ಮೂಡುಬಿದಿರೆ: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಹೆಗಡೆ: ಕಾಂಗ್ರೆಸ್‌ನಿಂದ ಪ್ರತಿಭಟನೆ ಆಕ್ರೋಶ
ಮೂಡುಬಿದಿರೆ: ಲೋಕಸಭೆಯಲ್ಲಿ 400 ಸದಸ್ಯ ಬಲ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆಂಬ ಹೇಳಿಕೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಭಾವಚಿತ್ರಕ್ಕೆ ಪೊರಕೆಯಲ್ಲಿ ಹೊಡೆಯುವ ಮೂಲಕ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದಿದೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ನಮ್ಮ ದೇಶಕ್ಕೆ ಬೇಕಾದಂತಹ ಸಂವಿಧಾನವನ್ನು ಬರೆದವರು ಅಂಬೇಡ್ಕರ್, ದೇಶವನ್ನು ಬ್ರಿಟಿಷರ ಹಿಡಿತದಿಂದ ಬಿಡಿಸಿ ಜನರು ವಿದ್ಯಾವಂತರಾಗಬೇಕು ಜನರಿಗೆ ಉದ್ಯೋಗ ಸಿಗಬೇಕು, ಬಡತನದಿಂದ ಮುಕ್ತವಾಗಬೇಕು. ಸ್ವಾಭಿಮಾನಿಗಳಾಗಿ ಬದುಕಬೇಕು ಎಂಬ ಚಿಂತನೆಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತರುವಂತಹ ಹೋರಾಟವನ್ನು ಮಾಡಿದವರು ಗಾಂಧೀಜಿ. ಆದರೆ ಯಾವುದೇ ಕಷ್ಟಗಳನ್ನು ಅನುಭವಿಸದೆ ಅಧಿಕಾರಕ್ಕೆ ಏರಿರುವ ಬಿಜೆಪಿ ಸರಕಾರವು ದಿನಕ್ಕೊಂದು ಹ್ಯಾಟ್, ಟೋಪಿ, ಕೂಲಿಂಗ್ ಗ್ಲಾಸ್, ಬಟ್ಟೆ ಹಾಕಿಕೊಂಡು ದೇಶ ಸುತ್ತುವರು. ಇವರಿಗೆ ಮುಂದಿನ ದಿನಗಳಲ್ಲಿ ದೇಶದ ಜನರು ಸರಿಯಾದ ಬುದ್ಧಿಯನ್ನು ಕಲಿಸಲಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಅನಂತ್ ಕುಮಾರ್ ಹೆಗ್ಡೆ ಅನೇಕ ಬಾರಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ್ದು ಈಬಾರಿ ಮತ್ತೊಮ್ಮೆ ಪುನರಾವರ್ತಿಸಿದ್ದಾರೆ, ಈಗ ಇರುವ ಸಂವಿಧಾನ ಹಿಂದೂ ವಿರೋಧಿ, ನಾವು ಬದಲಾಯಿಸುತ್ತೇವೆ ಎಂದು ಭಾರತ ದೇಶದಲ್ಲಿದ್ದುಕೊಂಡೇ ನಮ್ಮ ದೇಶದ ಸಂವಿಧಾನದ ವಿರುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ವಿರುದ್ಧದ ಹೇಳಿಕೆ ನೀಡಿದ್ದು ಈ ಹೇಳಿಕೆಯಿಂದ ಅಸಂಖ್ಯಾತ ಭಾರತೀಯ ದೇಶಪ್ರೇಮಿಗಳ, ದಲಿತ, ಅಲ್ಪಸಂಖ್ಯಾತ ಬಂಧುಗಳ ಭಾವನೆಗೆ ಧಕ್ಕೆ ತಂದಿದೆ, ಇದು ದೇಶದ ಶಾಂತಿ ಸಾಮರಸ್ಯವನ್ನು ಕೆಡಿಸುವ ಪ್ರಯತ್ನವಾಗಿದೆ, ನಾವು ಸಂವಿಧಾನ ಬದಲಿಸಲು ಬಿಡುವುದಿಲ್ಲ, ಈತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ ಮುಖಂಡರಾದ ಚಂದ್ರಹಾಸ ಸನಿಲ್, ಪಿ.ಕೆ.ಥೋಮಸ್, ಸುರೇಶ್ ಪ್ರಭು, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಜಯಕುಮಾರ್ ಶೆಟ್ಟಿ, ಲತೀಫ್, ರಾಜೇಶ್ ಕಡಲಕೆರೆ, ವಸೀರ್ ಪುತ್ತಿಗೆ, ಶಿವಾನಂದ ಪಾಂಡ್ರು, ಗಣೇಶ್ ಮೂಡುಕೊಣಾಜೆ, ವಿವೇಕ್ ಶಿರ್ತಾಡಿ, ಕಿರಣ್ ಕುಮಾರ್ ಬೆಳುವಾಯಿ, ಸತೀಶ್ ಭಂಡಾರಿ, ಅಭಿನಂದನ್ ಬಲ್ಲಾಳ್, ಟಿ.ಎನ್.ಕೆಂಬಾರೆ, ಅರುಣ್ ಕುಮಾರ್ ಶೆಟ್ಟಿ, ಮುರಳೀಧರ, ರಜನಿ, ನಿತಿನ್ ಬೆಳುವಾಯಿ, ಶಾಬಾಝ್ ಬೆಳುವಾಯಿ, ಅಬೂಬಕ್ಕರ್ ಶಿರ್ತಾಡಿ ಮತ್ತಿತರರು ಉಪಸ್ಥಿತರಿದ್ದರು.