ ತರಗತಿ ಮುಗಿಸಿರಬೇಕು. ಈಗ ತಿದ್ದುಪಡಿ ಮಾಡಿದ ನಿಯಮದಂತೆ ಐಟಿಐ ಮಾಡಿದವರು ಸೇನೆಯ ನುರಿತ ತಾಂತ್ರಿಕ ವಿಭಾಗಕ್ಕೂ ಸೇರ್ಪಡೆ ಆಗಬಹುದು. ಆದರೆ ಅದೂ ನಾಲ್ಕು ವರುಷದ ಒಪ್ಪಂದ. ಅನಂತರ? ಅಗ್ನಿವೀರರಾಗಿ ಸೇರಲು ಇದ್ದ 21 ಹೆಚ್ಚಿನ ವಯೋಮಿತಿಯನ್ನು ಐಟಿಐ ಮಾಡಿದವರಿಗಾಗಿ 23ಕ್ಕೆ ಏರಿಸಲಾಗಿದೆ. ಅಗ್ನಿವೀರರಲ್ಲಿ 50 ಶೇಕಡಾದಷ್ಟು ಜನರನ್ನು ಕಾಯಂ ಮಾಡಬೇಕು ಎಂಬ ಒಂದು ಕೂಗು ಇದೆ. ಅದು ಸದ್ಯ ಆಗಿಲ್ಲ. ಏನೇ ಆದರೂ ಈ ನಾಲ್ಕು ವರುಷದ ಒಪ್ಪಂದದ ಸೈನಿಕ ವೃತ್ತಿ ಯುವ ಜನಾಂಗವನ್ನು ಅತಂತ್ರದಲ್ಲೇ ನೇತಾಡುವಂತೆ ಮಾಡುವ ಯೋಜನೆಯೆಂದೇ ಪರಿಗಣಿಸಬೇಕಾಗುತ್ತದೆ.


ನೇಪಾಳವು ಅಗ್ನಿಪಥ ಯೋಜನೆಯನ್ನು ವಿರೋಧಿಸಲಿಕ್ಕೆ ಕಾರಣವಿದೆ. ಬ್ರಿಟಿಷರ ಕಾಲದಲ್ಲೇ ಆರಂಭವಾದ ಸೇನೆಯ ಗೂರ್ಖಾ ರೆಜಿಮೆಂಟಿನಲ್ಲಿ ಸಾಕಷ್ಟು ನೇಪಾಳದ ಗೂರ್ಖಾಗಳಿಗೆ ಕೂಡ ಅವಕಾಶ ನೀಡಲಾಗಿದೆ. ಅವರು ಭಾರತೀಯ ನಿವೃತ್ತ ಸೈನಿಕರ ಪಿಂಚಣಿ ಸಹಿತದ ಎಲ್ಲ ಅನುಕೂಲಗಳನ್ನು ಪಡೆಯುತ್ತಾರೆ. ಅಗ್ನಿವೀರ ಯೋಜನೆಯಿಂದ ಗೂರ್ಖಾಗಳ ಕಾಯಂ ನೇಮಕಾತಿ ಇಲ್ಲವಾಗಬಹುದು ಎಂಬ ಕಾರಣಕ್ಕೆ ನೇಪಾಳzಲÀ್ಲೂ ಅಗ್ನಿವೀರ ಯೋಜನೆಗೆ ಭಾರೀ ವಿರೋಧ ಎದ್ದಿತ್ತು. ಅಸ್ಸಾಂ ರೈಫಲ್ಸ್‍ನವರು ಕೂಡ ಇದೇ ಕಾರಣಕ್ಕೆ ಅಗ್ನಿಪಥ ಯೋಜನೆ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಿದರು. ಬಿಹಾರ ಮತ್ತು ಅಸ್ಸಾಂ ಮೊದಲಾದ ಕಡೆ ಹಿಂಸಾತ್ಮಕ ಹೋರಾಟಗಳೂ ನಡೆದವು. ಒಕ್ಕೂಟ ಸರಕಾರವು ಅವನ್ನೆಲ್ಲ ಉಡ ಹಿಡಿತದಿಂದ ದಮನ ಮಾಡಿ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದೆ.


ಮಹಾರಾಷ್ಟ್ರದಲ್ಲಿ ಮರಾಠರು ಕೂಡ ಒಂದಷ್ಟು ತೀವ್ರ ಹೋರಾಟವನ್ನು ಮಾಡಿದರು. ಕರ್ನಾಟಕದಲ್ಲಿ ಅಗ್ನಿಪಥ ವಿರೋಧಿಸಿ ಹೋರಾಟ ಸಣ್ಣ ಪ್ರಮಾಣದಲ್ಲಿ ಮಾತ್ರ ನಡೆಯಿತು. ಸೈನಿಕರ ಪ್ರದೇಶ ಕೊಡಗು ಜಿಲ್ಲೆಯಲ್ಲೂ ಹೋರಾಟ ತೀವ್ರವಾಗಿರಲಿಲ್ಲ. ಭಾರತೀಯ ಸೇನೆಯ ಕೆಲವರ ಪ್ರಕಾರ ಅಗ್ನಿವೀರರು ಮೀಸಲು ಸೈನಿಕರಂತೆ ದೇಶದ ಶಕ್ತಿ ಆಗಲಿದ್ದಾರೆ. ಅಗ್ನಿವೀರರಿಗೆ ಪಿಂಚಣಿ ನಿವೃತ್ತ ಸೈನಿಕರ ಸವಲತ್ತು ಸಿಗದಿದ್ದರೂ ನಾಲ್ಕು ವರುಷದವರೆಗೆ 30,000 ರೂಪಾಯಿಯಷ್ಟು ಸಂಬಳ ಮತ್ತು ನಾಲ್ಕು ವರುಷದಲ್ಲಿ ಹೊರ ಬರುವಾಗ 10 ಲಕ್ಷದಷ್ಟು ತೆರಿಗೆಯಿಲ್ಲದ ಸೇವಾ ನಿಧಿ ದೊರೆಯುತ್ತದೆ. ಇದನ್ನು ಪ್ರತಿಪಕ್ಷಗಳ ಕೆಲವರು ಬಿಜೆಪಿಯ ಆರೆಸ್ಸೆಸ್ ತಯಾರಿ ಯೋಜನೆ ಎಂದು ಕೂಡ ಟೀಕಿಸಿದ್ದಿದೆ. ಬಿಜೆಪಿಯ ಪ್ರಕಾರ ಇದು ಆತ್ಮನಿರ್ಭರ ಸಾಕ್ಷಾತ್ ಭಾರತ ನಿರ್ಮಾಣಕ್ಕೆ ರಹದಾರಿಯಂತೆ.


ಆದರೆ ಕಳೆದ ಎರಡೂವರೆ ವರುಷಗಳಲ್ಲಿ ಆ ಬಗೆಯ ಯಾವುದೇ ಸೂಚನೆ ಸಿಕ್ಕಿಲ್ಲ. ಅಗ್ನಿಪಥ ವಿರೋಧಿಸಿ ಹೋರಾಡಿದವರನ್ನು ಅಗ್ನಿವೀರ ನೇಮಕದಿಂದ ದೂರ ಇಡುವ ಕೆಲಸವೂ ವ್ಯವಸ್ಥಿತವಾಗಿ ನಡೆಯಿತು. ಅವರಿಗೆ ಮುಂದೆ ಸೇನಾ ನೇಮಕಾತಿಯೂ ಸಿಗದಂತೆ ಮಾಡಲು ಒಂದು ವರ್ಗವು ತೀವ್ರವಾಗಿ ಪ್ರಯತ್ನ ನಡೆಸಿದೆ. ಅಗ್ನಿವೀರರಾಗಿ ಸೇರ್ಪಡೆಗೊಂಡವರ ನಾಲ್ಕು ವರುಷದ ಗುತ್ತಿಗೆ ಅವಧಿ ಮುಗಿದವರು ಸದ್ಯ ಯಾರೂ ಇಲ್ಲವಾದ್ದರಿಂದ ಅದರ ಸಾಧಕ ಬಾಧÀಕಗಳನ್ನು ಅಗ್ನಿವೀರರಿಂದಲೇ ತಿಳಿದುಕೊಳ್ಳಲು ಯಾವುದೇ ಅವಕಾಶ ಇಲ್ಲ. ಅಗ್ನಿಪಥ ಯೋಜನೆಯ ಬಗೆಗೆ ಬಹುಜನರಲ್ಲಿ ಸಂಶಯ ಇರುವುದಂತೂ ಸತ್ಯ.


ಇತಿಹಾಸ ಕಾಲದಲ್ಲಿ ಸೈನಿಕರು ಯಾರು ಹೆಚ್ಚು ಹಣ ಕೊಡುತ್ತಾರೋ ಆ ಸೇನೆಗೆ ಸೇರುತ್ತಿದ್ದರು, ಉದಾಹರಣೆಗೆ ಕೆಲವು ಸೈನಿಕರು ಕೆಲವೊಮ್ಮೆ ವಿಜಯನಗರ ಸೇನೆಯಲ್ಲಿ ಇದ್ದರೆ ಅವರೇ ಆಮೇಲೆ ಬಿಜಾಪುರದ ಸೇನೆಯಲ್ಲಿ ಇರುತ್ತಿದ್ದರು. ಇದು ಚಾಣಕ್ಯನ ಕಾಲದಿಂದಲೂ ನಡೆದು ಬಂದಿದೆ. ಪುರಾಣದಲ್ಲೂ ಕಂಡು ಬಂದಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಪಾಂಡವರು ಕೌರವರು ಬೇರೆ ಬೇರೆ ರಾಜರ ಪಡೆ ತಮ್ಮ ಜೊತೆ ಇರುವಂತೆ ಮಾಡಲು ಪೈಪೋಟಿ ನಡೆಸಿದ್ದಿದೆ. ಇವರ ಪೈಪೋಟಿಯಿಂದ ಯಾದವ ಸೇನೆಯೇ ಇಬ್ಭಾಗವಾದುದಿದೆ. ಅಗ್ನಿವೀರರ ವಿಷಯದಲ್ಲಿ ಕೂಡ ದೇಶದ ಜನರ ಅಭಿಪ್ರಾಯವು ಇಬ್ಭಾಗವಾಗಿದೆ.

Related Posts

Leave a Reply

Your email address will not be published.